Virat & Rohit: ಸೆ.09ರಿಂದ ದುಬೈನಲ್ಲಿ ಆರಂಭಗೊಳ್ಳಲಿರುವ ಏಷ್ಯಾಕಪ್ ಟಿ20 ಟೂರ್ನಿಗೆ ಭಾರತ ತಂಡ ಪ್ರಕಟವಾದ ದಿನದಿಂದಲೂ ಟೀಮ್ ಇಂಡಿಯಾದ ದಿಗ್ಗಜ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ಹೆಸರು ಭಾರೀ ಚರ್ಚೆಯಲ್ಲಿದೆ. ಟೆಸ್ಟ್ ಮತ್ತು ಟಿ20 ಕ್ರಿಕೆಟ್ಗೆ ಸದ್ಯ ನಿವೃತ್ತಿ ಘೋಷಿಸಿರುವ ಸ್ಟಾರ್ ಕ್ರಿಕೆಟಿಗರು, ಈಗ ಏಕದಿನ ಫಾರ್ಮೆಟ್ಗೂ ಗುಡ್ಬೈ ಹೇಳಲು ಸಜ್ಜಾಗಿದ್ದಾರೆ. ಇದಕ್ಕೆ ಬಿಸಿಸಿಐ ಕೂಡ ತಯಾರಿ ಮಾಡಿಕೊಂಡಿದೆ ಎಂಬ ವದಂತಿಗಳು ವ್ಯಾಪಕವಾಗಿ ಕೇಳಿಬಂದಿವೆ. ಈ ಕುರಿತಂತೆ ಸ್ವತಃ ಬಿಸಿಸಿಐನ ಉಪಾಧ್ಯಕ್ಷರೇ ಇದೀಗ ಸ್ಪಷ್ಟನೆ ನೀಡಿದ್ದಾರೆ.
ಕ್ರಿಕೆಟ್ ದಂತಕಥೆಗಳ ನಿವೃತ್ತಿ ಹಾಗೂ ಫೇರ್ವೆಲ್ ಸರಣಿ ಆಡಿಸುವ ವದಂತಿ ಬಗ್ಗೆ ಪ್ರತಿಕ್ರಿಯಿಸಿರುವ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ, "ಇದೆಲ್ಲವೂ ಸುಳ್ಳು. ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಇನ್ನೂ ಏಕದಿನ ಪಂದ್ಯಗಳನ್ನು ಆಡುತ್ತಿದ್ದಾರೆ. ಬಿಸಿಸಿಐ ಯಾವುದೇ ಆಟಗಾರನ ಮೇಲೆ ಎಂದಿಗೂ ಒತ್ತಡ ಹೇರುವುದಿಲ್ಲ. ಯಾವೊಬ್ಬ ಕ್ರಿಕೆಟಿಗನು ತಾನು ಸ್ವಇಚ್ಛೆಯಿಂದ ನಿವೃತ್ತಿ ತೆಗೆದುಕೊಳ್ಳಲು ಬಯಸುತ್ತಾರೋ, ಅದನ್ನು ಸ್ವಾಗತಿಸುತ್ತದೆಯೇ ಹೊರತು ಎಂದಿಗೂ ಒತ್ತಾಯಿಸುವುದಿಲ್ಲ. ಈ ನಿರ್ಧಾರಗಳು ಆಟಗಾರರ ಮೇಲಿದೆ. ಮತ್ತು ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುವುದು ಅವರಿಗೆ ಬಿಟ್ಟದ್ದು" ಎಂದಿದ್ದಾರೆ.
"ಕೊಹ್ಲಿ ಆಟದಲ್ಲಿ ಅತ್ಯಂತ ಫಿಟ್ ಆಗಿದ್ದಾರೆ. ಇನ್ನು ರೋಹಿತ್ ಉತ್ತಮ ಇನ್ನಿಂಗ್ಸ್ ನೀಡುವಲ್ಲಿ ಒಬ್ಬರಾಗಿದ್ದಾರೆ. ಸಮಯ ಬಂದಾಗ, ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕೆಂದು ನಾವು ಅವರಿಗೆ ಮಾರ್ಗದರ್ಶನ ನೀಡುತ್ತೇವೆ. ಈಗಾಗಲೇ ಹಲವೆಡೆ ಕೊಹ್ಲಿ ಮತ್ತು ರೋಹಿತ್ರ ವಿದಾಯಗಳ ಬಗ್ಗೆ ಮಾತನಾಡುತ್ತಿದ್ದಾರೆ. ಅದೆಲ್ಲವೂ ಸುಳ್ಳು. ಸದ್ಯ ಕೊಹ್ಲಿ ತಮ್ಮ ವೃತ್ತಿಜೀವನವನ್ನು ಮುಂದುವರಿಸುತ್ತ ಸಾಗಿದ್ದಾರೆ. ರೋಹಿತ್ ಶರ್ಮಾ ಉತ್ತಮ ಕಮ್ಬ್ಯಾಕ್ನತ್ತ ಎದುರುನೋಡುತ್ತಿದ್ದಾರೆ" ಎಂದರು.
ಇದೇ ಅಕ್ಟೋಬರ್ 19ರಿಂದ 25 ರವರೆಗೆ ನಡೆಯಲಿರುವ ಏಕದಿನ ಟೂರ್ನಿಯಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯಲಿದೆ. ಈ ಸರಣಿಯಲ್ಲಿ ಕೊಹ್ಲಿ ಮತ್ತು ರೋಹಿತ್ ತಂಡಕ್ಕೆ ಮರಳುವ ನಿರೀಕ್ಷೆಯಿದೆ,(ಏಜೆನ್ಸೀಸ್).