ಕ್ರೀಡೆ

ಬಿಸಿಸಿಐನಿಂದ ಮತ್ತೊಂದು ಮೆಗಾ ಡೀಲ್​, ಖಜಾನೆಗೆ ಹರಿದುಬಂತು ಭಾರಿ ಮೊತ್ತ

ನವದೆಹಲಿ: ಟೀಮ್​ ಇಂಡಿಯಾ ಮುಂದಿನ ಮೂರು ವರ್ಷಗಳಲ್ಲಿ ತವರಿನಲ್ಲಿ ಆಡಲಿರುವ ದ್ವಿಪಯ ಸರಣಿಗಳ ಶೀರ್ಷಿಕೆ ಪ್ರಾಯೋಜಕತ್ವವನ್ನು ಭಾರತದ ಪ್ರತಿಷ್ಠಿತ ಖಾಸಗಿ ಬ್ಯಾಂಕ್​ ಎನಿಸಿರುವ "ಐಡಿಎಫ್​​ಸಿ ಫಸ್ಟ್​ ಬ್ಯಾಂಕ್​'ಗೆ ಬಿಸಿಸಿಐ ನೀಡಿದೆ. ಪ್ರತಿ ಪಂದ್ಯಕ್ಕೆ 4.2 ಕೋಟಿ ರೂ.ನಂತೆ ಒಪ್ಪಂದ ಮಾಡಿಕೊಳ್ಳಲಾಗಿದೆ. 2026ರ ಆಗಸ್ಟ್​ವರೆಗೆ ಭಾರತ ತಂಡ ತವರಿನಲ್ಲಿ ಆಡಲಿರುವ 56 ಪಂದ್ಯಗಳಿಗೆ ಒಟ್ಟು 235.2 ಕೋಟಿ ರೂ. ಬಿಸಿಸಿಐ ಖಜಾನೆ ಸೇರಲಿದೆ.

ಮುಂದಿನ ತಿಂಗಳು ಭಾರತ ತಂಡ ವಿಶ್ವಕಪ್​ಗೆ ಪೂರ್ವ ಸಿದ್ಧತೆಯಾಗಿ ಪ್ರವಾಸಿ ಆಸ್ಟ್ರೆಲಿಯಾ ತಂಡದ ವಿರುದ್ಧ ಆಡಲಿರುವ 3 ಪಂದ್ಯಗಳ ಏಕದಿನ ಸರಣಿಯಿಂದ ಈ ಶೀರ್ಷಿಕೆ ಪ್ರಾಯೋಜಕತ್ವ ಒಪ್ಪಂದ ಜಾರಿಗೆ ಬರಲಿದೆ. ಈ ಹಿಂದೆ ಶೀರ್ಷಿಕೆ ಪ್ರಾಯೋಜಕತ್ವ ಹೊಂದಿದ್ದ "ಮಾಸ್ಟರ್​ ಕಾರ್ಡ್​' ಪ್ರತಿ ಪಂದ್ಯಕ್ಕೆ 3.8 ಕೋಟಿ ರೂ. ಪಾವತಿಸುತ್ತಿತ್ತು. ಹೊಸ ಒಪ್ಪಂದ ಅದಕ್ಕಿಂತ 40 ಲಕ್ಷ ರೂ. ಅಧಿಕವಾಗಿದೆ. ಹಕ್ಕು ಖರೀದಿಗೆ ಬಿಸಿಸಿಐ 2.4 ಕೋಟಿ ರೂ. ಮೂಲಬೆಲೆ ನಿಗದಿಪಡಿಸಿತ್ತು.

ಮುಂಬೈ ಮೂಲದ ಐಡಿಎಫ್​​ಸಿ ಫಸ್ಟ್​ ಬ್ಯಾಂಕ್​, ಶೀರ್ಷಿಕೆ ಪ್ರಾಯೋಜಕತ್ವ ಬಿಡ್ಡಿಂಗ್​ ರೇಸ್​ನಲ್ಲಿದ್ದ ಸೋನಿ ಸ್ಪೋರ್ಟ್ಸ್​ ಅನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿದೆ. ಸೋನಿ ಸ್ಪೋರ್ಟ್ಸ್​ ಸಂಸ್ಥೆ ಮೂಲಬೆಲೆಯಷ್ಟು ಮಾತ್ರ ಬಿಡ್​ ಸಲ್ಲಿಸಿತ್ತು ಎನ್ನಲಾಗಿದೆ.