ಕ್ರೀಡೆ

ಈ ಒಂದು ನಿಯಮ ಬದಲಾವಣೆ ಮೂಲಕ ಐಪಿಎಲ್​ ಫ್ರಾಂಚೈಸಿಗಳಿಗೆ ಬಿಗ್​ ರಿಲೀಫ್​ ನೀಡಿದ ಬಿಸಿಸಿಐ! IPL 2025

IPL 2025: ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದಾಗಿ ಕೆಲ ಕಾಲ ಸ್ಥಗಿತಗೊಂಡಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಮತ್ತೆ ಆರಂಭವಾಗಲಿದೆ. ಮೇ 17 (ಶನಿವಾರ) ರಿಂದ ಪುನಾರಂಭಗೊಳ್ಳಲಿರುವ ಐಪಿಎಲ್​ 18ನೇ ಆವೃತ್ತಿ ಜೂನ್ 3ರವರೆಗೆ ಮುಂದುವರಿಯಲಿದೆ. ಲೀಗ್​ ಮಧ್ಯದಲ್ಲಿ ಕೆಲ ಕಾಲ ರದ್ದಾಗಿದ್ದರಿಂದ ಅನೇಕ ವಿದೇಶಿ ಆಟಗಾರರು ತಮ್ಮ ದೇಶಗಳಿಗೆ ತೆರಳಿದ್ದಾರೆ. ಹೀಗೆ ದೇಶ ತೊರೆದವರಲ್ಲಿ ಐಪಿಎಲ್​ ಆಡಲು ಹಿಂತಿರುಗಿದವರ ಸಂಖ್ಯೆ ತುಂಬಾ ಕಡಿಮೆ.

ಮುಂದಿನ ತಿಂಗಳು 11ರಿಂದ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್‌ನಲ್ಲಿ ಆಡಲಿವೆ. ಇನ್ನೊಂದೆಡೆ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವೆ ಅಂತಾರಾಷ್ಟ್ರೀಯ ಸರಣಿ ಇದೆ. ಇದರ ಪರಿಣಾಮವಾಗಿ, ಆಯಾ ದೇಶಗಳ ಅನೇಕ ಆಟಗಾರರು ಇನ್ನೆರಡು ದಿನಗಳಲ್ಲಿ ಪುನರಾರಂಭಗೊಳ್ಳಲಿರುವ ಐಪಿಎಲ್‌ಗೆ ಲಭ್ಯವಿರುವುದಿಲ್ಲ. ಇದು ಐಪಿಎಲ್‌ನಲ್ಲಿ ಹಲವು ತಂಡಗಳಿಗೆ ಸಂಕಷ್ಟದ ಪರಿಸ್ಥಿತಿಯನ್ನು ಸೃಷ್ಟಿಸಿದೆ. ಈ ಸಂದರ್ಭದಲ್ಲಿ, ಬಿಸಿಸಿಐ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಐಪಿಎಲ್‌ನ ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಿದೆ.

ಅನಿರೀಕ್ಷಿತ ಸಂದರ್ಭದಲ್ಲಿ ಐಪಿಎಲ್ ಅನ್ನು ಕೆಲ ಕಾಲ ರದ್ದು ಮಾಡಿ, ಪುನಾರಂಭಿಸಿದ ಹಿನ್ನೆಲೆಯಲ್ಲಿ ಬಿಸಿಸಿಐ ಲೀಗ್ ನಿಯಮಗಳಲ್ಲಿ ಪ್ರಮುಖ ಬದಲಾವಣೆಯನ್ನು ಮಾಡಿದೆ. ಐಪಿಎಲ್ ನಿಯಮಗಳ ಪ್ರಕಾರ, ಯಾವುದೇ ತಂಡ 12 ಪಂದ್ಯಗಳನ್ನು ಆಡಿದ ನಂತರ ಹೊಸ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಲು ಅವಕಾಶ ಇರುವುದಿಲ್ಲ. ತಂಡದ ಆಟಗಾರನೊಬ್ಬ ಗಾಯ ಅಥವಾ ಇತರ ಕಾರಣಗಳಿಂದ ಲೀಗ್‌ನಿಂದ ಹೊರಗುಳಿದಿದ್ದರೆ, 12ನೇ ಪಂದ್ಯದೊಳಗೆ ಬದಲಿ ಆಟಗಾರನನ್ನು ತೆಗೆದುಕೊಳ್ಳಬಹುದು. ಆದಾಗ್ಯೂ, ಈ ಬಾರಿ ಬಿಸಿಸಿಐ ಆ ನಿಯಮಗಳನ್ನು ಬದಲಾಯಿಸಿದೆ. ಈ ಸೀಸನ್​ನಲ್ಲಿ 12 ಪಂದ್ಯಗಳ ನಂತರವೂ ಹೊಸ ಆಟಗಾರರನ್ನು ಆಯ್ಕೆ ಮಾಡಲು ಅವಕಾಶ ನೀಡಿದೆ. ಇದರೊಂದಿಗೆ, ತಮ್ಮ ದೇಶಗಳಿಗೆ ಹೋಗಿರುವ ವಿದೇಶಿ ಆಟಗಾರರಿಗೆ ಲೀಗ್‌ಗೆ ಮರಳಲು ಅವಕಾಶವಿಲ್ಲದ ಕಾರಣ ಬಿಸಿಸಿಐ ತಾತ್ಕಾಲಿಕ ಒಪ್ಪಂದಗಳಿಗೆ ಅವಕಾಶ ನೀಡಿದೆ.

ಇದೀಗ ಬಿಸಿಸಿಐ ತೆಗೆದುಕೊಂಡಿರುವ ಈ ನಿರ್ಧಾರ ಐಪಿಎಲ್‌ನ ಅನೇಕ ತಂಡಗಳಿಗೆ ಭಾರಿ ನಿರಾಳತೆಯನ್ನುಂಟುಮಾಡಿದೆ. ಅಂದಹಾಗೆ, ತಾತ್ಕಾಲಿಕ ಬದಲಿ ಆಟಗಾರರು ಮುಂದಿನ ವರ್ಷ ಉಳಿಸಿಕೊಳ್ಳಲು ಅರ್ಹರಲ್ಲ ಎಂಬ ಷರತ್ತನ್ನು ಬಿಸಿಸಿಐ ವಿಧಿಸಿದೆ. ತಾತ್ಕಾಲಿಕ ಬದಲಿ ಆಟಗಾರರು 2026ರ ಐಪಿಎಲ್ ಆಟಗಾರರ ಹರಾಜಿಗೆ ನೋಂದಾಯಿಸಿಕೊಳ್ಳಬೇಕಾಗುತ್ತದೆ.

ಲೀಗ್​ ಅನ್ನು ಕೆಲ ಕಾಲ ಅಮಾನತಿನಲ್ಲಿ ಇಡುವ ಮುನ್ನ ಬದಲಿ ಆಟಗಾರರನ್ನು ಸೇರಿಸಿಕೊಂಡ ತಂಡ ಮುಂದಿನ ಸೀಸನ್​ನಲ್ಲೂ ಅವರನ್ನು ಉಳಿಸಿಕೊಳ್ಳಲು ಅರ್ಹವಾಗಿರುತ್ತದೆ ಎಂದು ಐಪಿಎಲ್ ಸ್ಪಷ್ಟಪಡಿಸಿದೆ. ಪಂದ್ಯಾವಳಿಯನ್ನು ಒಂದು ವಾರ ಅಮಾನತಿನಲ್ಲಿಡುವ 48 ಗಂಟೆಗಳ ಮೊದಲು ನಾಲ್ಕು ಆಟಗಾರರಿಗಾಗಿ ಸಹಿ ಮಾಡಲಾಗಿತ್ತು. ಇದರಲ್ಲಿ ಸೆಡಿಕುಲ್ಲಾ ಅಟಲ್ (ದೆಹಲಿ ಕ್ಯಾಪಿಟಲ್ಸ್), ಮಾಯಾಂಕ್ ಅಗರ್ವಾಲ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು), ಲುವಾನ್-ಡ್ರೆ ಪ್ರಿಟೋರಿಯಸ್ ಮತ್ತು ನಾಂಡ್ರೆ ಬರ್ಗರ್ (ಇಬ್ಬರೂ ರಾಜಸ್ಥಾನ್ ರಾಯಲ್ಸ್) ಸೇರಿದ್ದಾರೆ. (ಏಜೆನ್ಸೀಸ್​)