ನವದೆಹಲಿ: ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆ ಎನಿಸಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತೆರಿಗೆ ವಿನಾಯಿತಿ ಹೊಂದಿದೆ ಎಂಬ ತಪ್ಪು ಅಭಿಪ್ರಾಯ ಹಲವರಲ್ಲಿದೆ. ಕಳೆದ 5 ವರ್ಷಗಳಲ್ಲಿ ಬಿಸಿಸಿಐ 4,298.12 ಕೋಟಿ ರೂಪಾಯಿ ಆದಾಯ ತೆರಿಗೆ ಪಾವತಿಸಿರುವ ವಿವರವನ್ನು ಬಹಿರಂಗಪಡಿಸುವ ಮೂಲಕ ಕೇಂದ್ರ ಸರ್ಕಾರ, ಈ ತಪ್ಪುಗ್ರಹಿಕೆಯನ್ನು ತೊಲಗಿಸಿದೆ.
ಬಿಸಿಸಿಐ ತೆರಿಗೆ ಪಾವತಿಸುತ್ತಿದೆಯೇ ಎಂದು ಶಿವಸೇನೆಯ ಅನಿಲ್ ದೇಸಾಯಿ ರಾಜ್ಯಸಭೆಯಲ್ಲಿ ಕೇಳಿರುವ ಪ್ರಶ್ನೆಗೆ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ, ವಿವರವಾದ ಲಿಖಿತ ಉತ್ತರ ನೀಡಿದ್ದಾರೆ. ಈ ಮೂಲಕ ಬಿಸಿಸಿಐ ಆದಾಯ ತೆರಿಗೆಯನ್ನು ಸರಿಯಾಗಿ ಪಾವತಿಸುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಕಳೆದ 2021-22ರ ವಿತ್ತ ವರ್ಷದಲ್ಲಿ ಬಿಸಿಸಿಐ ಬರೋಬ್ಬರಿ 7,606 ಕೋಟಿ ರೂ. ಆದಾಯ ಗಳಿಸಿದ್ದು, ಈ ಪೈಕಿ 3,064 ಕೋಟಿ ರೂ. ವೆಚ್ಚ ಮಾಡಿದೆ. ಜತೆಗೆ 1,159 ಕೋಟಿ ರೂ. ಆದಾಯ ತೆರಿಗೆ ಪಾವತಿಸಿದೆ. ಇದು ಅದಕ್ಕೆ ಹಿಂದಿನ 2020-21ರ ಸಾಲಿಗಿಂತ ಶೇ. 37 ಅಧಿಕವಾಗಿದೆ. 2020-21ರಲ್ಲಿ ಬಿಸಿಸಿಐ 844.92 ಕೋಟಿ ರೂ. ತೆರಿಗೆ ಪಾವತಿಸಿತ್ತು. ಇದು ಅದಕ್ಕೆ ಹಿಂದಿನ 2019-20ರ ಸಾಲಿನ 882.29 ಕೋಟಿ ರೂ.ಗಿಂತ ಕಡಿಮೆಯಾಗಿದೆ. ಅದಕ್ಕೆ ಮುನ್ನ 2018-19ರಲ್ಲಿ 815.08 ಕೋಟಿ ರೂ. ಮತ್ತು 2017-18ರಲ್ಲಿ 596.63 ಕೋಟಿ ರೂ. ಆದಾಯ ತೆರಿಗೆ ಪಾವತಿಸಿತ್ತು.