ಕ್ರೀಡೆ

ಐಪಿಎಲ್‌ಗೆ ನಷ್ಟದ ಭೀತಿ, ಇನ್ನಷ್ಟು ಚೀನಾ ಕಂಪನಿಗಳು ಪ್ರಾಯೋಜಕತ್ವ ತ್ಯಜಿಸುವ ಸಾಧ್ಯತೆ

ನವದೆಹಲಿ: ಕರೊನಾ ವೈರಸ್ ಹಾವಳಿಯ ನಡುವೆಯೂ ಯುಎಇಯಲ್ಲಿ ಐಪಿಎಲ್ 13ನೇ ಆವೃತ್ತಿಯನ್ನು ಆಯೋಜಿಸಲು ಬಿಸಿಸಿಐ ಸನ್ನದ್ಧವಾಗಿದ್ದರೂ, ಆರ್ಥಿಕವಾಗಿ ಹೊಡೆತ ಎದುರಾಗುವ ಭೀತಿ ಹರಡಿದೆ. ಈಗಾಗಲೆ ಟೂರ್ನಿಯ ಶೀರ್ಷಿಕೆ ಪ್ರಾಯೋಜಕತ್ವದಿಂದ ವಿವೋ ಕಂಪನಿ ಹಿಂದೆ ಸರಿಯುವುದು ಖಾತ್ರಿ ಎನಿಸಿರುವ ನಡುವೆ, ಚೀನಾದ ಇನ್ನಷ್ಟು ಕಂಪನಿಗಳು ಐಪಿಎಲ್ ಪ್ರಾಯೋಜಕತ್ವದಿಂದ ದೂರ ಉಳಿಯುವ ಸಾಧ್ಯತೆ ಕಾಣಿಸಿದೆ.

ವಾರ್ಷಿಕವಾಗಿ 440 ಕೋಟಿ ರೂ. ಪಾವತಿಸುತ್ತಿದ್ದ ಚೀನಾದ ಮೊಬೈಲ್ ಕಂಪನಿ ವಿವೋ ಸ್ಥಾನವನ್ನು ತುಂಬಲು ಬಿಸಿಸಿಐ ಈಗಾಗಲೆ ಪರದಾಡುತ್ತಿದೆ. ಕೆಲ ಭಾರತೀಯ ಕಂಪನಿಗಳ ಜತೆಗೆ ಬಿಸಿಸಿಐ ಶೀರ್ಷಿಕೆ ಪ್ರಾಯೋಜಕತ್ವದ ಬಗ್ಗೆ ಚರ್ಚಿಸುತ್ತಿದೆ. ಆದರೆ ಯಾವ ಕಂಪನಿ ಕೂಡ ವಾರ್ಷಿಕವಾಗಿ 300 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ ಒಪ್ಪಂದಕ್ಕೆ ಸಿದ್ಧವಿಲ್ಲ ಎನ್ನಲಾಗಿದೆ. ಇದರಿಂದ ಬಿಸಿಸಿಐ 140 ಕೋಟಿ ರೂ.ಯಷ್ಟು ನಷ್ಟ ಎದುರಿಸಬೇಕಾಗುತ್ತದೆ. ಶೀರ್ಷಿಕೆ ಪ್ರಾಯೋಜಕತ್ವದ ಶೇ. 50ರಷ್ಟು ಮೊತ್ತ ್ರಾಂಚೈಸಿಗಳಿಗೆ ಹಂಚಿಕೆಯಾಗಬೇಕಾಗಿದೆ. ಟಿಕೆಟ್ ಮಾರಾಟದ ಆದಾಯ ಕೈತಪ್ಪುವ ಜತೆಗೆ ಈ ಪಾಲಿನ ಪ್ರಮಾಣವೂ ಕಡಿಮೆಯಾದರೆ, ್ರಾಂಚೈಸಿಗಳಿಗೆ ಇನ್ನಷ್ಟು ಹೊಡೆತ ಎದುರಾಗಲಿದೆ ಎನ್ನಲಾಗಿದೆ.

ವಿವೋ ಜತೆಗೆ ಒಪ್ಪೋ, ರಿಯಲ್ ಮೀ, ಒನ್ ಪ್ಲಸ್, ರೆಡ್ಮಿ/ಕ್ಸಿವೊಮಿ, ಹುವವೀ, ಝಡ್‌ಟಿಇ, ಲೆನೊವೊ ಮುಂತಾದ ಚೀನಾ ಬ್ರಾಂಡ್‌ಗಳು ಕೂಡ ಐಪಿಎಲ್ ಪ್ರಾಯೋಜಕತ್ವದ ಭಾಗವಾಗಿವೆ. ಟಿವಿ ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ಐಪಿಎಲ್ ವೇಳೆ 600-700 ಕೋಟಿ ರೂ. ಮೊತ್ತದ ಜಾಹೀರಾತುಗಳನ್ನು ನೀಡುತ್ತವೆ. ಇನ್ನು ಚೀನಾ ಕಂಪನಿಗಳ ಹೂಡಿಕೆ ಹೊಂದಿರುವ ಪೇಟಿಎಂ, ಡ್ರೀಮ್ ಇಲೆವೆನ್, ಸ್ವಿಗ್ಗಿ, ರೊಮೊಟೊ ಕಂಪನಿಗಳು ಕೂಡ ಐಪಿಎಲ್ ಪ್ರಾಯೋಜಕತ್ವದಿಂದ ದೂರ ಉಳಿಯುವ ಭೀತಿ ಇದೆ. ಚೀನಾ ಉತ್ಪನ್ನಗಳ ವಿರುದ್ಧ ಈಗಾಗಲೆ ವ್ಯಕ್ತವಾಗಿರುವ ಜನಾಕ್ರೋಶ ಇದಕ್ಕೆ ಕಾರಣವಾಗಿದೆ.

ಚೀನಾ ಕಂಪನಿಗಳು ಜಾಹೀರಾತು ನೀಡದಿದ್ದರೆ ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಐಪಿಎಲ್ ವೇಳೆ 500 ಕೋಟಿ ರೂ. ನಷ್ಟ ಎದುರಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಈ ವರ್ಷ ಐಪಿಎಲ್‌ನಿಂದ ಒಟ್ಟಾರೆ 3 ಸಾವಿರ ಕೋಟಿ ರೂ. ಆದಾಯದ ನಿರೀಕ್ಷೆಯನ್ನು ಸ್ಟಾರ್ ಸ್ಪೋರ್ಟ್ಸ್ ಹೊಂದಿದೆ. ಕಳೆದ ವರ್ಷ 2,200 ಕೋಟಿ ರೂ. ಮತ್ತು 2018ರಲ್ಲಿ 1,750 ಕೋಟಿ ರೂ. ಗಳಿಕೆ ಮಾಡಿಕೊಂಡಿತ್ತು.

3 ದಿನಗಳ ಕ್ವಾರಂಟೈನ್, ತಂಡಗಳ ಮನವಿ

ನವದೆಹಲಿ: ಯುಎಇಯಲ್ಲಿ ಆಟಗಾರರಿಗೆ 6 ದಿನಗಳಿಗೆ ಬದಲಾಗಿ 3 ದಿನಗಳ ಕಾಲ ಮಾತ್ರ ಕ್ವಾರಂಟೈನ್‌ಗೆ ಒಳಪಡಿಸಬೇಕು ಎಂದು ಐಪಿಎಲ್ ತಂಡಗಳು ಬಿಸಿಸಿಐಗೆ ಬೇಡಿಕೆ ಸಲ್ಲಿಸಿವೆ. ಬಿಸಿಸಿಐ ಮಾರ್ಗಸೂಚಿಯ ಅನ್ವಯ ಆಟಗಾರರು ಯುಎಇಯಲ್ಲಿ 6 ದಿನಗಳ ಕಾಲ ಕ್ವಾರಂಟೈನ್‌ಗೆ ಒಳಪಡಬೇಕಾಗಿದೆ. ಅಲ್ಲದೆ ಮೊದಲ, 3ನೇ ಮತ್ತು 6ನೇ ದಿನ ಕರೊನಾ ಪರೀಕ್ಷೆ ನಡೆಯಲಿದ್ದು, ಇದರಲ್ಲಿ ನೆಗೆಟಿವ್ ಬಂದರೆ ಮಾತ್ರ ಜೈವಿಕ-ಸುರಕ್ಷಾ ವಾತಾವರಣದೊಳಗೆ ಪ್ರವೇಶ ದೊರೆಯಲಿದೆ. ಹೆಚ್ಚಿನ ಆಟಗಾರರು ಕಳೆದ 6 ತಿಂಗಳಿನಿಂದ ಯಾವುದೇ ಪಂದ್ಯ ಆಡಿಲ್ಲ. ಹೀಗಾಗಿ ಅವರಿಗೆ ಹೆಚ್ಚಿನ ಅಭ್ಯಾಸದ ಅಗತ್ಯವಿದೆ. ಇದರಿಂದ ಅವರ ಕ್ವಾರಂಟೈನ್ ಅವಧಿ ಕಡಿಮೆಗೊಳಿಸಬೇಕೆಂಬುದು ಐಪಿಎಲ್ ತಂಡಗಳ ಬೇಡಿಕೆಗೆ ಕಾರಣವಾಗಿದೆ. ಆಗಸ್ಟ್ 20ಕ್ಕೆ ಮುನ್ನ ಯುಎಇಗೆ ಪ್ರಯಾಣಿಸದಂತೆಯೂ ಬಿಸಿಸಿಐ ಸೂಚಿಸಿದೆ. ಆದರೆ ಆಗಸ್ಟ್ 15ರ ನಂತರದಲ್ಲಿ ಯುಎಇಗೆ ಪ್ರಯಾಣಿಸಬೇಕೆಂಬುದು ಹೆಚ್ಚಿನ ತಂಡಗಳ ಯೋಜನೆಯಾಗಿದೆ. ಐಪಿಎಲ್ 13ನೇ ಆವೃತ್ತಿ ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ಯುಎಇಯಲ್ಲಿ ನಿಗದಿಯಾಗಿದೆ.

ಹೋಟೆಲ್‌ಗಳಿಗೆ ಬದಲು ರೆಸಾರ್ಟ್?

ಯುಎಇಯಲ್ಲಿ ಹೋಟೆಲ್‌ಗಳಲ್ಲಿ ಉಳಿದುಕೊಳ್ಳುವ ಬದಲಾಗಿ ರೆಸಾರ್ಟ್‌ಗಳನ್ನು ಬಾಡಿಗೆಗೆ ಪಡೆದುಕೊಳ್ಳುವ ಬಗ್ಗೆಯೂ ತಂಡಗಳು ಚಿಂತನೆ ನಡೆಸಿವೆ. ಪಂಚತಾರಾ ಹೋಟೆಲ್‌ಗಳಲ್ಲಿ ಹೆಚ್ಚಿನ ಜನಸಂದಣಿ ಇರುತ್ತದೆ. ಅಲ್ಲದೆ ಹವಾನಿಯಂತ್ರಣದಲ್ಲಿ ವೈರಸ್ ಹರಡುವ ಭೀತಿ ಹೆಚ್ಚಿರುವುದರಿಂದ ತಂಡಗಳು ಗಾಲ್ಫ್ ರೆಸಾರ್ಟ್‌ಗಳಲ್ಲಿ ನೆಲೆಸಲು ಒಲವು ತೋರಿವೆ. ಮುಂಬೈ ಇಂಡಿಯನ್ಸ್ ತಂಡ ಅಪಾರ್ಟ್‌ಮೆಂಟ್ ಪೂರ್ತಿ ಬಾಡಿಗೆಗೆ ಪಡೆದುಕೊಳ್ಳುವ ಯೋಜನೆಯನ್ನೂ ಹಾಕಿಕೊಂಡಿದೆ.