ಕರ್ನಾಟಕ ತಂಡವನ್ನು ಶುಭಾ ಸತೀಶ್​ ಮತ್ತು ರೈಲ್ವೇಸ್​ ತಂಡವನ್ನು ರೇಣುಕಾ ಸಿಂಗ್ ಮುನ್ನಡೆಸಲಿದ್ದಾರೆ. ಏಜೆನ್ಸಿ
ಕ್ರೀಡೆ

ಇಂದು ಮಹಿಳಾ ಟಿ20 ಫೈನಲ್​: ರೈಲ್ವೇಸ್ ಹಳಿ ತಪ್ಪಿಸೀತೇ ಕರ್ನಾಟಕ?

ಈ ಹಿಂದೆ 2018-19ರಲ್ಲಿ ಫೈನಲ್​ಗೇರಿ, ಪಂಜಾಬ್​ ವಿರುದ್ಧ ಸೋತು ರನ್ನರ್​ಅಪ್​ ಆಗಿದ್ದ ಕರ್ನಾಟಕ ಈ ಬಾರಿ ಪ್ರಶಸ್ತಿ ಕನಸು ನನಸಾಗಿಸುವ ಭರವಸೆಯಲ್ಲಿದೆ.

ಅಹಮದಾಬಾದ್​: ಚೊಚ್ಚಲ ಪ್ರಶಸ್ತಿ ನಿರೀಕ್ಷೆಯಲ್ಲಿರುವ ಕರ್ನಾಟಕ ತಂಡ ದೇಶೀಯ ಸೀನಿಯರ್​ ಮಹಿಳಾ ಟಿ20 ಟೂರ್ನಿಯಲ್ಲಿ ಶುಕ್ರವಾರ ನಡೆಯಲಿರುವ ಫೈನಲ್​ ಪಂದ್ಯದಲ್ಲಿ ದಾಖಲೆಯ 11 ಬಾರಿಯ ಚಾಂಪಿಯನ್​ ರೈಲ್ವೇಸ್​ ತಂಡದ ಓಟಕ್ಕೆ ಕಡಿವಾಣ ಹಾಕುವ ಹಂಬಲದಲ್ಲಿದೆ. ನರೇಂದ್ರ ಮೋದಿ ಸ್ಟೇಡಿಯಂನ ಬಿ ಗ್ರೌಂಡ್​ನಲ್ಲಿ ಪ್ರಶಸ್ತಿ ಕಾದಾಟ ನಡೆಯಲಿದೆ.

ಲೀಗ್​ ಹಂತದಲ್ಲಿ ಎಲ್ಲ 7 ಪಂದ್ಯ ಗೆದ್ದು ಪ್ರಾಬಲ್ಯ ಮೆರೆದಿದ್ದ ಶುಭಾ ಸತೀಶ್​ ಸಾರಥ್ಯದ ಕರ್ನಾಟಕ, ಸೂಪರ್​ ಲೀಗ್​ನಲ್ಲೂ ಮೊದಲ 2 ಪಂದ್ಯ ಗೆದ್ದ ಬಳಿಕ ಕೊನೇ ಪಂದ್ಯದಲ್ಲಿ ದೆಹಲಿ ಎದುರು ಆಘಾತ ಎದುರಿಸಿತ್ತು. ಮತ್ತೊಂದೆಡೆ ರೈಲ್ವೇಸ್​ ಲೀಗ್​ನಲ್ಲಿ 6 ಜಯ, 1 ಸೋಲು ಕಂಡ ಬಳಿಕ ಸೂಪರ್​ ಲೀಗ್​ನಲ್ಲಿ ಎಲ್ಲ 3 ಪಂದ್ಯ ಗೆದ್ದು ಬೀಗಿತ್ತು.

ನಾಯಕಿ ಶುಭಾ ಸತೀಶ್​ (393 ರನ್​), ವೃಂದಾ ದಿನೇಶ್​ (345) ಮತ್ತು ನಿಕಿ ಪ್ರಸಾದ್​ (328) ಬ್ಯಾಟಿಂಗ್​ನಲ್ಲಿ ಕರ್ನಾಟಕಕ್ಕೆ ಬಲ ತುಂಬಿದ್ದರೆ, ಬೌಲಿಂಗ್​ನಲ್ಲಿ ಶ್ರೇಯಾಂಕಾ ಪಾಟೀಲ್​ 20 ವಿಕೆಟ್​ ಕಬಳಿಸಿ ಮಿಂಚಿದ್ದಾರೆ. ಶ್ರೇಯಾಂಕಾ ಕೊನೇ ಪಂದ್ಯದಲ್ಲಿ ದೆಹಲಿ ವಿರುದ್ಧ 29 ಎಸೆತಗಳಲ್ಲಿ 71 ರನ್​ ಸಿಡಿಸಿ ಬ್ಯಾಟಿಂಗ್​ನಲ್ಲೂ ಆಸರೆಯಾಗಿದ್ದರು.

ಅತ್ತ ಅನುಭವಿ ವೇಗಿ ರೇಣುಕಾ ಸಿಂಗ್​ ಸಾರಥ್ಯದ ರೈಲ್ವೇಸ್​ ತಂಡ ಶಿಪ್ರ ಗಿರಿ (266), ಪ್ರತಿಕಾ ರಾವಲ್​ (237), ರಿಯಾ ಚೌಧರಿ (238) ಬ್ಯಾಟಿಂಗ್​ ಬಲ ಹೊಂದಿದ್ದರೆ, ಬೌಲಿಂಗ್​ನಲ್ಲಿ ಎಡಗೈ ಸ್ಪಿನ್ನರ್​ ಏಕ್ತಾ ಬಿಷ್ಟ್​ (19), ತನುಜಾ ಕನ್ವರ್​ (12) ಶಕ್ತಿ ತುಂಬಿದ್ದಾರೆ.

ಈ ಹಿಂದೆ 2018-19ರಲ್ಲಿ ಫೈನಲ್​ಗೇರಿ, ಪಂಜಾಬ್​ ವಿರುದ್ಧ ಸೋತು ರನ್ನರ್​ಅಪ್​ ಆಗಿದ್ದ ಕರ್ನಾಟಕ ಈ ಬಾರಿ ಪ್ರಶಸ್ತಿ ಕನಸು ನನಸಾಗಿಸುವ ಭರವಸೆಯಲ್ಲಿದೆ.

ಆರಂಭ: ಸಂಜೆ 4.30

ನೇರಪ್ರಸಾರ: ಜಿಯೋ ಹಾಟ್​ಸ್ಟಾರ್​, ಸ್ಟಾರ್​ ಸ್ಪೋರ್ಟ್ಸ್​ ಸೆಲೆಕ್ಟ್​ 1