ಮುಂಬೈ: ದಿಗ್ಗಜ ಸಚಿನ್ ತೆಂಡುಲ್ಕರ್, ಮಾಜಿ ಸ್ಪಿನ್ನರ್ ಆರ್. ಅಶ್ವಿನ್, ಭಾರತ ತಂಡದ ವೇಗಿ ಜಸ್‌ಪ್ರೀತ್ ಬುಮ್ರಾ ಮತ್ತು ಮಹಿಳಾ ತಂಡದ ಉಪನಾಯಕಿ ಸ್ಮತಿ ಮಂದನಾ 2023-24ರ ಸಾಲಿನ ಬಿಸಿಸಿಐ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗೌರವಕ್ಕೆ ಪಾತ್ರರಾಗಿದ್ದಾರೆ.
ಮುಂಬೈನಲ್ಲಿ ಶನಿವಾರ ರಾತ್ರಿ ನಡೆದ ಸರಳ ಸಮಾರಂಭದಲ್ಲಿ ಸಚಿನ್ ಜೀವಮಾನ ಸಾಧನೆಗಾಗಿ ಐಸಿಸಿ ಚೇರ್ಮನ್ ಜಯ್ ಷಾ ಅವರಿಂದ ಸಿಕೆ ನಾಯ್ಡು ಟ್ರೋಫಿ ಸ್ವೀಕರಿಸಿದರು. ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ ಅಶ್ವಿನ್, ವಿಶೇಷ ಪ್ರಶಸ್ತಿ ಪಡೆದರು. ಬುಮ್ರಾ ಮತ್ತು ಸ್ಮತಿ ಕ್ರಮವಾಗಿ ಅತ್ಯುತ್ತಮ ಅಂತಾರಾಷ್ಟ್ರೀಯ ಪುರುಷ ಮತ್ತು ಮಹಿಳಾ ಕ್ರಿಕೆಟರ್ ಪ್ರಶಸ್ತಿ ಗಳಿಸಿದರು. ಟಿ20 ವಿಶ್ವಕಪ್ ವಿಜೇತ ಭಾರತ ತಂಡದ ಆಟಗಾರರಿಗೂ ವಿಶೇಷ ಪ್ರಶಸ್ತಿಗಳನ್ನು ವಿತರಿಸಲಾಯಿತು.
ಸಫ್ರ್ರಾಜ್ ಖಾನ್ ಮತ್ತು ಆಶಾ ಶೋಭನಾ ಅತ್ಯುತ್ತಮ ಅಂತಾರಾಷ್ಟ್ರೀಯ ಕ್ರಿಕೆಟ್ ಪದಾರ್ಪಣೆಗಾಗಿ ಪುರುಷ-ಮಹಿಳಾ ವಿಭಾಗದ ಪ್ರಶಸ್ತಿ ಗೆದ್ದರು. ಕರ್ನಾಟಕದ ಅನೀಶ್ ಕೆವಿ 23 ವಯೋಮಿತಿಯ ಸಿಕೆ ನಾಯ್ಡು ಟ್ರೋಫಿಯ ಗರಿಷ್ಠ ರನ್ ಸಾಧನೆಗಾಗಿ ಎಂಎ ಚಿದಂಬರಂ ಟ್ರೋಫಿ ಪಡೆದರು.