ಮುಂಬೈ: ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾಗಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) 95ನೇ ವಾರ್ಷಿಕ ಮಹಾಸಭೆ (ಎಜಿಎಂ) ಮತ್ತು ಚುನಾವಣೆ ಪ್ರಕ್ರಿಯೆ ಸೆಪ್ಟೆಂಬರ್ 28ರಂದು ಮುಂಬೈನಲ್ಲಿ ನಡೆಯಲಿದೆ. ಮಂಡಳಿಯ ಹೊಸ ಅಧ್ಯಕ್ಷರ ಆಯ್ಕೆ ಮತ್ತು ಐಪಿಎಲ್ ಟೂರ್ನಿಯ ಹೊಸ ಚೇರ್ಮನ್ ನೇಮಕ ಸಭೆಯ ಪ್ರಮುಖ ಅಜೆಂಡಾ ಆಗಿದೆ.
ಲೋಧಾ ಸಮಿತಿ ಶಿಫಾರಸಿನ ಅನ್ವಯ ರಚನೆಯಾಗಿರುವ ಮಂಡಳಿ ಸಂವಿಧಾನದ ಪ್ರಕಾರ, ರೋಜರ್ ಬಿನ್ನಿ 70 ವರ್ಷ ದಾಟಿದ ಬಳಿಕ ಪದತ್ಯಾಗ ಮಾಡಿದ್ದರೆ, ಸದ್ಯ ಉಪಾಧ್ಯಕ್ಷ ರಾಜೀವ್ ಶುಕ್ಲಾ ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಐಪಿಎಲ್ ಚೇರ್ಮನ್ ಅರುಣ್ ಧುಮಾಲ್ ಸತತ 6 ವರ್ಷಗಳ ಅಧಿಕಾರಾವಧಿಯ ಬಳಿಕ ಕೂಲಿಂಗ್-ಆಫ್ಗೆ (ವಿಶ್ರಾಂತ ಅವಧಿ) ತೆರಳಬೇಕಿರುವುದರಿಂದ ಅವರ ಹುದ್ದೆಯೂ ತೆರವಾಗಲಿದೆ.
ಬಿಸಿಸಿಐನ ಎಲ್ಲ ಪದಾಧಿಕಾರಿಗಳ ಹುದ್ದೆಗೂ ಚುನಾವಣೆ ನಡೆಯಲಿದ್ದರೂ, ಅಧ್ಯಕ್ಷರ ಹೊರತಾಗಿ ಉಳಿದೆಲ್ಲ ಹುದ್ದೆಗಳಲ್ಲಿ ಈಗ ಇರುವವರೇ ಮುಂದುವರಿಯುವ ನಿರೀಕ್ಷೆ ಇದೆ. ಎಜಿಎಂನಲ್ಲಿ ಬಿಸಿಸಿಯ ಒಂಬುಡ್ಸ್ಮನ್ ಮತ್ತು ಎಥಿಕ್ಸ್ ಅಧಿಕಾರಿಯನ್ನೂ ನೇಮಿಸಲಾಗುವುದು. ಜತೆಗೆ ಐಸಿಸಿಗೆ ಮಂಡಳಿಯ ಪ್ರತಿನಿಧಿಯನ್ನೂ ಆರಿಸಲಾಗುವುದು. ವುಮೆನ್ಸ್ ಪ್ರೀಮಿಯರ್ ಲೀಗ್ಗೆ (ಡಬ್ಲ್ಯುಪಿಎಲ್) ಐಪಿಎಲ್ನಿಂದ ಪ್ರತ್ಯೇಕವಾದ ಆಡಳಿತ ಮಂಡಳಿಯೂ ರಚನೆಯಾಗಲಿದೆ.