ಸಿಡ್ನಿ: ದುಬೈನಲ್ಲಿ ನಡೆದ ಐಪಿಎಲ್ ಮನರಂಜನೆಯ ಬಳಿಕ ಆಸ್ಟ್ರೇಲಿಯಾದಲ್ಲಿ ಆರಂಭವಾಗಿರುವ ಬಿಗ್ ಬ್ಯಾಷ್ ಲೀಗ್ ಟಿ20 ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಮ್ಮೆ ಮನರಂಜನೆಯ ರಸದೌತಣ ಉಣಬಡಿಸುತ್ತಿದೆ. ಕರೊನಾದಿಂದ ವರ್ಷಗಳವರೆಗೆ ಕ್ರಿಕೆಟ್ ಮಿಸ್ ಮಾಡಿಕೊಂಡಿದ್ದ ಅಭಿಮಾನಿಗಳಿಗೆ ಸಾಲು ಸಾಲು ಕ್ರಿಕೆಟ್ ಪಂದ್ಯಗಳಿಂದ ಉಲ್ಲಾಸಗೊಂಡಿದ್ದಾರೆ.
ಬಿಗ್ ಬ್ಯಾಷ್ ಲೀಗ್ ಡಿಸೆಂಬರ್ 10ರಿಂದ ಆರಂಭವಾಗಿದೆ. ಟೂರ್ನಿಯ ಎರಡನೇ ಪಂದ್ಯದಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ತಂಡವು ಬ್ರಿಸ್ಬೇನ್ ಹೀಟ್ ತಂಡದ ವಿರುದ್ಧ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಇಡೀ ಪಂದ್ಯದಲ್ಲಿ 10 ಸಿಕ್ಸರ್ಗಳು ಸಿಡಿದಿದ್ದು, ಮೆಲ್ಬೋರ್ನ್ ಸ್ಟಾರ್ಸ್ ಆಟಗಾರ ಆ್ಯಂಡ್ರೆ ಫ್ಲೆಚರ್ ಚೆಂಡು ನೋಡದೇ ಸಿಡಿಸಿದ ಸಿಕ್ಸರ್ ಕ್ರೀಡಾಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ.
ಕ್ರೀಸ್ನಲ್ಲಿ ನಿಂತಿದ್ದ ಫ್ಲೆಚರ್ ಮೊದಲೇ ಚೆಂಡಿನ ಅಳತೆಯನ್ನು ಗ್ರಹಿಸಿ ಸರಿಯಾದ ಸ್ಥಾನದಲ್ಲಿ ನಿಂತು ಚೆಂಡನ್ನು ನೋಡದೇ ಬಿಗ್ ಸಿಕ್ಸರ್ ಸಿಡಿಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಾಲ್ ನೋಡದೇ ಬಾರಿಸಿದ ಫ್ಲೆಚರ್ ಬ್ಯಾಟಿಂಗ್ ಶೈಲಿ ಆಸಿಸ್ ಮಾಜಿ ಆಟಗಾರರಾದ ಆ್ಯಡಮ್ ಗಿಲ್ಕ್ರಿಸ್ಟ್ ಮತ್ತು ಬ್ರೆಟ್ ಲೀ ಸೇರಿದಂತೆ ಕಾಮೆಂಟೇಟರ್ಸ್ಗೂ ಬಲು ಇಷ್ಟವಾಗಿದೆ.
ಗ್ಲೇನ್ ಮ್ಯಾಕ್ಸ್ವೆಲ್ ನಾಯಕತ್ವದ ಮೆಲ್ಬೋರ್ನ್ ಸ್ಟಾರ್ಸ್ ತಂಡವು ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿತು. ಮೊನೆಚಾದ ಬೌಲಿಂಗ್ ದಾಳಿ ನಡೆಸಿದ ಮೆಲ್ಬೋರ್ನ್ ಸ್ಟಾರ್ಸ್ ಬೌಲರ್ಗಳು ಎದುರಾಳಿ ಬ್ರಿಸ್ಬೇನ್ ಹೀಟ್ ತಂಡವನ್ನು ಕೇವಲ 125 ರನ್ಗಳಿಗೆ ಕಟ್ಟಿಹಾಕಿತು. ಗುರಿ ಬೆನ್ನತ್ತಿದ ಮೆಲ್ಬೋರ್ನ್ ಸ್ಟಾರ್ಸ್ ಹಿಲ್ಟನ್ ಕಾರ್ಟ್ರೈಟ್ (46) ಮತ್ತು ನಾಯಕ ಮ್ಯಾಕ್ಸ್ವೆಲ್ (26 ಎಸೆತಕ್ಕೆ46 ರನ್) ನೆರವಿನಿಂದ 6 ವಿಕೆಟ್ಗಳ ಅಂತರದಿಂದ ಜಯ ಸಾಧಿಸಿತು. ಆದರೆ ಇಡೀ ಪಂದ್ಯದಲ್ಲಿ ಫ್ಲೆಚರ್ ಬಾರಿಸಿದ ಸಿಕ್ಸರ್ ಮಾತ್ರ ತುಂಬಾ ಆಕರ್ಷಣೀಯವಾಗಿತ್ತು. (ಏಜೆನ್ಸೀಸ್)