ವೆಲ್ಲಿಂಗ್ಟನ್: ಟೀಮ್ ಇಂಡಿಯಾದ ಮಾಜಿ ಆಟಗಾರ ಯುವರಾಜ್ ಸಿಂಗ್, 2007ರ ಟಿ20 ವಿಶ್ವಕಪ್ನಲ್ಲಿ ಇಂಗ್ಲೆಂಡ್ ವಿರುದ್ಧ ಒಂದೇ ಓವರ್ನಲ್ಲಿ 6 ಸಿಕ್ಸರ್ ಬಾರಿಸಿದ್ದು ಇಂದಿಗೂ ಕ್ರೀಡಾಭಿಮಾನಿಗಳ ಮನದಲ್ಲಿ ಅಚ್ಚೊತ್ತಿದೆ. ಇದೀಗ ಯುವಿ ಮಾದರಿಯಲ್ಲೇ ನ್ಯೂಜಿಲೆಂಡ್ ಕ್ರಿಕೆಟರ್ ಒಂದೇ ಓವರ್ನಲ್ಲಿ 6 ಸಿಕ್ಸರ್ ಸಿಡಿಸುವ ಮೂಲಕ ಮತ್ತೊಮ್ಮೆ ಯುವಿಯನ್ನು ನೆನೆಯುವಂತೆ ಮಾಡಿದ್ದಾರೆ.
ನ್ಯೂಜಿಲೆಂಡ್ನಲ್ಲಿ ನಡೆಯುತ್ತಿರುವ ನ್ಯೂಜಿಲೆಂಟ್ ಟಿ20 ಲೀಗ್ನ ಭಾನುವಾರದ ಪಂದ್ಯದಲ್ಲಿ ಬ್ಯಾಟ್ಸ್ಮನ್ ಲಿಯೋ ಕಾರ್ಟರ್ ಅಮೋಘ ಪ್ರದರ್ಶನ ನೀಡಿದರು. ಕಾರ್ಟರ್ ತಮ್ಮ ತಂಡ ಕಾಂಟೆರ್ಬರಿ ಕಿಂಗ್ಸ್ ಪರ ನಾರ್ಥರ್ನ್ ನೈಟ್ಸ್ ಎದುರು ಉತ್ತಮ ರನ್ ರಣಿಕೆ ನೀಡಿದರು. ನಾರ್ಥರ್ನ್ ನೈಟ್ಸ್ ತಂಡದ ಸ್ಪಿನ್ನರ್ ಆ್ಯಂಟನ್ ಡೆವಿಚ್ ಎಸೆದ 16ನೇ ಓವರ್ನ ಪ್ರತಿ ಬಾಲ್ ಅನ್ನು ಕಾರ್ಟರ್ ಬೌಂಡರಿ ಗೆರೆಯಿಂದಾಚೆಗೆ ಅಟ್ಟಿದರು.
ಮೊದಲು ಬ್ಯಾಟ್ ಮಾಡಿದ ನಾರ್ಥರ್ನ್ ನೈಟ್ಸ್ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ಗೆ 219 ರನ್ ಗಳಿಸಿತು. ಗುರಿ ಬೆನ್ನತ್ತಿದ ಕಾಂಟೆರ್ಬರಿ ಕಿಂಗ್ಸ್ ತಂಡ 104 ರನ್ 3 ವಿಕೆಟ್ ಕಳೆದುಕೊಂಡು ಆಘಾತಕ್ಕೀಡಾಗಿತ್ತು. ಈ ವೇಳೆ 11ನೇ ಓವರ್ನಲ್ಲಿ ಲಿಯೋ ಕಾರ್ಟರ್ ಮೈದಾನಕ್ಕೆ ಆಗಮಿಸಿದರು. ಪ್ರಾರಂಭದಲ್ಲಿ ನಿಧಾನಗತಿಯ ಬ್ಯಾಟಿಂಗ್ ಮಾಡಿ 15ನೇ ಓವರ್ ಅಂತ್ಯಕ್ಕೆ 12 ಎಸೆತಗಳಲ್ಲಿ ಕೇವಲ 11 ರನ್ ಕಲೆಹಾಕಿದ್ದರು. ಆದರೆ, ಕಾರ್ಟರ್ ಜತೆಯಾಗಿದ್ದ ಕೊಲ್ ಮೆಕೆಂಜಿ ಅಬ್ಬರದ ಆಟವಾಡಿ 19 ಎಸೆತಗಳಲ್ಲಿ 43 ರನ್ ಗಳಿಸಿದ್ದರು. ಈ ಸಮಯದಲ್ಲಿ ಕಿಂಗ್ಸ್ 156 ರನ್ ಗಳಿಸಿತ್ತು.
ಇಲ್ಲಿಂದಾಚೆಗೆ ಘರ್ಜಿಸಿದ ಲಿಯೋ ಕಾರ್ಟರ್, 16ನೇ ಓವರ್ನ ಎಲ್ಲಾ ಎಸೆತಗಳನ್ನು ಸಿಕ್ಸರ್ ಗಡಿ ದಾಟಿಸಿದರು. ಇದಕ್ಕೂ ಮುನ್ನ 30 ಎಸೆತಕ್ಕೆ 64 ರನ್ ಗುರಿ ಇದ್ದುದ್ದನ್ನು 24 ಎಸೆತಕ್ಕೆ 28 ರನ್ಗೆ ತಂದರು. ಕೊನೆಗೂ 18.5 ಒವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ಕಿಂಗ್ಸ್ ತಂಡ ಗೆಲುವಿನ ಸಿಹಿಯನ್ನುಂಡಿತು. ಸ್ಫೋಟಕ ಆಟವಾಡಿದ ಕಾರ್ಟರ್, 29 ಎಸೆತಗಳಲ್ಲಿ 7 ಸಿಕ್ಸರ್, 3 ಬೌಂಡರಿ ಸೇರಿದಂತೆ 70 ರನ್ ಗಳಿಸಿ ಅಜೇಯರಾಗಿ ಉಳಿದರು. (ಏಜೆನ್ಸೀಸ್)