ಕ್ರೀಡೆ

ಬಾಸ್ಕೆಟ್ ಬಾಲ್ ದೈಹಿಕ ಬೆಳವಣಿಗೆ ಮತ್ತು ಏಕಾಗ್ರತೆಗೆ ಸೂಕ್ತವಾದ ಕ್ರೀಡೆ: ಮಾಜಿ ಆಟಗಾರ ಎಸ್.ಜೆ. ಸುಚೀಂದ್ರ

ಬೆಂಗಳೂರು: ಬಾಸ್ಕೆಟ್ ಬಾಲ್ ಅತ್ಯಂತ ಚುರುಕಿನ ಆಟವಾಗಿದ್ದು, ದೈಹಿಕ ಬೆಳವಣಿಗೆ ಮತ್ತು ಏಕಾಗ್ರತೆಗೆ ಅತ್ಯಂತ ಸೂಕ್ತವಾದ ಕ್ರೀಡೆ ಎಂದು ಭಾರತದ ಮಾಜಿ ಬಾಸ್ಕೆಟ್ ಬಾಲ್ ಆಟಗಾರ ಎಸ್.ಜೆ. ಸುಚೀಂದ್ರ ಹೇಳಿದ್ದಾರೆ.

ನ್ಯಾಷನಲ್ ಕಾಲೇಜ್ ಆಫ್ ಎಜುಕೇಶನ್ ಸೊಸೈಟಿ ಆಫ್ ಕರ್ನಾಟಕದಿಂದ ಎಸ್ತುರಿ ನಿಥಿಲ್ ಮೊಮೋರಿಯಲ್ ಅಂತರ್ ಕಾಲೇಜು ಬಾಸ್ಕೆಟ್ ಬಾಲ್ ಟೂರ್ನಿಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ವಿದ್ಯಾರ್ಥಿ ದಿಸೆಯಲ್ಲಿ ಬಾಸ್ಕೆಟ್ ಬಾಲ್ ಕಲಿಯಬೇಕು. ಇದು ಅಧ್ಯಯನಕ್ಕೆ ಪೂರಕವಾದ ಕ್ರೀಡೆ ಎಂದರು.

ಎನ್ಇಎಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಎಚ್.ಎನ್.ಸುಬ್ರಮಣ್ಯ ಮಾತನಾಡಿ, ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಎಲ್ಲಾ ಕ್ರೀಡೆಗಳಿಗೆ ಅವಕಾಶ ಕಲ್ಪಿಸಿದ್ದು, ವಿದ್ಯಾರ್ಥಿಗಳ ಕ್ರೀಡಾ ಭವಿಷ್ಯಕ್ಕೆ ಮುನ್ನುಡಿ ಬರೆಯುತ್ತಿದ್ದೇವೆ. ಸಾಕಷ್ಟು ಮಂದಿ ಕ್ರೀಡಾಪಟುಗಳು ವಿವಿಧ ಕ್ರೀಡೆಗಳಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿದ್ದಾರೆ. ಪ್ರತಿಭಾವಂತ ಕ್ರೀಡಾಪಟುಗಳಿರುವುದು ನಮ್ಮ ಹೆಮ್ಮೆ ಎಂದರು.

ಎನ್ಇಎಸ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ವಿ. ವೆಂಕಟಾಶಿವರೆಡ್ಡಿ ಮಾತನಾಡಿ, ವಿದ್ಯಾರ್ಥಿ ಬದುಕಿನಲ್ಲಿ ಕ್ರೀಡೆಗೆ ಸ್ಥಾನ ಇಲ್ಲದಿದ್ದರೆ ಜೀವನದುದ್ದಕ್ಕೂ ಕ್ರೀಡೆಯಲ್ಲಿ ಭಾಗವಹಿಸಲು ಅವಕಾಶ ಸಿಗುವುದಿಲ್ಲ. ಕ್ರೀಡೆ ಮಾನಸಿಕ, ದೈಹಿಕ ಬೆಳವಣಿಗೆಗೆ ಪೂರಕವಾಗಿದ್ದು, ಇದನ್ನು ವಿದ್ಯಾರ್ಥಿ ಸಮುದಾಯ ಅರಿಯಬೇಕು ಎಂದರು.

ವಿವಿಧ ಕಾಲೇಜುಗಳ 12 ತಂಡಗಳು ಟೂರ್ನಿಯಲ್ಲಿ ಭಾಗವಹಿಸಿದ್ದವು. ಈ ಪಂದ್ಯಾವಳಿಯಲ್ಲಿ ಬ್ರಿಗೇಡ್‌ ರಸ್ತೆಯ ಸೆಂಟ್‌ ಜೋಸೇಫ್‌ ಕಾಲೇಜ್‌ ಆಫ್‌ ಕಾಮರ್ಸ್‌ ವಿದ್ಯಾರ್ಥಿಗಳ ತಂಡ ಪ್ರಥಮ ಸ್ಥಾನ ಹಾಗೂ ನ್ಯಾಷನಲ್‌ ಕಾಲೇಜು ಬಸವನಗುಡಿ ವಿದ್ಯಾರ್ಥಿಗಳ ತಂಡ ಎರಡನೇ ಸ್ಥಾನ ಪಡೆದುಕೊಂಡವು. ಇದೇ ಸಂಧರ್ಭದಲ್ಲಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ 150 ವಿದ್ಯಾರ್ಥಿಗಳಿಗೆ ಕ್ರೀಡಾ ಕಿಟ್ ಅನ್ನು ವಿತರಿಸಲಾಯಿತು.