ಕ್ರೀಡೆ

ಭಾರತಕ್ಕೆ ಬಶೀರ್​ ಬ್ರೇಕ್​; ರಾಂಚಿಯಲ್ಲಿ ಇನಿಂಗ್ಸ್​ ಹಿನ್ನಡೆಯ ಭೀತಿ

ರಾಂಚಿ: ಎಡಗೈ ಆರಂಭಿಕ ಯಶಸ್ವಿ ಜೈಸ್ವಾಲ್​ (73 ರನ್​, 117 ಎಸೆತ, 8 ಬೌಂಡರಿ, 1 ಸಿಕ್ಸರ್​) ಅವರ ಮತ್ತೊಂದು ಅಮೋಘ ಇನಿಂಗ್ಸ್​ ನಡುವೆ ಭಾರತ ತಂಡ ಪ್ರವಾಸಿ ಇಂಗ್ಲೆಂಡ್​ ತಂಡದ ಯುವ ಸ್ಪಿನ್ನರ್​ ಶೋಯಿಬ್​ ಬಶೀರ್​ (84ಕ್ಕೆ 4) ದಾಳಿಗೆ ಕುಸಿದಿದೆ. ಇದರೊಂದಿಗೆ ನಾಲ್ಕನೇ ಟೆಸ್ಟ್​ ಪಂದ್ಯದಲ್ಲಿ ರೋಹಿತ್​ ಶರ್ಮ ಪಡೆ ಮೊದಲ ಇನಿಂಗ್ಸ್​ ಹಿನ್ನಡೆಯ ಭೀತಿಯಲ್ಲಿದ್ದರೆ, ಇಂಗ್ಲೆಂಡ್​ ತಂಡ ಪಂದ್ಯದ ಮೇಲೆ ಬಿಗಿಹಿಡಿತ ಸಾಧಿಸುವತ್ತ ಪ್ರಯತ್ನದಲ್ಲಿದೆ.

ಜೆಎಸ್​ಸಿಎ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಶನಿವಾರ 7 ವಿಕೆಟ್​ಗೆ 302 ರನ್​ಗಳಿಂದ ಎರಡನೇ ದಿನದಾಟ ಮುಂದುವರಿಸಿದ ಇಂಗ್ಲೆಂಡ್​, ಮತ್ತೆ 51 ರನ್​ ಸೇರಿಸಿ 353 ರನ್​ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ಭಾರತ ತಂಡ, ಜೈಸ್ವಾಲ್​ ಹೊರತಾಗಿ ಇತರ ಬ್ಯಾಟರ್​ಗಳು ಕ್ರೀಸ್​ನಲ್ಲಿ ನೆಲೆಯೂರಲು ವಿಫಲರಾಗಿದ್ದರಿಂದ ದಿನದಂತ್ಯಕ್ಕೆ 7 ವಿಕೆಟ್​ಗೆ 219 ರನ್​ ಗಳಿಸಿ ಸಂಕಷ್ಟದಲ್ಲಿದೆ. ಭಾರತ ಇನ್ನೂ 134 ರನ್​ ಹಿನ್ನಡೆಯಲ್ಲಿದ್ದು, ಪಂದ್ಯದ ಉಳಿದ 3 ದಿನಗಳಲ್ಲಿ ದಿಟ್ಟವಾಗಿ ತಿರುಗೇಟು ನೀಡಬೇಕಾದ ಸವಾಲು ಹೊಂದಿದೆ.

ವಿಕೆಟ್​ ಕೀಪರ್​-ಬ್ಯಾಟರ್​ ಧ್ರುವ ಜುರೆಲ್​ (30*) ಜತೆಗೆ ಕುಲದೀಪ್​ ಯಾದವ್​ (17*) ಮೂರನೇ ದಿನಕ್ಕೆ ಬ್ಯಾಟಿಂಗ್​ ಕಾಯ್ದುಕೊಂಡಿದ್ದಾರೆ. ದಿನದಂತ್ಯದಲ್ಲಿ ಸುಮಾರು 18 ಓವರ್​ಗಳ ಕಾಲ ಆಂಗ್ಲರಿಗೆ ಸವಾಲಾಗಿ ನಿಂತ ಈ ಜೋಡಿ ಮುರಿಯದ 8ನೇ ವಿಕೆಟ್​ಗೆ ಈಗಾಗಲೆ 42 ರನ್​ ಪೇರಿಸಿದ್ದು, ಇನಿಂಗ್ಸ್​ ಮುನ್ನಡೆಯ ಆಸೆಯನ್ನು ಇನ್ನೂ ಜೀವಂತವಿಟ್ಟಿದೆ. ಭಾರತ 7 ವಿಕೆಟ್​ಗೆ 177 ರನ್​ ಗಳಿಸಿದಾಗ ಜತೆಗೂಡಿದ ಈ ಜೋಡಿ ಮೊತ್ತವನ್ನು 200ರ ಗಡಿ ದಾಟಿಸುವಲ್ಲಿ ಯಶಸ್ವಿಯಾಯಿತು. ಪಂದ್ಯದ 3ನೇ ದಿನದಾಟಕ್ಕೆ ಮಳೆ ಭೀತಿ ಇದ್ದು, ಹೆಚ್ಚಿನ ಓವರ್​ ನಷ್ಟವಾದರೆ ಪಂದ್ಯ ಡ್ರಾದತ್ತ ಸಾಗುವ ಸಾಧ್ಯತೆ ಹೆಚ್ಚಾಗಲಿದೆ.

ಬಶೀರ್​ಗೆ ಬೆದರಿದ ಭಾರತ

ಕೇವಲ 2ನೇ ಟೆಸ್ಟ್​ ಪಂದ್ಯ ಆಡುತ್ತಿರುವ 20 ವರ್ಷದ ಸ್ಪಿನ್ನರ್​ ಶೋಯಿಬ್​ ಬಶೀರ್​ ಒಂದು ಬದಿಯಿಂದ ಸತತ 31 ಓವರ್​ಗಳ ಮ್ಯಾರಥಾನ್​ ಬೌಲಿಂಗ್​ ದಾಳಿ ನಡೆಸಿ ಭಾರತವನ್ನು ಕಾಡಿದರು. ಶುಭಮಾನ್​ ಗಿಲ್​ (38), ರಜತ್​ ಪಾಟೀದಾರ್​ (17) ಮತ್ತು ರವೀಂದ್ರ ಜಡೇಜಾಗೆ (12) ಕ್ರೀಸ್​ನಲ್ಲಿ ಹೆಚ್ಚುಹೊತ್ತು ನಿಲ್ಲಲು ಬಿಡದ ಬಶೀರ್​, ಮತ್ತೊಂದು ಶತಕದತ್ತ ಮುನ್ನಡೆದಿದ್ದ ಯಶಸ್ವಿ ಜೈಸ್ವಾಲ್​ರನ್ನೂ ಚಹಾ ವಿರಾಮದ ಬಳಿಕ ತನ್ನ ಬಲೆಗೆ ಬೀಳಿಸಿದರು. ಸ್ಕಿಡ್​ ಆಗಿ ಬಂದ ಚೆಂಡು ಜೈಸ್ವಾಲ್​ ರಕ್ಷಣಾತ್ಮಕ ಆಟವನ್ನು ಬೇಧಿಸಿ ವಿಕೆಟ್​ ಉರುಳಿಸಿತು.

ಮತ್ತೆ ಜೈಸ್ವಾಲ್​ ಆಧಾರ

ನಾಯಕ ರೋಹಿತ್​ ಶರ್ಮ (2) ಭಾರತೀಯ ಇನಿಂಗ್ಸ್​ನ 3ನೇ ಓವರ್​ನಲ್ಲೇ ವೇಗಿ ಜೇಮ್ಸ್​ ಆಂಡರ್​ಸನ್​ಗೆ ವಿಕೆಟ್​ ಒಪ್ಪಿಸಿದರು. ಬಳಿಕ ಜೈಸ್ವಾಲ್​, ಶುಭಮಾನ್​ ಗಿಲ್​ ಜತೆಗೆ 2ನೇ ವಿಕೆಟ್​ಗೆ 82 ರನ್​ ಸೇರಿಸಿ ಚೇತರಿಕೆ ಒದಗಿಸಿದರು. ಆದರೆ ಈ ಜೋಡಿ ಬೇರ್ಪಟ್ಟ ಬಳಿಕ ಬಶೀರ್​ ದಾಳಿಗೆ ಕುಸಿದ ಭಾರತ 44 ರನ್​ ಅಂತರದಲ್ಲಿ 3 ವಿಕೆಟ್​ ಕಳೆದುಕೊಂಡಿತು. ರಜತ್​ ಪಾಟೀದಾರ್​ ತನಗೆ ಸಿಕ್ಕ ಮತ್ತೊಂದು ಅವಕಾಶವನ್ನು ಕೈಚೆಲ್ಲಿದರೆ, 5ನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಆಡಿದ ಜಡೇಜಾ ಕೂಡ ನಿರಾಸೆ ಮೂಡಿಸಿದರು. ಆದರೆ ಮತ್ತೊಂದೆಡೆಯಿಂದ ತಂಡಕ್ಕೆ ಆಸರೆಯಾಗಿ ನಿಂತ 22 ವರ್ಷದ ಜೈಸ್ವಾಲ್​, ಮತ್ತೋರ್ವ ಮುಂಬೈ ಬ್ಯಾಟರ್​ ಸರ್ಫ್ರಾಜ್​​ ಖಾನ್​ (14) ಜತೆಗೂಡಿ 5ನೇ ವಿಕೆಟ್​ಗೆ 31 ರನ್​ ಸೇರಿಸಿದರು. ಈ ವೇಳೆ ರನೌಟ್​ನಿಂದ ಪಾರಾದ ಸರ್ಫ್ರಾಜ್​​, ನಂತರ ಟಾಮ್​ ಹಾರ್ಟ್ಲಿ ಎಸೆತದಲ್ಲಿ ಔಟಾದರು. ಬಳಿಕ ಆರ್​. ಅಶ್ವಿನ್​ ಸರಣಿಯಲ್ಲಿ ಬೌಲಿಂಗ್​ನಂತೆ ಬ್ಯಾಟಿಂಗ್​ನಲ್ಲೂ ನಿರಾಶಾದಾಯಕ ನಿರ್ವಹಣೆ ಮುಂದುವರಿಸಿದರು.

ಆಂಗ್ಲರಿಗೆ ಜಡೇಜಾ ಕಡಿವಾಣ

ಬೆಳಗ್ಗೆ ಜೋ ರೂಟ್​ (122*, 274 ಎಸೆತ, 10 ಬೌಂಡರಿ) ಮತ್ತು ಒಲಿ ರಾಬಿನ್​ಸನ್​ (58) ಜೋಡಿ 8ನೇ ವಿಕೆಟ್​ ಜತೆಯಾಟವನ್ನು 102 ರನ್​ಗಳಿಗೆ ವಿಸ್ತರಿಸಿತು. ಆದರೆ ರವೀಂದ್ರ ಜಡೇಜಾ (67ಕ್ಕೆ 4) ದಿನದ 13ನೇ ಓವರ್​ನಲ್ಲಿ ಈ ಜೋಡಿಯನ್ನು ಬೇರ್ಪಡಿಸುತ್ತಿದ್ದಂತೆ ಇಂಗ್ಲೆಂಡ್​ ದಿಢೀರ್​ ಕುಸಿತ ಕಂಡಿತು. 6 ರನ್​ ಅಂತರದಲ್ಲಿ ಆಂಗ್ಲರ ಕೊನೇ 3 ವಿಕೆಟ್​ಗಳು ಉರುಳಿದವು. ಶೋಯಿಬ್​ ಬಶೀರ್​, ಜೇಮ್ಸ್​ ಆಂಡರ್​ಸನ್​ ಇಬ್ಬರೂ ಖಾತೆ ತೆರೆಯದೆ ಜಡೇಜಾಗೆ ವಿಕೆಟ್​ ಒಪ್ಪಿಸಿದ್ದರಿಂದ ಶತಕವೀರ ಜೋ ರೂಟ್​ ಏಕಾಂಗಿಯಾಗಿ ಕ್ರೀಸ್​ನಲ್ಲಿ ಉಳಿದರು.