ಲಂಡನ್: ಜೆಕ್ ಗಣರಾಜ್ಯದ ಬಾರ್ಬೊರಾ ಕ್ರೆಜ್ಸಿಕೋವಾ ವಿಂಬಲ್ಡನ್ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದ ನೂತನ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಇದರೊಂದಿಗೆ 3 ವರ್ಷಗಳ ಬಳಿಕ 2ನೇ ಗ್ರಾಂಡ್ ಸ್ಲಾಂ ಪ್ರಶಸ್ತಿ ಜಯಿಸಿದ್ದಾರೆ. ವರ್ಷದ ಸತತ 2ನೇ ಗ್ರಾಂಡ್ ಸ್ಲಾಂ ಫೈನಲ್‌ನಲ್ಲಿ ಎಡವಿದ ಇಟಲಿಯ ಜಾಸ್ಮಿನ್ ಪಾವೊಲಿನಿ ರನ್ನರ್‌ಅಪ್ ಸ್ಥಾನಕ್ಕೆ ತೃಪ್ತಿಪಟ್ಟರು. 2017ರ ಬಳಿಕ ಸತತ 7ನೇ ಬಾರಿ ವಿಂಬಲ್ಡನ್ ಮಹಿಳಾ ಸಿಂಗಲ್ಸ್‌ನಲ್ಲಿ ಹೊಸ ಆಟಗಾರ್ತಿಗೆ ಪ್ರಶಸ್ತಿ ಒಲಿದಂತಾಗಿದೆ.
ಆಲ್ ಇಂಗ್ಲೆಂಡ್ ಕ್ಲಬ್‌ನ ಸೆಂಟರ್ ಕೋರ್ಟ್‌ನಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ 31ನೇ ಶ್ರೇಯಾಂಕಿತೆ ಕ್ರೆಜ್ಸಿಕೋವಾ ಮೂರು ಸೆಟ್‌ಗಳ ಹೋರಾಟದಲ್ಲಿ 6-2, 2-6, 6-4ರಿಂದ 7ನೇ ಶ್ರೇಯಾಂಕಿತೆ ಜಾಸ್ಮಿನ್ ಪಾವೊಲಿನಿ ಎದುರು ಗೆಲುವು ದಾಖಲಿಸಿದರು. 1 ಗಂಟೆ 56 ನಿಮಿಷ ನಡೆದ ಜಿದ್ದಾಜಿದ್ದಿನ ಸೆಣಸಾಟದಲ್ಲಿ 28 ವರ್ಷದ ಕ್ರೆಜ್ಸಿಕೋವಾ ಮೊದಲ ಸೆಟ್ ವಶಪಡಿಸಿಕೊಂಡು ಆತ್ಮವಿಶ್ವಾಸ ವೃದ್ಧಿಸಿಕೊಂಡರು. ಆದರೆ 2ನೇ ಸೆಟ್‌ನಲ್ಲಿ ತಿರುಗೇಟು ನೀಡಿದ ಪಾವೊಲಿನಿ ಪಂದ್ಯವನ್ನು ನಿರ್ಣಾಯಕ ಮೂರನೇ ಸೆಟ್‌ಗೆ ವಿಸ್ತರಿಸಿದರು.
3ನೇ ಸೆಟ್‌ನಲ್ಲಿ 3-3 ಗೇಮ್‌ಗಳ ನಿಕಟ ಪೈಪೋಟಿ ಏರ್ಪಟ್ಟಿತು. ಬಳಿಕ ಪಾವೊಲಿನಿ ಸವಾಲು ಹಿಮ್ಮೆಟ್ಟಿಸಿದ ಕ್ರೆಜ್ಸಿಕೋವಾ ವೃತ್ತಿಜೀವನದ 2ನೇ ಸಿಂಗಲ್ಸ್ ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆದ್ದು ಬೀಗಿದರು. ಆದರೆ ಪಾವೊಲಿನಿ ಕಳೆದ ಫ್ರೆಂಚ್ ಓಪನ್‌ನಲ್ಲೂ ರನ್ನರ್‌ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಕ್ರೆಜ್ಸಿಕೋವಾ ಈ ಮುನ್ನ 2021ರ ಫ್ರೆಂಚ್ ಓಪನ್‌ನಲ್ಲಿ ಚೊಚ್ಚಲ ಗ್ರಾಂಡ್ ಸ್ಲಾಂ ಸಿಂಗಲ್ಸ್ ಪ್ರಶಸ್ತಿ ಜಯಿಸಿದ್ದರು.
ಕ್ರೆಜ್ಸಿಕೋವಾ ಕಳೆದ ವರ್ಷದ ಚಾಂಪಿಯನ್ ಮಾರ್ಕೆಟಾ ವೊಂಡ್ರಸೊವಾ ಬಳಿಕ ವಿಂಬಲ್ಡನ್ ಟ್ರೋಫಿ ಗೆದ್ದ ಜೆಕ್ ಗಣರಾಜ್ಯದ 2ನೇ ಆಟಗಾರ್ತಿ ಎನಿಸಿದರು. ಜತೆಗೆ ಹಸಿರು ಅಂಗಣದಲ್ಲಿ ಪ್ರಶಸ್ತಿ ಗೆದ್ದ 2ನೇ ಕಡಿಮೆ ಶ್ರೇಯಾಂಕಿತ ಆಟಗಾರ್ತಿ ಎನಿಸಿದರು. ವೊಂಡ್ರೊಸೊವಾ (41) ಮೊದಲ ಸ್ಥಾನ ಕಾಯ್ದುಕೊಂಡಿದ್ದಾರೆ.
2. 2008ರ ಬಳಿಕ ಒಂದೇ ದೇಶದ ಇಬ್ಬರು ಆಟಗಾರ್ತಿಯರು ಸತತವಾಗಿ ಮಹಿಳಾ ಸಿಂಗಲ್ಸ್ ವಿಂಬಲ್ಡನ್ ಟ್ರೋಫಿ ಗೆದ್ದ ಮೊದಲ ದೃಷ್ಟಾಂತ ಇದಾಗಿದೆ. ವೀನಸ್ ವಿಲಿಯಮ್ಸ್ (2008), ಸೆರೇನಾ ವಿಲಿಯಮ್ಸ್ (2009) ಹಿಂದಿನ ಸಾಧಕರು.
2.ಕ್ರೆಜ್ಸಿಕೋವಾ ಪ್ರಸ್ತುತ ಎರಡು (್ರೆಂಚ್, ವಿಂಬಲ್ಡನ್) ಗ್ರಾಂಡ್ ಸ್ಲಾಂ ಸಿಂಗಲ್ಸ್ ಟ್ರೋಫಿ ಹೊಂದಿರುವ 2ನೇ ಆಟಗಾರ್ತಿ, ಸಿಮೊನ್ ಹ್ಯಾಲೆಪ್ ಮೊದಲಿಗರು.
3. ಕ್ರೆಜ್ಸಿಕೋವಾ ವಿಂಬಲ್ಡನ್‌ನಲ್ಲಿ ಗೆದ್ದ ಒಟ್ಟಾರೆ ಮೂರನೇ ಪ್ರಶಸ್ತಿ ಇದಾಗಿದೆ. ಇದಕ್ಕೂ ಮುನ್ನ ಮಹಿಳಾ ಡಬಲ್ಸ್‌ನಲ್ಲಿ 2018 ಹಾಗೂ 2022ರಲ್ಲಿ ಚಾಂಪಿಯನ್ ಎನಿಸಿದ್ದರು.