ಕ್ರೀಡೆ

ತವರಿನಲ್ಲಿ ಇನಿಂಗ್ಸ್ ಮುನ್ನಡೆಯ ಹೊರತಾಗಿಯೂ ಪಾಕಿಸ್ತಾನಕ್ಕೆ ಮುಖಭಂಗ

ರಾವಲ್ಪಿಂಡಿ: ಮೊದಲ ಇನಿಂಗ್ಸ್ ಹಿನ್ನಡೆಯಿಂದ ಕಂಬ್ಯಾಕ್ ಮಾಡಿದ ಪ್ರವಾಸಿ ಬಾಂಗ್ಲಾದೇಶ ತಂಡ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ಎದುರು 6 ವಿಕೆಟ್‌ಗಳ ಗೆಲುವು ದಾಖಲಿಸಿದೆ. ಇದರೊಂದಿಗೆ ಎರಡು ಪಂದ್ಯಗಳ ಸರಣಿಯಲ್ಲಿ 2-0 ಅಂತರದ ಕ್ಲೀನ್‌ಸ್ವೀಪ್‌ನೊಂದಿಗೆ ಐತಿಹಾಸಿಕ ಸಾಧನೆ ಮಾಡಿದೆ. 2009ರ ಬಳಿಕ ಬಾಂಗ್ಲಾದೇಶ ವಿದೇಶದಲ್ಲಿ ಮೊದಲ ದ್ವಿಪಕ್ಷೀಯ ಟೆಸ್ಟ್ ಸರಣಿ ಜಯಿಸಿದೆ. ಈ ಮೂಲಕ ಸೆಪ್ಟೆಂಬರ್ 19ರಿಂದ ಭಾರತದಲ್ಲಿ ನಡೆಯಲಿರುವ ಟೆಸ್ಟ್ ಸರಣಿಗೆ ಮುನ್ನ ರೋಹಿತ್ ಶರ್ಮ ಬಳಗಕ್ಕೂ ಎಚ್ಚರಿಕೆಯ ಗಂಟೆ ರವಾನಿಸಿದೆ.

ಗೆಲುವಿಗೆ 184 ರನ್ ಗುರಿ ಪಡೆದಿದ್ದ ಬಾಂಗ್ಲಾದೇಶ ಪಂದ್ಯ ಐದನೇ ಹಾಗೂ ಅಂತಿಮ ದಿನವಾದ ಮಂಗಳವಾರ ವಿಕೆಟ್‌ನಷ್ಟವಿಲ್ಲದೆ 42 ರನ್‌ಗಳಿಂದ ದಿನದ ಆಟ ಆರಂಭಿಸಿತು. ಅಗ್ರ ಕ್ರಮಾಂಕ ಬ್ಯಾಟರ್‌ಗಳ ಉಪಯುಕ್ತ ರನ್ ಕೊಡುಗೆಯಿಂದ ಅಂತಿಮವಾಗಿ 56 ಓವರ್‌ಗಳಲ್ಲಿ 4 ವಿಕೆಟ್‌ಗೆ 185 ರನ್‌ಗಳಿಸಿ ಸ್ಮರಣೀಯ ಗೆಲುವು ದಾಖಲಿಸಿತು. ಅನುಭವಿ ಆಲ್ರೌಂಡರ್ ಶಕೀಬ್ ಅಲ್ ಹಸನ್ ಗೆಲುವಿನ ರನ್ ಬಾರಿಸಿ ಸಂಭ್ರಮಿಸಿದರು. ಈ ಲಿತಾಂಶದೊಂದಿಗೆ ಪಾಕಿಸ್ತಾನ ತಂಡ ತವರಿನಲ್ಲಿ ಆಡಿದ ಹಿಂದಿನ 10 ಪಂದ್ಯಗಳಲ್ಲಿ ಒಂದೂ ಗೆಲುವು ಸಾಧಿಸದೆ ಮುಖಭಂಗ ಅನುಭವಿಸಿದೆ. 2021ರಲ್ಲಿ ದಕ್ಷಿಣ ಆಫ್ರಿಕಾ ಎದುರು ಕೊನೆಯದಾಗಿ ಟೆಸ್ಟ್‌ನಲ್ಲಿ ಪಾಕ್ ಜಯ ಕಂಡಿತ್ತು.

ಪಾಕಿಸ್ತಾನ: 274 ಹಾಗೂ 172.ಬಾಂಗ್ಲಾದೇಶ: 262 ಹಾಗೂ 4 ವಿಕೆಟ್‌ಗೆ 185 (ಜಾಕೀರ್ 40, ಶಾದ್‌ಮನ್ 24, ನಜ್ಮೂಲ್ 38, ಮೊಮಿನುಲ್ 34, ಮುಶ್ಫಿಕರ್ 22*, ಶಕೀಬ್ 21*, ಸಲ್ಮಾನ್ 17ಕ್ಕೆ 1).

.3: ಬಾಂಗ್ಲಾಗೆ ವಿದೇಶಿ ನೆಲದಲ್ಲಿ ಇದು 3ನೇ ಟೆಸ್ಟ್ ಸರಣಿ ಗೆಲುವಾಗಿದೆ. ಈ ಮುನ್ನ 2009ರಲ್ಲಿ ವೆಸ್ಟ್ ಇಂಡೀಸ್ ಮತ್ತು 2021ರಲ್ಲಿ ಜಿಂಬಾಬ್ವೆಯಲ್ಲಿ ಸರಣಿ ಗೆದ್ದಿತ್ತು.

4: ಪಾಕಿಸ್ತಾನ ತಂಡ ತವರಿನಲ್ಲಿ ಇನಿಂಗ್ಸ್ ಮುನ್ನಡೆಯ ಹೊರತಾಗಿಯೂ ಟೆಸ್ಟ್ ಪಂದ್ಯ ಸೋತ 4ನೇ ದೃಷ್ಟಾಂತ ಇದಾಗಿದೆ.