ಕ್ರೀಡೆ

ಟಿ20 ವಿಶ್ವಕಪ್‌ನಲ್ಲಿ ಓಮನ್ ಎದುರು ಗೆದ್ದ ಬಾಂಗ್ಲಾದೇಶ ಆಸೆ ಜೀವಂತ

ಮಸ್ಕತ್: ಮಾಜಿ ನಾಯಕ ಶಕೀಬ್ ಅಲ್ ಹಸನ್ (42 ರನ್, 29 ಎಸೆತ, 6 ಬೌಂಡರಿ, 28ಕ್ಕೆ 3 ವಿಕೆಟ್) ಆಲ್ರೌಂಡ್ ನಿರ್ವಹಣೆಯ ಬಲದಿಂದ ಬಾಂಗ್ಲಾದೇಶ ತಂಡ ಟಿ20 ವಿಶ್ವಕಪ್ ಟೂರ್ನಿಯ ಮೊದಲ ಸುತ್ತಿನ ತನ್ನ 2ನೇ ಪಂದ್ಯದಲ್ಲಿ ಓಮನ್ ಎದುರು 26 ರನ್‌ಗಳಿಂದ ಗೆಲುವು ದಾಖಲಿಸಿದೆ. ಈ ಮೂಲಕ ಬಾಂಗ್ಲಾ ಟೂರ್ನಿಯ ಮುಂದಿನ ಸುತ್ತಿಗೇರುವ ಆಸೆಯನ್ನು ಜೀವಂತವಿರಿಸಿದೆ. ಮೊದಲ ಪಂದ್ಯದಲ್ಲಿ ಸ್ಕಾಟ್ಲೆಂಡ್ ಎದುರು ಆಘಾತ ಎದುರಿಸಿದ್ದ ಬಾಂಗ್ಲಾ ಈ ಪಂದ್ಯ ಗೆಲ್ಲಲೇಬಾಗಿತ್ತು. ಅಂತಿಮ ಪಂದ್ಯದಲ್ಲಿ ಪಪುವಾ ನ್ಯೂ ಗಿನಿ ವಿರುದ್ಧವೂ ಗೆದ್ದರೆ ಬಾಂಗ್ಲಾ ಸೂಪರ್-12 ಹಂತಕ್ಕೇರಬಹುದಾಗಿದೆ.

ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾ ತಂಡ 20 ಓವರ್‌ಗಳಲ್ಲಿ 153 ರನ್‌ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ಓಮನ್‌ಗೆ ಭಾರತ ಮೂಲದ ಜತಿಂದರ್ ಸಿಂಗ್ (40) ಉತ್ತಮ ಆರಂಭ ಒದಗಿಸಿದರೂ, ಮಧ್ಯಮ ಕ್ರಮಾಂಕದಲ್ಲಿ ಕುಸಿತ ಕಂಡಿತು. ಕೊನೆಗೆ 9 ವಿಕೆಟ್‌ಗೆ 127 ರನ್ ಗಳಿಸಲಷ್ಟೇ ಶಕ್ತವಾಯಿತು.

ನೈಮ್-ಶಕೀಬ್ ಆಸರೆ

ಪಂದ್ಯದ 3ನೇ ಓವರ್‌ನಲ್ಲೇ ಲಿಟನ್ ದಾಸ್ (6) ವಿಕೆಟ್ ಕಳೆದುಕೊಳ್ಳುವ ಮೂಲಕ ಬಾಂಗ್ಲಾ ಆರಂಭಿಕ ಆಘಾತ ಕಂಡಿತು. ಬೆನ್ನಲ್ಲೇ ಮಹೆದಿ ಹಸನ್ (0) ಕೂಡ ನಿರಾಸೆ ಅನುಭವಿಸಿದರು. ಬಳಿಕ ಜತೆಯಾದ ಆರಂಭಿಕ ಮೊಹಮದ್ ನೈಮ್ (64 ರನ್, 50 ಎಸೆತ, 3 ಬೌಂಡರಿ, 4 ಸಿಕ್ಸರ್) ಹಾಗೂ ಶಕೀಬ್ ಅಲ್ ಹಸನ್ ಜೋಡಿ ಇನಿಂಗ್ಸ್ ಕಟ್ಟುವಲ್ಲಿ ಪ್ರಮುಖ ಪಾತ್ರವಹಿಸಿತು. ಈ ಜೋಡಿ 3ನೇ ವಿಕೆಟ್‌ಗೆ 80 ರನ್ ಕಲೆಹಾಕುವ ಮೂಲಕ ತಂಡಕ್ಕೆ ಆಸರೆಯಾಯಿತು. ಈ ಜೋಡಿ ಬೇರ್ಪಟ್ಟ ಬಳಿಕ ಬಾಂಗ್ಲಾ 41 ರನ್ ಅಂತರದಲ್ಲಿ 7 ವಿಕೆಟ್ ಕಳೆದುಕೊಂಡಿತು.

ಬಾಂಗ್ಲಾದೇಶ: 20 ಓವರ್‌ಗಳಲ್ಲಿ 153 (ಮೊಹಮದ್ ನೈಮ್ 64, ಶಕೀಬ್ ಅಲ್ ಹಸನ್ 42, ಬಿಲಾಲ್ ಖಾನ್ 18ಕ್ಕೆ 3, ಕಲೀಮುಲ್ಲಾ 20ಕ್ಕೆ 2, ಯಾಜ್ ಭಟ್ 30ಕ್ಕೆ 3). ಓಮನ್: 9 ವಿಕೆಟ್‌ಗೆ 127 (ಜತಿಂದರ್ 40, ಪ್ರಜಾಪತಿ 21, ಮುಸ್ತಾಫಿಜುರ್ 36ಕ್ಕೆ 4, ಶಕೀಬ್ 28ಕ್ಕೆ 3).