ಕ್ರೀಡೆ

ಇಂದು ದ.ಆಫ್ರಿಕಾ -ಬಾಂಗ್ಲಾ ಹಣಾಹಣಿ ; ತೆಂಬಾ ಬವುಮಾ ಪಡೆಗೆ ಗೆದ್ದರಷ್ಟೇ ಉಳಿಗಾಲ

ಅಬುಧಾಬಿ: ಸೋಲಿನೊಂದಿಗೆ ಅಭಿಯಾನ ಆರಂಭಿಸಿದರೂ ಬಳಿಕ ಸತತ 2 ಗೆಲುವು ದಾಖಲಿಸಿರುವ ದಕ್ಷಿಣ ಆಫ್ರಿಕಾ ತಂಡ ಟಿ20 ವಿಶ್ವಕಪ್ ಟೂರ್ನಿಯ ತನ್ನ ನಿರ್ಣಾಯಕ ಹಣಾಹಣಿಯಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ. ಹ್ಯಾಟ್ರಿಕ್ ಸೋಲನುಭವಿಸಿ ಟೂರ್ನಿಯಿಂದ ಹೊರಬಿದ್ದಿರುವ ಬಾಂಗ್ಲಾ ಪಾಲಿಗೆ ಈ ಪಂದ್ಯ ಔಪಚಾರಿಕವಾಗಿದ್ದರೂ ಅಂಕಪಟ್ಟಿಯಲ್ಲಿ ಕಡೇ ಸ್ಥಾನ ತಪ್ಪಿಸಿಕೊಳ್ಳಲು ಹೋರಾಡಬೇಕಿದೆ. ದಕ್ಷಿಣ ಆಫ್ರಿಕಾ ತಂಡ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಸೋಲನುಭವಿಸಿದ ಬಳಿಕ ಶ್ರೀಲಂಕಾ ಹಾಗೂ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿ ಇದೀಗ ಹ್ಯಾಟ್ರಿಕ್ ಗೆಲುವಿನ ಲೆಕ್ಕಾಚಾರದಲ್ಲಿದೆ. ಮೊದಲ ಗುಂಪಿನಿಂದ ಸೆಮಿೈನಲ್‌ಗೇರಲು ಆಸ್ಟ್ರೇಲಿಯಾದಿಂದ ಪ್ರಬಲ ಪೈಪೋಟಿ ಎದುರಿಸುತ್ತಿರುವ ದ.ಆಫ್ರಿಕಾ ತಂಡಕ್ಕೆ ಈ ಪಂದ್ಯ ಮಹತ್ವ ಪಡೆದಿದೆ.

ಪಂದ್ಯದಿಂದ ಪಂದ್ಯಕ್ಕೆ ಉತ್ತಮ ನಿರ್ವಹಣೆ ತೋರುತ್ತಾ ಬಂದಿರುವ ದಕ್ಷಿಣ ಆಫ್ರಿಕಾ ತಂಡ ಇದೀಗ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. ಕಳೆದ ಪಂದ್ಯದಲ್ಲಿ ಡೇವಿಡ್ ಮಿಲ್ಲರ್ ಸಾಹಸದಿಂದಾಗಿ ಲಂಕಾ ಪಡೆಯನ್ನು ದ.ಆಫ್ರಿಕಾ ಸೋಲಿಸಿತ್ತು. ಅನ್ರಿಚ್ ನೋಕಿಯಾ, ಡ್ವೇನ್ ಪ್ರೆಟೋರಿಯಸ್, ಟಿ20 ವಿಶ್ವ ನಂ.1 ಬೌಲರ್ ತಬರೇಜ್ ಶಮ್ಸಿ ಒಳಗೊಂಡ ಬೌಲಿಂಗ್ ಪಡೆಯೇ ತಂಡದ ದೊಡ್ಡ ಶಕ್ತಿಯಾಗಿದೆ. ಮತ್ತೊಂದೆಡೆ ಆರಂಭಿಕ ಮೂರು ಪಂದ್ಯಗಳಲ್ಲಿ ಸೋತು ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ಬಾಂಗ್ಲಾದೇಶ ತಂಡ ಗೆಲುವಿನ ಖಾತೆ ತೆರೆಯಲು ಹಂಬಲಿಸುತ್ತಿದೆ.

ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

ಮುಖಾಮುಖಿ: 6, ದಕ್ಷಿಣ ಆಫ್ರಿಕಾ: 6, ಬಾಂಗ್ಲಾದೇಶ: 0

ಟಿ20 ವಿಶ್ವಕಪ್‌ನಲ್ಲಿ: 1, ದಕ್ಷಿಣ ಆಫ್ರಿಕಾ: 1, ಬಾಂಗ್ಲಾದೇಶ: 0