ಕ್ರೀಡೆ

ಟೋಕಿಯೋ ಒಲಂಪಿಕ್ಸ್: ಕುದುರೆ ಸವಾರಿಯ ವಿಶಿಷ್ಟ ಸ್ಪರ್ಧೆಗೆ ಬೆಂಗಳೂರಿಗ

ಬೆಂಗಳೂರು : ಎರಡು ದಶಕಗಳ ನಂತರ ಒಲಂಪಿಕ್ಸ್​ನಲ್ಲಿ ಭಾರತವನ್ನು ಇಖ್ವೆಸ್ಟ್ರಿಯನ್ ಈವೆಂಟ್​(ಕುದುರೆ ಸವಾರಿ)ನಲ್ಲಿ ಪ್ರತಿನಿಧಿಸುತ್ತಿರುವ ಕ್ರೀಡಾಪಟು, ಬೆಂಗಳೂರಿನ ಫೌಆದ್ ಮಿರ್ಜ. ಚಿಕ್ಕಂದಿನಿಂದ ಕುದುರೆ ಸವಾರಿ ಬಗ್ಗೆ ಆಸಕ್ತಿ ಬೆಳೆಸಿಕೊಂಡ ಮಿರ್ಜ, 2018 ರ ಏಷಿಯನ್ ಗೇಮ್ಸ್​ನಲ್ಲಿ ವೈಯಕ್ತಿಕ ಮತ್ತು ತಂಡದ ಆಟಗಳೆರಡರಲ್ಲೂ ದೇಶಕ್ಕೆ ಎರಡು ಬೆಳ್ಳಿ ಪದಕ ತಂದಿರುವ ಕೀರ್ತಿ ಹೊಂದಿದ್ದಾರೆ.

ಅರ್ಜುನ್​ ಪ್ರಶಸ್ತಿ ವಿಜೇತರಾಗಿರುವ 29 ವರ್ಷದ ಮಿರ್ಜ, 1992 ರ ಮಾರ್ಚ್​ 6 ರಂದು ಬೆಂಗಳೂರಿನಲ್ಲಿ ಜನಿಸಿದರು. ಕುದುರೆ ಸವಾರರ ಇತಿಹಾಸವಿರುವ ಕುಟುಂಬಕ್ಕೆ ಸೇರಿದ ಅವರು, ಆರು ತಿಂಗಳ ಮಗುವಿದ್ದಾಗ ಮೊದಲ ಬಾರಿ ತಂದೆಯೊಂದಿಗೆ ಕುದುರೆಯ ಬೆನ್ನೇರಿದರು. ಹಾಲಿ, ತಮ್ಮ ಕ್ರೀಡೆಯ ಅಭ್ಯಾಸದೊಂದಿಗೆ ಕುದುರೆಗಳ ಆರೈಕೆ ಮಾಡುತ್ತಾ, ದಿನದ 12 ಗಂಟೆಗಳನ್ನು ಕುದುರೆಗಳೊಂದಿಗೇ ಕಳೆಯುತ್ತಾರೆ ಎನ್ನಲಾಗಿದೆ.

ಕುದುರೆ ಸವಾರಿ ಮಾಡುತ್ತಾ ಹರ್ಡಲ್​ಗಳನ್ನು ದಾಟುವ ವಿಶಿಷ್ಟ ಕ್ರೀಡೆಯಾದ ಈಖ್ವೆಸ್ಟ್ರಿಯನ್ ಈವೆಂಟ್​ನಲ್ಲಿ ಭಾರತದಿಂದ ಒಲಂಪಿಕ್ಸ್​ಗೆ ಆಯ್ಕೆಯಾದವರಲ್ಲಿ ಮಿರ್ಜ ಮೂರನೆಯವರು. ಪೋಲೆಂಡ್​ನಲ್ಲಿ ಆಯೋಜಿಸಲಾಗಿದ್ದ ಸ್ಪರ್ಧೆಯಲ್ಲಿ ಕನಿಷ್ಠ ಅರ್ಹತೆಯ ಮಟ್ಟವನ್ನು ಪೂರೈಸಿ ಉತ್ತಮ ಪ್ರದರ್ಶನ ನೀಡಿ, ಟೋಕಿಯೋ ಒಲಂಪಿಕ್ಸ್​ಗೆ ಅವರು ಆಯ್ಕೆಯಾಗಿದ್ದಾರೆ.