ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಚಿನ್ನಸ್ವಾಮಿ ಸ್ಟೇಡಿಯಂ 25ನೇ ಟೆಸ್ಟ್ ಪಂದ್ಯದ ಆತಿಥ್ಯಕ್ಕೆ ಸಜ್ಜಾಗಿದೆ. ಬುಧವಾರದಿಂದ ನಡೆಯಲಿರುವ ಭಾರತ ಮತ್ತು ಪ್ರವಾಸಿ ನ್ಯೂಜಿಲೆಂಡ್ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯ, ಬೆಂಗಳೂರಿನಲ್ಲಿ ನಡೆಯಲಿರುವ 25ನೇ ಟೆಸ್ಟ್ ಪಂದ್ಯವೆನಿಸಿದೆ. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ರಜತೋತ್ಸವ ಕಂಡ ಭಾರತದ ಅಪರೂಪದ ಸ್ಟೇಡಿಯಂಗಳ ಪಟ್ಟಿಗೆ ಚಿನ್ನಸ್ವಾಮಿ ಸ್ಟೇಡಿಯಂ ಸೇರ್ಪಡೆಗೊಳ್ಳುತ್ತಿದೆ. ಪಂದ್ಯಕ್ಕೆ ಪೂರ್ವಭಾವಿಯಾಗಿ ಭಾರತ&ನ್ಯೂಜಿಲೆಂಡ್ ತಂಡಗಳು ಸೋಮವಾರ ಕಠಿಣ ಅಭ್ಯಾಸ ಆರಂಭಿಸಿದವು.
ಬೆಂಗಳೂರಿನಲ್ಲಿ 1974ರಿಂದ ಇದುವರೆಗೆ ಆಯೋಜಿಸಿರುವ 24 ಪಂದ್ಯಗಳಲ್ಲಿ ಭಾರತ 9ರಲ್ಲಿ ಗೆದ್ದು, 6ರಲ್ಲಿ ಸೋತಿದೆ. ಉಳಿದ 9 ಟೆಸ್ಟ್ಗಳು ಡ್ರಾಗೊಂಡಿವೆ. ಅಲ್ಲದೆ ನ್ಯೂಜಿಲೆಂಡ್ ಎದುರು ಈ ಹಿಂದೆ ಬೆಂಗಳೂರಿನಲ್ಲಿ ಆಡಿರುವ ಮೂರು ಟೆಸ್ಟ್ಗಳಲ್ಲೂ ಗೆದ್ದ ಅಜೇಯ ದಾಖಲೆ ಆತಿಥೇಯರದ್ದಾಗಿದೆ.
ಸುಮಾರು ಎರಡೂವರೆ ವರ್ಷಗಳ ಬಳಿಕ ಉದ್ಯಾನನಗರಿಯಲ್ಲಿ ಟೆಸ್ಟ್ ಪಂದ್ಯ ನಡೆಯಲಿದೆ. 2022ರ ಮಾರ್ಚ್ನಲ್ಲಿ ಶ್ರೀಲಂಕಾ ವಿರುದ್ಧ ಕೊನೆಯದಾಗಿ ಬೆಂಗಳೂರಿನಲ್ಲಿ ಟೆಸ್ಟ್ ಆಡಿದ್ದ ಭಾರತ ತಂಡ, 238 ರನ್ಗಳಿಂದ ಗೆಲುವು ಸಾಧಿಸಿತ್ತು.
ಭಾರತ ತಂಡ ಬೆಂಗಳೂರಿನಲ್ಲಿ ನ್ಯೂಜಿಲೆಂಡ್ ಎದುರು 1988ರಲ್ಲಿ ಮೊದಲ ಟೆಸ್ಟ್ ಆಡಿತ್ತು. ಕಿವೀಸ್ ದಿಗ್ಗಜ ವೇಗಿ ರಿಚರ್ಡ್ ಹ್ಯಾಡ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಆಗಿನ ಗರಿಷ್ಠ ವಿಕೆಟ್ ಸರದಾರ ಎನಿಸಿದ್ದ ಈ ಪಂದ್ಯದಲ್ಲಿ ಭಾರತ 172 ರನ್ಗಳಿಂದ ಗೆದ್ದು ಬೀಗಿತ್ತು. ನಂತರ 1995ರಲ್ಲಿ ಮತ್ತೆ ಕಿವೀಸ್ ಎದುರು ಬೆಂಗಳೂರಿನಲ್ಲಿ 8 ವಿಕೆಟ್ಗಳಿಂದ ಜಯಿಸಿತ್ತು. 2012ರಲ್ಲಿ ಕಿವೀಸ್ ಎದುರು ಬೆಂಗಳೂರಿನಲ್ಲಿ ಕೊನೆಯದಾಗಿ ಆಡಿದಾಗ ಭಾರತ, 5 ವಿಕೆಟ್ಗಳಿಂದ ಗೆದ್ದು ಸರಣಿ ವಶಪಡಿಸಿಕೊಂಡಿತ್ತು. ಶತಕವೀರ ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠರಾಗಿದ್ದರು. ಈಗಿನ ಕೋಚ್ ಗೌತಮ್ ಗಂಭೀರ್ ಆಗ ತಂಡದ ಆರಂಭಿಕರಾಗಿದ್ದರು. ಆ ಪಂದ್ಯದಲ್ಲಿ ಆಡಿದ್ದ ಮೂವರು ಆಟಗಾರರಷ್ಟೇ (ಕೊಹ್ಲಿ, ಅಶ್ವಿನ್, ಸೌಥಿ) ಈ ಸಲವೂ ಕಣಕ್ಕಿಳಿಯಲಿದ್ದಾರೆ.
*5: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ 25 ಟೆಸ್ಟ್ ಪಂದ್ಯಗಳಿಗೆ ಆತಿಥ್ಯ ವಹಿಸಿದ ಭಾರತದ 5ನೇ ಸ್ಟೇಡಿಯಂ ಎನಿಸಲಿದೆ. ಇದುವರೆಗಿನ ಸ್ಟೇಡಿಯಂಗಳೆಂದರೆ ಈಡನ್ ಗಾರ್ಡನ್ಸ್, ಕೋಲ್ಕತ (42), ಚಿದಂಬರಂ, ಚೆನ್ನೈ (35), ಅರುಣ್ ಜೇಟ್ಲಿ ಸ್ಟೇಡಿಯಂ, ನವದೆಹಲಿ (35), ವಾಂಖೆಡೆ, ಮುಂಬೈ (26).
ಮೂವರು ವೇಗಿಗಳು ಕಣಕ್ಕೆ?
ಆಸ್ಟ್ರೆಲಿಯಾ ಪ್ರವಾಸಕ್ಕೆ ಪೂರ್ವಭಾವಿಯಾಗಿ ಭಾರತ ತಂಡ ಬೆಂಗಳೂರಿನಲ್ಲೂ ವೇಗದ ಬೌಲಿಂಗ್ ಸ್ನೇಹಿ ಪಿಚ್ನಲ್ಲಿ ಆಡುವ ನಿರೀೆ ಇದ್ದು, ಮೂವರು ವೇಗಿಗಳನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ. ಬಾಂಗ್ಲಾ ವಿರುದ್ಧದ ಮೊದಲ ಟೆಸ್ಟ್ನಂತೆ ಮತ್ತೆ ಜಸ್ಪ್ರೀತ್ ಬುಮ್ರಾ, ಮೊಹಮದ್ ಸಿರಾಜ್, ಆಕಾಶ್ದೀಪ್ರನ್ನು ಬೆಂಗಳೂರಿನಲ್ಲೂ ಕಣಕ್ಕಿಳಿಸುವ ಲೆಕ್ಕಾಚಾರವಿದೆ. ಅಲ್ಲದೆ ಪಿಚ್ ಮೇಲಿನ ಸ್ವಲ್ಪ ಹಸಿರು ಹುಲ್ಲು ಮತ್ತು ಬೆಂಗಳೂರಿನ ಮೋಡಕವಿದ ವಾತಾವರಣ ಮತ್ತು ಮಳೆ ವೇಗದ ಬೌಲರ್ಗಳಿಗೆ ಅನುಕೂಲಕರವೆನಿಸಿದೆ. ಆದರೆ ಇತ್ತೀಚೆಗೆ ಲಂಕಾದಲ್ಲಿ ಆಡಿದ 2 ಟೆಸ್ಟ್ಗಳಲ್ಲಿ ಕಿವೀಸ್ 37 ವಿಕೆಟ್ಗಳನ್ನು ಸ್ಪಿನ್ನರ್ಗಳಿಗೇ ಒಪ್ಪಿಸಿತ್ತು. ಇದು ಭಾರತಕ್ಕೆ ಅಕ್ಷರ್ ಪಟೇಲ್ ಅಥವಾ ಕುಲದೀಪ್ ಯಾದವ್ರನ್ನು 3ನೇ ಸ್ಪಿನ್ನರ್ ಆಗಿ ಆಡಿಸುವ ಪ್ರಚೋದನೆಯನ್ನೂ ನೀಡುತ್ತಿದೆ. ಹೀಗಾಗಿ ಬುಧವಾರ ಬೆಳಗ್ಗೆ ಟಾಸ್ ಸಮಯದವರೆಗೂ ಭಾರತದ ಆಡುವ 11ರ ಬಳಗದ ಬಗ್ಗೆ ಗೊಂದಲ ಮುಂದುವರಿಯಲಿದೆ.