ಕ್ರೀಡೆ

ಐಪಿಎಲ್-13ರಲ್ಲಿ ಸನ್‌ರೈಸರ್ಸ್‌ಗೆ ಮೊದಲ ಜಯ, ಡೆಲ್ಲಿಗೆ ಮೊದಲ ಸೋಲು

ಅಬುಧಾಬಿ: ಸ್ಪಿನ್ನರ್ ರಶೀದ್ ಖಾನ್ (14ಕ್ಕೆ 3) ಮತ್ತು ವೇಗಿ ಭುವನೇಶ್ವರ್ ಕುಮಾರ್ (25ಕ್ಕೆ 2) ಬಿಗಿ ಬೌಲಿಂಗ್ ದಾಳಿಯ ನೆರವಿನಿಂದ ಸನ್‌ರೈಸರ್ಸ್‌ ಹೈದರಾಬಾದ್ ತಂಡ ಅರಬ್ ರಾಷ್ಟ್ರದಲ್ಲಿ ನಡೆಯುತ್ತಿರುವ ಐಪಿಎಲ್ 13ನೇ ಆವೃತ್ತಿಯಲ್ಲಿ ಕೊನೆಯ ತಂಡವಾಗಿ ಗೆಲುವಿನ ಖಾತೆ ತೆರೆದಿದೆ. ಸತತ 2 ಗೆಲುವಿನೊಂದಿಗೆ ಟೂರ್ನಿಯಲ್ಲಿ ಭರ್ಜರಿ ಆರಂಭ ಕಂಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 15 ರನ್‌ಗಳಿಂದ ಮಣಿಸುವ ಮೂಲಕ ಸನ್‌ರೈಸರ್ಸ್‌ ತಂಡ ಟೂರ್ನಿಯಲ್ಲಿ ಸತತ 2 ಸೋಲಿನ ಬಳಿಕ ಮೊದಲ ಗೆಲುವು ಸಾಧಿಸಿತು.

ಶೇಖ್ ಜಯೆದ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಸನ್‌ರೈಸರ್ಸ್‌ ತಂಡಕ್ಕೆ ಆರಂಭಿಕರು ಎಚ್ಚರಿಕೆಯ ಬುನಾದಿ ಹಾಕಿಕೊಟ್ಟರು. ಮಧ್ಯಮ ಕ್ರಮಾಂಕದಲ್ಲಿ ಕೇನ್ ವಿಲಿಯಮ್ಸನ್ (41 ರನ್, 26 ಎಸೆತ, 5 ಬೌಂಡರಿ) ಬಿರುಸಿನ ಬ್ಯಾಟಿಂಗ್‌ನಿಂದ ಮೊತ್ತ ಏರಿಸಿದರು. ಇದರ ಲವಾಗಿ ಸನ್‌ರೈಸರ್ಸ್‌ ತಂಡ 4 ವಿಕೆಟ್‌ಗೆ 162 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ಪ್ರತಿಯಾಗಿ ಡೆಲ್ಲಿ ತಂಡ 7 ವಿಕೆಟ್‌ಗೆ 147 ರನ್ ಗಳಿಸಲಷ್ಟೇ ಶಕ್ತವಾಯಿತು.

ಡೆಲ್ಲಿಗೆ ಭುವಿ, ರಶೀದ್ ಶಾಕ್

ಡೆಲ್ಲಿ ಚೇಸಿಂಗ್‌ಗೆ ಉತ್ತಮ ಆರಂಭ ಸಿಗಲಿಲ್ಲ. ಪೃಥ್ವಿ ಷಾ (2) ಮೊದಲ ಓವರ್‌ನಲ್ಲೇ ಭುವನೇಶ್ವರ್‌ಗೆ ವಿಕೆಟ್ ಒಪ್ಪಿಸಿದರು. ನಂತರ ಎಡಗೈ ಆರಂಭಿಕ ಶಿಖರ್ ಧವನ್ (34) ಮತ್ತು ನಾಯಕ ಶ್ರೇಯಸ್ ಅಯ್ಯರ್ (17) 2ನೇ ವಿಕೆಟ್‌ಗೆ 40 ರನ್ ಸೇರಿಸಿದರು. ಆದರೆ ಇವರಿಬ್ಬರನ್ನೂ ಡಗೌಟ್‌ಗೆ ಅಟ್ಟಿದ ಸ್ಪಿನ್ನರ್ ರಶೀದ್ ಖಾನ್ ಡೆಲ್ಲಿ ಮೇಲೆ ಒತ್ತಡ ಹೇರಿದರು. 51 ಎಸೆತಗಳಲ್ಲಿ 101 ರನ್ ಬೇಕಾಗಿದ್ದಾಗ ಜತೆಗೂಡಿದ ರಿಷಭ್ ಪಂತ್ ಮತ್ತು ಶಿಮ್ರೋನ್ ಹೆಟ್ಮೆಯರ್ (21 ರನ್, 12 ಎಸೆತ, 2 ಸಿಕ್ಸರ್) 22 ಎಸೆತಗಳಲ್ಲಿ 42 ರನ್ ಕೂಡಿಹಾಕಿದರು. ಇದರಿಂದ ಡೆಲ್ಲಿಗೆ ಕೊನೇ 5 ಓವರ್‌ಗಳಲ್ಲಿ 59 ರನ್ ಗಳಿಸುವ ಸವಾಲು ಎದುರಾಯಿತು. ಆಗ ಹೆಟ್ಮೆಯರ್ ವಿಕೆಟ್ ಕಬಳಿಸಿದ ಭುವನೇಶ್ವರ್ ಡೆಲ್ಲಿಗೆ ಮತ್ತೊಮ್ಮೆ ಹೊಡೆತ ನೀಡಿದರು. ಅದರ ಬೆನ್ನಲ್ಲೇ ರಿಷಭ್ ಪಂತ್‌ಗೂ (32 ರನ್, 27 ಎಸೆತ, 2 ಬೌಂಡರಿ, 2 ಸಿಕ್ಸರ್) ರಶೀದ್ ಖಾನ್ ಸ್ಪಿನ್ ಬಲೆ ಬೀಸಿದರು. ಡೆಲ್ಲಿ ತಂಡದ ಮೊದಲ ಗೆಲುವಿನ ಹೀರೋ ಮಾರ್ಕಸ್ ಸ್ಟೋಯಿನಿಸ್ (11) ಕೂಡ ಈ ಬಾರಿ ವೈಲ್ಯ ಕಂಡರು. ಇದರೊಂದಿಗೆ ಡೆಲ್ಲಿ ಗೆಲುವಿನ ಹೋರಾಟವೂ ಕೊನೆಗೊಂಡಿತು.

ಸನ್‌ರೈಸರ್ಸ್‌ಗೆ ಅಮಿತ್ ಮಿಶ್ರಾ ಕಡಿವಾಣ

ನಾಯಕ ಡೇವಿಡ್ ವಾರ್ನರ್ (45 ರನ್, 33 ಎಸೆತ, 3 ಬೌಂಡರಿ, 2 ಸಿಕ್ಸರ್) ಮತ್ತು ಜಾನಿ ಬೇರ್‌ಸ್ಟೋ (53 ರನ್, 48 ಎಸೆತ, 2 ಬೌಂಡರಿ, 1 ಸಿಕ್ಸರ್) ಜೋಡಿ ಸನ್‌ರೈಸರ್ಸ್‌ ತಂಡಕ್ಕೆ ಎಚ್ಚರಿಕೆಯ ಆರಂಭ ಒದಗಿಸಿತು. ರನ್‌ಗತಿ ಏರಿಸುವುದಕ್ಕಿಂತ ವಿಕೆಟ್ ಕಾಯ್ದುಕೊಳ್ಳುವುದಕ್ಕೆ ಹೆಚ್ಚಿನ ಆದ್ಯತೆ ನೀಡಿದ ಈ ಜೋಡಿ ಪವರ್‌ಪ್ಲೇನಲ್ಲಿ 38 ರನ್ ಮಾತ್ರ ಗಳಿಸಿತ್ತು. ಬಳಿಕ ವಾರ್ನರ್ ರನ್ ಗತಿ ಏರಿಸಲು ಮುಂದಾದರು. ಪಂದ್ಯದ 10ನೇ ಓವರ್‌ನಲ್ಲಿ ಡೆಲ್ಲಿ ತಂಡ ಕೊನೆಗೂ, ಅಪಾಯಕಾರಿಯಾಗಿ ಬೆಳೆಯುತ್ತಿದ್ದ ಈ ಜತೆಯಾಟವನ್ನು ಮುರಿಯುವಲ್ಲಿ ಸಲವಾಯಿತು. ಮೊದಲ ವಿಕೆಟ್‌ಗೆ 57 ಎಸೆತಗಳಲ್ಲಿ 77 ರನ್ ಕೂಡಿ ಹಾಕಿದಾಗ ಸ್ಪಿನ್ನರ್ ಅಮಿತ್ ಮಿಶ್ರಾ ಎಸೆತದಲ್ಲಿ ರಿವರ್ಸ್ ಸ್ವೀಪ್‌ಗೆ ಯತ್ನಿಸಿದ ವಾರ್ನರ್, ಕೀಪರ್ ಪಂತ್‌ಗೆ ಕ್ಯಾಚ್ ನೀಡಿದರು. ಮಿಶ್ರಾ ಮನವಿಯನ್ನು ಅಂಪೈರ್ ಪುರಸ್ಕರಿಸದಿದ್ದರೂ, ಡಿಆರ್‌ಎಸ್‌ಗೆ ಮೊರೆ ಹೋದ ಡೆಲ್ಲಿ ತಂಡ ಮೊದಲ ಯಶಸ್ಸು ಸಂಪಾದಿಸಿತು. ಬೆನ್ನಲ್ಲೇ ಕನ್ನಡಿಗ ಮನೀಷ್ ಪಾಂಡೆ ಕಳೆದೆರಡು ಪಂದ್ಯಗಳ ಉತ್ತಮ ಾರ್ಮ್ ಮುಂದುವರಿಸಲು ವಿಲರಾದರು.

ಸನ್ ಮೊತ್ತ ಏರಿಸಿದ ಕೇನ್, ಕಾಡಿದ ರಬಾಡ

ಸನ್‌ರೈಸರ್ಸ್‌ ಮಧ್ಯಮ ಕ್ರಮಾಂಕದ ವೈಲ್ಯ ನೀಗಿಸುವ ಜವಾಬ್ದಾರಿಯೊಂದಿಗೆ ಟೂರ್ನಿಯಲ್ಲಿ ಮೊದಲ ಪಂದ್ಯವಾಡಿದ ವಿಲಿಯಮ್ಸನ್, ಬೇರ್‌ಸ್ಟೋ ಜತೆಗೂಡಿ 3ನೇ ವಿಕೆಟ್‌ಗೆ 52 ರನ್ ಸೇರಿಸಿದರು. ಈ ಪೈಕಿ 38 ರನ್ ವಿಲಿಯಮ್ಸನ್ ಅವರ ಬ್ಯಾಟ್‌ನಿಂದಲೇ ಬಂದರೆ, ಬೇರ್‌ಸ್ಟೋ ರನ್‌ಗತಿ ಏರಿಸಲು ಪರದಾಡುತ್ತಿದ್ದರು. ಪಂದ್ಯದ 18ನೇ ಓವರ್‌ನಲ್ಲಿ ರಬಾಡ, ಬೇರ್‌ಸ್ಟೋಗೆ ಡಗೌಟ್ ದಾರಿ ತೋರಿಸಿದರು. ಇನಿಂಗ್ಸ್‌ನ ಕೊನೇ ಓವರ್‌ನಲ್ಲಿ ವಿಲಿಯಮ್ಸನ್ ಕೂಡ ರಬಾಡಗೆ ವಿಕೆಟ್ ಒಪ್ಪಿಸಿದರು. ಈ ನಡುವೆ, ಐಪಿಎಲ್‌ಗೆ ಪದಾರ್ಪಣೆ ಮಾಡಿದ ಯುವ ಆಟಗಾರ ಅಬ್ದುಲ್ ಸಮದ್, 7 ಎಸೆತಗಳಲ್ಲಿ 12 ರನ್ ಕಸಿದು ಸನ್‌ರೈಸರ್ಸ್‌ ಮೊತ್ತವನ್ನು 160ರ ಗಡಿ ದಾಟಿಸಿದರು. ವಿಕೆಟ್ ಕಾಯ್ದುಕೊಂಡರೂ ಸನ್‌ರೈಸರ್ಸ್‌ ಕೊನೇ 5 ಓವರ್‌ಗಳಲ್ಲಿ 45 ರನ್ ಕಲೆಹಾಕಲಷ್ಟೇ ಶಕ್ತವಾಯಿತು.