ವಿಶ್ವ ಪಿಕಲ್‌ಬಾಲ್ ಚಾಂಪಿಯನ್‌ಶಿಪ್ ಟೂರ್ನಿಗೆ ಚಾಲನೆ 
ಬ್ಯಾಡ್ಮಿಂಟನ್

ವಿಶ್ವ ಪಿಕಲ್‌ಬಾಲ್ ಚಾಂಪಿಯನ್‌ಶಿಪ್ ಟೂರ್ನಿಗೆ ಚಾಲನೆ

ಬೆಂಗಳೂರು: ದೇಶದ ಮೊಟ್ಟ ಮೊದಲ ವಿಶ್ವ ಪಿಕಲ್‌ಬಾಲ್ ಚಾಂಪಿಯನ್‌ಶಿಪ್ ಶುಕ್ರವಾರ ಉದ್ಘಾಟನೆಗೊಂಡಿದ್ದು, ನಗರದ ಹೊರವಲಯದಲ್ಲಿರುವ ಟಾಪ್‌ಸ್ಪಿನ್ ಅಕಾಡೆಮಿಯ ೧೨ ಕೋರ್ಟ್ಗಳಲ್ಲಿ ಮೊದಲ ದಿನವೇ ೨೫೦ ಮಂದಿ ಆಟಗಾರರು ಸ್ಪರ್ಧಿಸಿದರು.
ಸ್ಪರ್ಧೆಗಳು ಆರಂಭಗೊಳ್ಳುವ ಮುನ್ನ ನಡೆದ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಪಿಕಲ್‌ಬಾಲ್ ಅಸೋಸಿಯೇಷನ್ ಅಧ್ಯಕ್ಷ.ಜಿ. ಶಿವಕುಮಾರ್, ಉಪಾಧ್ಯಕ್ಷ ಶ್ರೀನಿವಾಸ್‌ಗೌಡ, ಅಖಿಲ ಭಾರತದ ಪಿಕಲ್‌ಬಾಲ್ ಅಸೋಸಿಯೇಷನ್ ಅಧ್ಯಕ್ಷರಾದ ಅರವಿಂದ ಪ್ರಭು, ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ ಸೇರಿದಂತೆ ಒಟ್ಟು ೯ ರಾಜ್ಯಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಪಾಲ್ಗೊಂಡಿದ್ದರು.
ನಿರ್ಮಾಪಕರಾದ ಇ. ಕೃಷ್ಣಪ್ಪ ಅವರಿಂದ ಉದ್ಘಾಟನೆಯಾದ ಈ ವಿಶ್ವ ಪಿಕಲ್‌ಬಾಲ್ ಚಾಂಪಿಯನ್‌ಶಿಪ್, ನವೆಂಬರ್ ೨೩ರವರೆಗೂ ನಡೆಯಲಿದ್ದು, ಒಟ್ಟು ೭೩೦ ಮಂದಿ ಸ್ಪರ್ಧಿಸಲಿದ್ದಾರೆ.
ಈ ವೇಳೆ ಮಾತಾಡಿದ ಪ್ರಧಾನ ಕಾರ್ಯದರ್ಶಿ ರಜತ್ ಕಾಂಕರ್ `ಈ ಸ್ಪರ್ಧೆಯಲ್ಲಿ ದೇಶದ ಎಲ್ಲಾ ರಾಜ್ಯಗಳಿಂದಲೂ ಸ್ಪರ್ಧಿಗಳು ಭಾಗವಹಿಸುತ್ತಿದ್ದು, ಇಲ್ಲಿ ಗೆದ್ದವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಫೈನಲ್ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ' ಎಂದು ತಿಳಿಸಿದರು.