ವಿಶ್ವ ಬ್ಯಾಡ್ಮಿಂಟನ್: ಪ್ರಿ ಕ್ವಾರ್ಟರ್ಫೈನಲ್ಗೇರಿದ ಸಿಂಧು, ಆಯುಷ್; ಲಕ್ಷ್ಯ, ಉನ್ನತಿ ಹೊರಕ್ಕೆ!
ನವದೆಹಲಿ: ಆತಿಥೇಯ ಭಾರತದ ತಾರೆಯರಾದ ಪಿವಿ ಸಿಂಧು ಮತ್ತು ಕನ್ನಡಿಗ ಆಯುಷ್ ಶೆಟ್ಟಿ ಪ್ರತಿಷ್ಠಿತ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಲ್ಲಿ (
) ಪ್ರಿ ಕ್ವಾರ್ಟರ್ಫೈನಲ್ ಪ್ರವೇಶಿಸಿದ್ದಾರೆ. ಲಕ್ಷ್ಯ ಸೇನ್ ಮತ್ತು ಉನ್ನತಿ ಹೂಡಾ ಎರಡನೇ ಸುತ್ತಿನಲ್ಲಿ ಸೋಲು ಅನುಭವಿಸಿ ಹೊರಬಿದ್ದರು.
ಆರನೇ ವಿಶ್ವ ಚಾಂಪಿಯನ್ಷಿಪ್ ಪದಕದ ನಿರೀಕ್ಷೆಯಲ್ಲಿರುವ ಅನುಭವಿ ಷಟ್ಲರ್ ಪಿವಿ ಸಿಂಧು, ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ನಡೆದ 32ರ ಘಟ್ಟದ ಪಂದ್ಯದಲ್ಲಿ ಕೆನಡಾದ ವೆನ್ ಯು ಜಾಂಗ್ ವಿರುದ್ಧ 21-16, 21-17 ನೇರಗೇಮ್ಗಳಿಂದ 35 ನಿಮಿಷಗಳಲ್ಲೇ ಗೆಲುವು ದಾಖಲಿಸಿದರು. 31 ವರ್ಷದ ಪಿವಿ ಸಿಂಧುಗೆ 16ರ ಘಟ್ಟದಲ್ಲಿ 3ನೇ ಶ್ರೇಯಾಂಕಿತೆ ಚೀನಾದ ವಾಂಗ್ ಜಿ ಯೀ ಸವಾಲು ಎದುರಾಗಲಿದೆ.
ಮೊದಲ ಸುತ್ತಿನಲ್ಲಿ ವಿಶ್ವ ನಂ. 1 ಯು ಶಿ ಖಿಗೆ ಆಘಾತಕಾರಿ ಸೋಲುಣಿಸಿ ಗಮನಸೆಳೆದಿದ್ದ 21 ವರ್ಷದ ಆಯುಷ್ ಶೆಟ್ಟಿ 2ನೇ ಸುತ್ತಿನಲ್ಲಿ ಶ್ರೀಲಂಕಾದ ದುಮಿಂದು ಅಬೆಯವಿಕ್ರಮ ವಿರುದ್ಧ 21-8, 21-10 ನೇರಗೇಮ್ಗಳಿಂದ ಸುಲಭ ಗೆಲುವು ದಾಖಲಿಸಿದರು. 26 ನಿಮಿಷಗಳಲ್ಲೇ ಗೆದ್ದ ಆಯುಷ್, 16ರ ಘಟ್ಟದಲ್ಲಿ 11ನೇ ಶ್ರೇಯಾಂಕಿತ ಇಂಡೋನೇಷ್ಯಾದ ಅಲ್ವಿ ರ್ಹಾನ್ ಸವಾಲು ಎದುರಿಸಲಿದ್ದಾರೆ.
14ನೇ ಶ್ರೇಯಾಂಕಿತ ಲಕ್ಷ್ಯ ಸೇನ್ 2ನೇ ಸುತ್ತಿನ ಪಂದ್ಯದಲ್ಲಿ ಅಮೆರಿಕದ ಗರೆಟ್ ಟಾನ್ ವಿರುದ್ಧ 21-19, 19-21, 17-21ರಿಂದ 73 ನಿಮಿಷಗಳ ಹೋರಾಟದಲ್ಲಿ ಪರಾಭವಗೊಂಡರು. ಲಕ್ಷ್ಯ ಸೇನ್ ಮೊದಲ ಗೇಮ್ ಗೆದ್ದು ಉತ್ತಮ ಆರಂಭವನ್ನೇ ಕಂಡರೂ, ನಂತರದಲ್ಲಿ ಲಯ ತಪ್ಪಿದರು. ಯುವ ಆಟಗಾರ್ತಿ ಉನ್ನತಿ ಹೂಡಾ ಮಹಿಳಾ ಸಿಂಗಲ್ಸ್ ವಿಭಾಗದ 2ನೇ ಸುತ್ತಿನ ಪಂದ್ಯದಲ್ಲಿ ಕೆನಡಾದ ಮಿಚೆಲ್ ಲೀ ವಿರುದ್ಧ 21-11, 9-21, 21-23ರಿಂದ ವೀರೋಚಿತ ಸೋಲು ಅನುಭವಿಸಿದರು.
ಮಿಶ್ರ ಡಬಲ್ಸ್ ವಿಭಾಗದಲ್ಲಿ ತನಿಷಾ ಕ್ರಾಸ್ಟೋ ಮತ್ತು ಧ್ರುವ ಕಪಿಲ ಜೋಡಿ ಪ್ರಿ ಕ್ವಾರ್ಟರ್ಫೈನಲ್ ಪ್ರವೇಶಿಸಿದೆ. ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದ ತನಿಷಾ-ಕಪಿಲ ಜೋಡಿ 2ನೇ ಸುತ್ತಿನ ಪಂದ್ಯದಲ್ಲಿ ಮಕಾವ್ನ ಲಿಯೋಂಗ್ ಲೋಕ್ ಚೊಂಗ್ ಮತ್ತು ಎನ್ಜಿ ವೆಂಗ್ ಜೋಡಿಯನ್ನು 21-11, 21-11 ನೇರಗೇಮ್ಗಳಿಂದ ಮಣಿಸಿತು.
ಮಾಜಿ ವಿಶ್ವ ನಂ. 1 ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ ಜೋಡಿ ವಿಶ್ವ ಚಾಂಪಿಯನ್ಷಿಪ್ನಲ್ಲಿ ಇದುವರೆಗೆ ಒಂದೂ ಪಂದ್ಯ ಆಡದೆಯೂ 16ರ ಘಟ್ಟಕ್ಕೇರಿದೆ. ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದ 5ನೇ ಶ್ರೇಯಾಂಕಿತ ಸಾತ್ವಿಕ್-ಚಿರಾಗ್ ಜೋಡಿಗೆ ಬುಧವಾರ ನಡೆಯಬೇಕಿದ್ದ 2ನೇ ಸುತ್ತಿನ ಪಂದ್ಯಕ್ಕೆ ಮುನ್ನ ಎದುರಾಳಿ ಜೋಡಿ ಗಾಯದ ಸಮಸ್ಯೆಯಿಂದಾಗಿ ವಾಕ್ಓವರ್ ನೀಡಿತು. ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ಮತ್ತೊಂದು ಜೋಡಿಯಾದ ಹರಿಹರನ್ ಮತ್ತು ಎಂ. ಆರ್. ಅರ್ಜುನ್ ಎರಡನೇ ಸುತ್ತಿನಲ್ಲಿ ಹೊರಬಿದ್ದರು.