Badminton: ಪ್ರಶಸ್ತಿ ಸುತ್ತಿಗೇರಿದ ಶ್ರೀಕಾಂತ್​, ತ್ರಿಸಾ-ಗಾಯತ್ರಿ 
ಬ್ಯಾಡ್ಮಿಂಟನ್

Badminton: ಪ್ರಶಸ್ತಿ ಸುತ್ತಿಗೇರಿದ ಶ್ರೀಕಾಂತ್​, ತ್ರಿಸಾ-ಗಾಯತ್ರಿ

ಲಖನೌ: ಮಾಜಿ ಚಾಂಪಿಯನ್​ ಕಿಡಂಬಿ ಶ್ರೀಕಾಂತ್​ ಪುರುಷರ ಸಿಂಗಲ್ಸ್​ ವಿಭಾಗದಲ್ಲಿ ಮತ್ತು ಹಾಲಿ ಚಾಂಪಿಯನ್​ಗಳಾದ ತ್ರಿಸಾ ಜೋಲಿ-ಗಾಯತ್ರಿ ಗೋಪಿಚಂದ್​ ಮಹಿಳಾ ಡಬಲ್ಸ್​ ವಿಭಾಗದಲ್ಲಿ, ಸಯ್ಯದ್​ ಮೋದಿ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್​ ಟೂರ್ನಿಯ (Syed Modi International badminton tournament) ಫೈನಲ್​ ಪ್ರವೇಶಿಸಿದ್ದಾರೆ.
32 ವರ್ಷದ ಶ್ರೀಕಾಂತ್​ (Kidambi Srikanth ) ಶನಿವಾರ ನಡೆದ ಸೆಮಿಫೈನಲ್​ ಪಂದ್ಯದಲ್ಲಿ 2023ರ ರಾಷ್ಟ್ರೀಯ ಚಾಂಪಿಯನ್​ ಹಾಗೂ ಕನ್ನಡಿಗ ಮಿಥುನ್​ ಮಂಜುನಾಥ್​ ವಿರುದ್ಧ 21-15, 19-21, 21-13 ಗೇಮ್​ಗಳಿಂದ ಗೆಲುವು ದಾಖಲಿಸಿದರು. 2016ರಲ್ಲಿ ಟೂರ್ನಿಯ ಪ್ರಶಸ್ತಿ ಜಯಿಸಿದ್ದ ಶ್ರೀಕಾಂತ್​ ಇದೀಗ 9 ವರ್ಷಗಳ ನಂತರ ಮತ್ತೆ ಚಾಂಪಿಯನ್​ ಪಟ್ಟವೇರುವ ಸನಿಹ ತಲುಪಿದ್ದಾರೆ. ಮಾಜಿ ವಿಶ್ವ ನಂ.1 ಶ್ರೀಕಾಂತ್​ ಭಾನುವಾರ ನಡೆಯಲಿರುವ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಹಾಂಕಾಂಗ್​ನ ಜೇಸನ್​ ಗುನವನ್​ ಸವಾಲು ಎದುರಿಸಲಿದ್ದಾರೆ.

ವಿಶ್ವ ನಂ. 14 ತ್ರಿಸಾ ಜೋಲಿ-ಗಾಯತ್ರಿ ಗೋಪಿಚಂದ್​ ಜೋಡಿ (Treesa Jolly and Gayatri Gopichand) ಮತ್ತೊಂದೆಡೆ ಮಲೇಷ್ಯಾದ ಒಂಗ್​ ಕ್ಸಿನ್​ ಯೀ&ಕಾರ್ಮೆನ್​ ಟಿಂಗ್​ ಜೋಡಿಯನ್ನು 21-11, 21-15 ನೇರಗೇಮ್​ಗಳಿಂದ ಮಣಿಸಿ, ಸತತ 2ನೇ ವರ್ಷ ಪ್ರಶಸ್ತಿ ಜಯಿಸುವ ಸನಿಹ ತಲುಪಿದೆ. ಭುಜನೋವಿನಿಂದಾಗಿ ಗಾಯತ್ರಿ 5 ತಿಂಗಳ ಕಾಲ ವಿಶ್ರಾಂತಿ ಪಡೆದ ಬಳಿಕ ಮರಳಿ ಕಣಕ್ಕಿಳಿದಿರುವ ಭಾರತೀಯ ಜೋಡಿ, ಭಾನುವಾರ ಫೈನಲ್​ನಲ್ಲಿ 8ನೇ ಶ್ರೇಯಾಂಕಿತ ಜಪಾನ್​ನ ಕಹೊ ಒಸಾವಾ-ಮೈ ತನಬೆ ಜೋಡಿಯನ್ನು ಎದುರಿಸಲಿದೆ.

ಮತ್ತೊಂದೆಡೆ ಮಹಿಳಾ ಸಿಂಗಲ್ಸ್​ ವಿಭಾಗದಲ್ಲಿ ಭಾರತದ ಉನ್ನತಿ ಹೂಡಾ ಮತ್ತು ತನ್ವಿ ಶರ್ಮ ಸೆಮೀಸ್​ನಲ್ಲೇ ನಿರಾಸೆ ಅನುಭವಿಸಿದರು. ಉನ್ನತಿ 15-21, 10-21ರಿಂದ ಟರ್ಕಿಯ ನೆಸ್ಲಿಹನ್​ ಅರಿನ್​ ವಿರುದ್ಧ ಸೋತರೆ, ತನ್ವಿ 17-21, 16-21ರಿಂದ ಜಪಾನ್​ ಹಿನಾ ಅಕೆಚಿಗೆ ಶರಣಾದರು.