ಮತ್ತೆ ಸೆಮೀಸ್ನಲ್ಲಿ ಸೋತ ಸಿಂಧು; ಮುಂದುವರಿದ ಪ್ರಶಸ್ತಿ ಬರ
ಸಿಡ್ನಿ: ಅವಳಿ ಒಲಿಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧು (PV Sindhu) ಆಸ್ಟ್ರೆಲಿಯನ್ ಓಪನ್ ಸೂಪರ್-500 ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದ ಸೆಮಿಫೈನಲ್ನಲ್ಲಿ ಪರಾಭವಗೊಂಡಿದ್ದಾರೆ. ಇದರೊಂದಿಗೆ ಬಿಡಬ್ಲ್ಯುಎಫ್ ಟೂರ್ನಿಗಳಲ್ಲಿ ಅವರ ಪ್ರಶಸ್ತಿ ಬರ ಮುಂದುವರಿದಿದೆ.
ಮಾಜಿ ವಿಶ್ವ ನಂ. 1 ಸಿಂಧು ಶನಿವಾರ ನಡೆದ ಪಂದ್ಯದಲ್ಲಿ ಅಗ್ರ ಶ್ರೇಯಾಂಕಿತೆ ಜಪಾನ್ನ ಅಕಾನೆ ಯಮಗುಚಿ ವಿರುದ್ಧ 20-22, 12-21 ನೇರಗೇಮ್ಗಳಿಂದ ಶರಣಾದರು. 3ನೇ ಶ್ರೇಯಾಂಕಿತೆ ಸಿಂಧು ಮೊದಲ ಗೇಮ್ನಲ್ಲಿ ನಿಕಟ ಪೈಪೋಟಿ ತೋರಿದರು. ಆದರೆ ಅಂತಿಮವಾಗಿ ಅಕಾನೆ 43 ನಿಮಿಷಗಳಲ್ಲಿ ಗೆಲುವು ಒಲಿಸಿಕೊಂಡರು. ಸಿಂಧು ಸೋಲಿನೊಂದಿಗೆ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ.
ಯಮಗುಚಿ ವಿರುದ್ಧ ಸಿಂಧು ಈಗಲೂ 15-13 ಜಯ-ಸೋಲಿನ ಮುನ್ನಡೆಯಲ್ಲಿದ್ದರೂ, ಕಳೆದ 6 ಮುಖಾಮುಖಿಗಳಲ್ಲಿ 5ರಲ್ಲಿ ಸೋತಿದ್ದಾರೆ. ಸಿಂಧು 2024ರ ಡಿಸೆಂಬರ್ನಲ್ಲಿ ತವರಿನ ಸಯ್ಯದ್ ಮೋದಿ ಟೂರ್ನಿಯಲ್ಲಿ ಕೊನೆಯದಾಗಿ ಬಿಡಬ್ಲ್ಯುಎಫ್ ಟೂರ್ ಪ್ರಶಸ್ತಿ ಗೆದ್ದಿದ್ದಾರೆ. ಹಾಲಿ ವರ್ಷ ಅವರು ಇದುವರೆಗೆ ಯಾವುದೇ ಟೂರ್ನಿಯ ಫೈನಲ್ ಪ್ರವೇಶಿಸಿಲ್ಲ.