ವಿಶ್ವ ಬ್ಯಾಡ್ಮಿಂಟನ್: ಸಿಂಧು, ಆಯುಷ್ ಸವಾಲು ಅಂತ್ಯ; ಡಬಲ್ಸ್ನಲ್ಲಿ ಭಾರತೀಯರ ಆಸೆ ಜೀವಂತ
ನವದೆಹಲಿ: ಬಿಡಬ್ಲ್ಯುಎಫ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಲ್ಲಿ (
) ಆತಿಥೇಯ ಭಾರತ ಗುರುವಾರ ಅವಳಿ ಆಘಾತ ಎದುರಿಸಿದೆ. ಮಾಜಿ ಚಾಂಪಿಯನ್ ಪಿವಿ ಸಿಂಧು ಮತ್ತು ಕನ್ನಡಿಗ ಆಯುಷ್ ಶೆಟ್ಟಿ 16ರ ಘಟ್ಟದಲ್ಲಿ ಪರಾಭವಗೊಂಡಿದ್ದು, ಸಿಂಗಲ್ಸ್ ವಿಭಾಗದಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ.
ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಪಿವಿ ಸಿಂಧು ಕೆಚ್ಚೆದೆಯ ಹೋರಾಟ ನಡುವೆಯೂ ವಿಶ್ವ ನಂ. 3 ಚೀನಾದ ವಾಂಗ್ ಜಿ ಯಿ ವಿರುದ್ಧ 11-21, 21-15, 17-21ರಿಂದ ಸೋಲು ಅನುಭವಿಸಿದರು. ಒಂದು ಗಂಟೆ 28 ನಿಮಿಷಗಳ ಕಾಲ ಸಾಗಿದ ಕಾದಾಟದಲ್ಲಿ 31 ವರ್ಷದ ಸಿಂಧು, 2ನೇ ಗೇಮ್ ಗೆದ್ದು ತಿರುಗೇಟು ನೀಡಿದರೂ, ಅಂತಿಮ ಹಂತದಲ್ಲಿ ಮತ್ತೆ ಲಯ ತಪ್ಪಿದರು.
ಇದಕ್ಕೆ ಮುನ್ನ 21 ವರ್ಷದ ಆಯುಷ್ ಶೆಟ್ಟಿ ವಿಶ್ವ ನಂ. 12 ಅಲ್ವಿ ರ್ಹಾನ್ ವಿರುದ್ಧ 19-21, 11-21ರಿಂದ ಸೋಲು ಕಂಡರು. ಮೊದಲ ಸುತ್ತಿನಲ್ಲಿ ವಿಶ್ವ ನಂ. 1 ಹಾಗೂ ಹಾಲಿ ಚಾಂಪಿಯನ್ ಚೀನಾದ ಶಿ ಯು ಖಿ ವಿರುದ್ಧ ಗೆದ್ದು ಬೀಗಿದ್ದ ಆಯುಷ್, ಇಂಡೋನೇಷ್ಯಾ ಆಟಗಾರನ ಎದುರು ಅಂಥದ್ದೇ ನಿರ್ವಹಣೆ ಪುನರಾವರ್ತಿಸಲು ವಿಫಲರಾದರು. ರ್ಹಾನ್ ವಿರುದ್ಧದ 8 ಮುಖಾಮುಖಿಗಳಲ್ಲಿ ಆಯುಷ್ಗೆ ಇದು 5ನೇ ಸೋಲಾಗಿದೆ.
ಕ್ವಾರ್ಟರ್ಫೈನಲ್ಗೆ ಸಾತ್ವಿಕ್-ಚಿರಾಗ್
ಮಾಜಿ ವಿಶ್ವ ನಂ. 1 ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ ಜೋಡಿ ಪುರುಷರ ಡಬಲ್ಸ್ ವಿಭಾಗದಲ್ಲಿ ಕ್ವಾರ್ಟರ್ಫೈನಲ್ ಪ್ರವೇಶಿಸಿದೆ. 5ನೇ ಶ್ರೇಯಾಂಕಿತ ಸಾತ್ವಿಕ್-ಚಿರಾಗ್ ಜೋಡಿ 16ರ ಘಟ್ಟದಲ್ಲಿ ಮಲೇಷ್ಯಾದ ಜುಬೈದಿ ಆರಿಫ್ ಮತ್ತು ಯಪ್ ರಾಯ್ ಕಿಂಗ್ ಜೋಡಿಯ ಎದುರು 21-23, 21-19, 21-17ರಿಂದ ಹೋರಾಟಯುತ ಗೆಲುವು ದಾಖಲಿಸಿತು. ಟೂರ್ನಿಯಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಒಂದು ಗಂಟೆ, 22 ನಿಮಿಷಗಳ ಕಾಲ ಶ್ರಮಿಸಿದರು. ಸಾತ್ವಿಕ್-ಚಿರಾಗ್ ಈ ಮುನ್ನ ಮೊದಲ ಸುತ್ತಿನಲ್ಲಿ ಬೈ ಮತ್ತು 2ನೇ ಸುತ್ತಿನಲ್ಲಿ ವಾಕ್ಓವರ್ ಪಡೆದಿದ್ದರು.
8ರ ಘಟ್ಟಕ್ಕೇರಿದ ಗಾಯತ್ರಿ&ತ್ರೀಸಾ
ಇತ್ತೀಚೆಗೆ ಅರ್ಜುನ ಪ್ರಶಸ್ತಿಗೆ ಭಾಜನರಾಗಿರುವ ಗಾಯತ್ರಿ ಗೋಪಿಚಂದ್-ತ್ರೀಸಾ ಜೋಲಿ ಜೋಡಿ ಮಹಿಳಾ ಡಬಲ್ಸ್ ವಿಭಾಗದಲ್ಲಿ ಕ್ವಾರ್ಟರ್ಫೈನಲ್ ಪ್ರವೇಶಿಸಿದೆ. ಗಾಯತ್ರಿ-ತ್ರೀಸಾ ಜೋಡಿ ಗುರುವಾರ ನಡೆದ ಪಂದ್ಯದಲ್ಲಿ 7ನೇ ಶ್ರೇಯಾಂಕಿತ ಜಪಾನ್ನ ರಿನ್ ಇವನಗ ಮತ್ತು ಕೀ ನಕನಿಶಿ ಜೋಡಿಗೆ 21-16, 21-12ರಿಂದ ಆಘಾತಕಾರಿ ಸೋಲುಣಿಸಿತು. 2015ರಲ್ಲಿ ಜ್ವಾಲಾ ಗುಟ್ಟಾ-ಅಶ್ವಿನಿ ಪೊನ್ನಪ್ಪ ಸಾಧನೆಯ ಬಳಿಕ ವಿಶ್ವ ಚಾಂಪಿಯನ್ಷಿಪ್ನ ಮಹಿಳಾ ಡಬಲ್ಸ್ ವಿಭಾಗದಲ್ಲಿ ಭಾರತೀಯರು ಎಂಟರ ಘಟ್ಟಕ್ಕೇರಿದು ಇದೇ ಮೊದಲಾಗಿದೆ. ಮಿಶ್ರ ಡಬಲ್ಸ್ ವಿಭಾಗದಲ್ಲಿ ಧ್ರುವ ಕಪಿಲ-ತನಿಷಾ ಕ್ರಾಸ್ಟೋ ಜೋಡಿ 16ರ ಘಟ್ಟದಲ್ಲಿ ಹೊರಬಿದ್ದಿತು. 15ನೇ ಶ್ರೇಯಾಂಕಿತ ಕಪಿಲ-ತನಿಷಾ ಜೋಡಿ 16-21, 5-21ರಿಂದ 6ನೇ ಶ್ರೇಯಾಂಕಿತ ಚೀನಾದ ಗುವೊ&ಚೆನ್ ಜೋಡಿಗೆ ಶರಣಾಯಿತು. ಇದರಿಂದ ಮಿಶ್ರ ಡಬಲ್ಸ್ ವಿಭಾಗದಲ್ಲಿ ಆತಿಥೇಯರ ಸವಾಲು ಅಂತ್ಯಗೊಂಡಿದೆ.