ಸಿಂಗಾಪುರ ಓಪನ್​ ಗೆದ್ದ ಸಾತ್ವಿಕ್​-ಚಿರಾಗ್​; 2 ವರ್ಷಗಳ ಪ್ರಶಸ್ತಿ ಬರ ನೀಗಿಸಿದ ಭಾರತೀಯ ಡಬಲ್ಸ್​ ಜೋಡಿ 
ಬ್ಯಾಡ್ಮಿಂಟನ್

ಸಿಂಗಾಪುರ ಓಪನ್​ ಗೆದ್ದ ಸಾತ್ವಿಕ್​-ಚಿರಾಗ್​; 2 ವರ್ಷಗಳ ಪ್ರಶಸ್ತಿ ಬರ ನೀಗಿಸಿದ ಭಾರತೀಯ ಡಬಲ್ಸ್​ ಜೋಡಿ

ಸಿಂಗಾಪುರ: ಮಾಜಿ ವಿಶ್ವ ನಂ. 1 ಸಾತ್ವಿಕ್​ ಸಾಯಿರಾಜ್​ ಮತ್ತು ಚಿರಾಗ್​ ಶೆಟ್ಟಿ ಜೋಡಿ ಸಿಂಗಾಪುರ ಓಪನ್​ ಸೂಪರ್​-750 ಬ್ಯಾಡ್ಮಿಂಟನ್​ ಟೂರ್ನಿಯ (Badminton) ಪುರುಷರ ಡಬಲ್ಸ್​ ವಿಭಾಗದಲ್ಲಿ ಚಾಂಪಿಯನ್​ ಪಟ್ಟಕ್ಕೇರಿದೆ. ಇದೇ ಮೊದಲ ಬಾರಿಗೆ ಸಿಂಗಾಪುರದಲ್ಲಿ ಪ್ರಶಸ್ತಿ ಒಲಿಸಿಕೊಂಡಿರುವ ಭಾರತೀಯ ಜೋಡಿ, 2 ವರ್ಷಗಳ ಪ್ರಶಸ್ತಿ ಬರ ನೀಗಿಸಿದೆ. ಸಾತ್ವಿಕ್​-ಚಿರಾಗ್​ಗೆ ಇದು ಒಟ್ಟಾರೆ 9ನೇ ವರ್ಲ್ಡ್​ ಟೂರ್​ ಪ್ರಶಸ್ತಿ ಗೆಲುವಾಗಿದೆ.

ಏಷ್ಯನ್​ ಗೇಮ್ಸ್​ ಮತ್ತು ಕಾಮನ್ವೆಲ್ತ್​ ಗೇಮ್ಸ್​ ಚಾಂಪಿಯನ್​ಗಳಾದ ಸಾತ್ವಿಕ್​-ಚಿರಾಗ್​ ಶೆಟ್ಟಿ ಭಾನುವಾರ ನಡೆದ ಫೈನಲ್​ ಪಂದ್ಯದಲ್ಲಿ ಇಂಡೋನೇಷ್ಯಾದ ಜರ್​ ಅಲ್ಫಿಯಾನ್​ ಮತ್ತು ಮುಹಮ್ಮದ್​ ಶೋಹಿಬುಲ್​ ಫಿಕ್ರಿ ಜೋಡಿಯನ್ನು 18-21, 21-17, 21-16 ಗೇಮ್​ಗಳಿಂದ ಮಣಿಸಿದರು. ಹಾಲಿ ವಿಶ್ವ ನಂ. 4 ಸಾತ್ವಿಕ್​-ಚಿರಾಗ್​ ಮೊದಲ ಗೇಮ್​ ಸೋತು ಹಿನ್ನಡೆ ಅನುಭವಿಸಿದರೂ, ನಂತರ ದಿಟ್ಟ ತಿರುಗೇಟು ನೀಡುವ ಮೂಲಕ ಒಂದು ಗಂಟೆ 13 ನಿಮಿಷಗಳಲ್ಲಿ ಗೆಲುವು ಒಲಿಸಿಕೊಂಡರು.ಅವರು ಸಿಂಗಾಪುರದಲ್ಲಿ ಡಬಲ್ಸ್​ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಜೋಡಿ ಎನಿಸಿದ್ದಾರೆ.

ಸಾತ್ವಿಕ್​-ಚಿರಾಗ್​ 2024ರಲ್ಲಿ ಥಾಯ್ಲೆಂಡ್​ನಲ್ಲಿ ಕೊನೆಯದಾಗಿ ಪ್ರಶಸ್ತಿ ಗೆದ್ದುಕೊಂಡಿದ್ದರು. ನಂತರ 4 ಟೂರ್ನಿಗಳಲ್ಲಿ ಅವರು ಫೈನಲ್​ಗೇರಿದ್ದರೂ, ರನ್ನರ್​ಅಪ್​ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಸಾತ್ವಿಕ್​-ಚಿರಾಗ್​ ಜೋಡಿ ಪ್ರಶಸ್ತಿ ಗೆಲುವಿನೊಂದಿಗೆ 70.30 ಲಕ್ಷ ರೂ. (74 ಸಾವಿರ ಅಮೆರಿಕನ್​ ಡಾಲರ್​) ಬಾಚಿಕೊಂಡಿತು.