ಸಿಂಗಾಪುರ ಓಪನ್: ಫೈನಲ್ಗೇರಿದ ಸಾತ್ವಿಕ್-ಚಿರಾಗ್
ಸಿಂಗಾಪುರ: ಮಾಜಿ ವಿಶ್ವ ನಂ. 1 ಭಾರತದ ಸಾತ್ವಿಕ್ ಸಾಯಿರಾಜ್ (Satwiksairaj Rankireddy) ಮತ್ತು ಚಿರಾಗ್ ಶೆಟ್ಟಿ (Chirag Shetty) ಜೋಡಿ ಹಾಲಿ ವಿಶ್ವ ನಂ. 1 ದಣ ಕೊರಿಯಾದ ಕಿಮ್ ವೊನ್ ಹೋ ಮತ್ತು ಸೆಯು ಸೆಯುಂಗ್ ಜಾಯಿ ಜೋಡಿಯನ್ನು ಮಣಿಸುವ ಮೂಲಕ ಸಿಂಗಾಪುರ ಓಪನ್ ಸೂಪರ್-750 ಬ್ಯಾಡ್ಮಿಂಟನ್ (Singapore Open Super 750 badminton) ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದೆ.
4ನೇ ಶ್ರೇಯಾಂಕಿತ ಸಾತ್ವಿಕ್-ಚಿರಾಗ್ ಜೋಡಿ ಶನಿವಾರ ನಡೆದ ಉಪಾಂತ್ಯ ಹೋರಾಟದಲ್ಲಿ ಅಗ್ರ ಶ್ರೇಯಾಂಕಿತ ಕಿಮ್&ಸೆಯು ಜೋಡಿಗೆ 21-19, 21-18 ನೇರಗೇಮ್ಗಳಿಂದ 52 ನಿಮಿಷಗಳಲ್ಲಿ ಆಘಾತಕಾರಿ ಸೋಲುಣಿಸಿತು. 2 ವರ್ಷಗಳ ಪ್ರಶಸ್ತಿ ಬರ ನೀಗಿಸುವ ಹಂಬಲದಲ್ಲಿರುವ ಸಾತ್ವಿಕ್-ಚಿರಾಗ್ ಜೋಡಿ ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ 3ನೇ ಶ್ರೇಯಾಂಕಿತ ಇಂಡೋನೇಷ್ಯಾದ ಜರ್ ಅಲ್ಫಿಯಾನ್ ಮತ್ತು ಮುಹಮ್ಮದ್ ಶೋಯಿಬುಲ್ ಫಿಕ್ರಿ ಜೋಡಿಯನ್ನು ಎದುರಿಸಲಿದೆ.
ಮತ್ತೊಂದೆಡೆ ಮಿಶ್ರ ಡಬಲ್ಸ್ ವಿಭಾಗದ ಸೆಮಿಫೈನಲ್ನಲ್ಲಿ ಭಾರತದ ಧ್ರುವ ಕಪಿಲ ಮತ್ತು ತನಿಷಾ ಕ್ರಾಸ್ಟೋ ಜೋಡಿ 16-21, 21-17, 13-21ರಿಂದ ಜಪಾನ್ನ ಯುಚಿ ಶಿಮೊಗಮಿ ಮತ್ತು ಸಯಾಕ ಹೊಬರ ಜೋಡಿಗೆ ಶರಣಾಯಿತು.