ಚೀನಾ ಮಾಸ್ಟರ್ಸ್ ಫೈನಲ್ಗೇರಿದ ಸಾತ್ವಿಕ್-ಚಿರಾಗ್
ಶೆನ್ಜೆನ್: ಭಾರತದ ಡಬಲ್ಸ್ ತಾರೆಯರಾದ ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ ಪ್ರತಿಷ್ಠಿತ ಚೀನಾ ಮಾಸ್ಟರ್ಸ್ ಸೂಪರ್ 750 (China Masters) ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮೂರನೇ ಬಾರಿ ಫೈನಲ್ಗೇರಿದ್ದು, ಹಾಲಿ ವರ್ಷದ ಎರಡನೇ ಪ್ರಶಸ್ತಿಯಿಂದ ಕೇವಲ ಒಂದು ಗೆಲುವು ದೂರದಲ್ಲಿದ್ದಾರೆ.
ವಿಶ್ವ ನಂ. 5 ಸಾತ್ವಿಕ್-ಚಿರಾಗ್ ಜೋಡಿ ಶನಿವಾರ ನಡೆದ ಪುರುಷರ ಡಬಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಮಲೇಷ್ಯಾದ ನುರ್ ಮೊಹಮದ್ ಅಜ್ರಿನ್ ಆಯುಬ್ ಮತ್ತು ಟನ್ ವೀ ಕಿಯೋಂಗ್ ಜೋಡಿಯ ವಿರುದ್ಧ ಮೂರು ಗೇಮ್ಗಳ ಹೋರಾಟದಲ್ಲಿ 21-15, 18-21, 21-11ರಿಂದ ಗೆಲುವು ಸಾಧಿಸಿತು.
ಮಾಜಿ ವಿಶ್ವ ನಂ. 1 ಸಾತ್ವಿಕ್-ಚಿರಾಗ್ ಜೋಡಿ ವಿಶ್ವ ನಂ. 29 ಜೋಡಿಯನ್ನು ಮಣಿಸಲು 65 ನಿಮಿಷಗಳ ಕಾಲ ಹೋರಾಡಿತು. ಸಾತ್ವಿಕ್-ಚಿರಾಗ್ ಜೋಡಿ ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಚೀನಾದ ಹಿ ಜಿ ಟಿಂಗ್ ಮತ್ತು ರೆನ್ ಕ್ಸಿಯಾಂಗ್ ಯು ಜೋಡಿಯನ್ನು ಎದುರಿಸಲಿದೆ.
ಸಾತ್ವಿಕ್-ಚಿರಾಗ್ ಕಳೆದ 4 ವರ್ಷಗಳಲ್ಲಿ 3ನೇ ಬಾರಿ ಟೂರ್ನಿಯ ಫೈನಲ್ಗೇರಿದ್ದಾರೆ. ಆದರೆ ಈ ಮುನ್ನ 2023, 2025ರಲ್ಲಿ ರನ್ನರ್ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದ್ದ ಅವರು ಈ ಬಾರಿ ಚೊಚ್ಚಲ ಪ್ರಶಸ್ತಿ ನಿರೀಕ್ಷೆಯಲ್ಲಿದ್ದಾರೆ.