ವಿಶ್ವ ಬ್ಯಾಡ್ಮಿಂಟನ್ ಡ್ರಾ ಪ್ರಕಟ: ಸಿಂಧು, ಆಯುಷ್, ಸಾತ್ವಿಕ್-ಚಿರಾಗ್ಗೆ ಸವಾಲಿನ ಹಾದಿ
ನವದೆಹಲಿ: ಆಗಸ್ಟ್ 17ರಿಂದ 23ರವರೆಗೆ ನವದೆಹಲಿಯಲ್ಲಿ ನಡೆಯಲಿರುವ ಬಿಡಬ್ಲ್ಯುಎಫ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನ (
) ಡ್ರಾ ಬುಧವಾರ ಪ್ರಕಟಗೊಂಡಿದ್ದು, ಆತಿಥೇಯ ತಾರೆಯರಾದ ಪಿವಿ ಸಿಂಧು, ಕನ್ನಡಿಗ ಆಯುಷ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್-ಚಿರಾಗ್ ಶೆಟ್ಟಿ ಸವಾಲಿನ ಹಾದಿಯಲ್ಲಿ ಸಾಗಬೇಕಾಗಿದೆ.
ವಿಶ್ವ ನಂ. 1 ದ. ಕೊರಿಯಾದ ಆನ್ ಸೆ ಯಂಗ್ ಮತ್ತು ಅವಳಿ ಒಲಿಂಪಿಕ್ಸ್ ವಿಜೇತೆ ಪಿವಿ ಸಿಂಧು ಡ್ರಾದ ಒಂದೇ ಭಾಗದಲ್ಲಿದ್ದು, ಇವರಿಬ್ಬರು ಸೆಮಿಫೈನಲ್ನಲ್ಲಿ ಮುಖಾಮುಖಿಯಾಗುವ ನಿರೀಕ್ಷೆ ಇದೆ. ಆದರೆ ಸೆಮೀಸ್ ತನಕ ಸಿಂಧು ಸುಲಭ ಹಾದಿ ಹೊಂದಿದ್ದಾರೆ. 5 ಬಾರಿಯ ವಿಶ್ವ ಚಾಂಪಿಯನ್ಷಿಪ್ ಪದಕ ವಿಜೇತೆ ಸಿಂಧು ಮೊದಲ ಸುತ್ತಿನಲ್ಲಿ ಐರ್ಲೆಂಡ್ನ ಸೋಫಿ ನೋಬಲ್ ವಿರುದ್ಧ ಆಡಲಿದ್ದಾರೆ. ಬಳಿಕ 16ರ ಟ್ಟದಲ್ಲಿ ಚೀನಾದ ವಾಂಗ್ ಝಿ ಯೀ ಮತ್ತು ಕ್ವಾರ್ಟರ್ಫೈನಲ್ನಲ್ಲಿ ಇಂಡೋನೇಷ್ಯಾದ ಪುತ್ರಿ ಕುಸುಮ ವರ್ದನಿ ಎದುರಾಗುವ ನಿರೀಕ್ಷೆ ಇದೆ. ಉನ್ನತಿ ಹೂಡಾ ಮಹಿಳಾ ಸಿಂಗಲ್ಸ್ ಕಣದಲ್ಲಿರುವ ಭಾರತದ ಮತ್ತೋರ್ವ ಆಟಗಾರ್ತಿ.
ಪುರುಷರ ಸಿಂಗಲ್ಸ್ನಲ್ಲಿ ಶ್ರೇಯಾಂಕ ರಹಿತ ಆಯುಷ್ ಶೆಟ್ಟಿ ಮೊದಲ ಸುತ್ತಿನಲ್ಲೇ ವಿಶ್ವ ನಂ. 1 ಚೀನಾದ ಶಿ ಯು ಕಿ ಅವರ ಕಠಿಣ ಸವಾಲು ಎದುರಿಸಲಿದ್ದಾರೆ. 14ನೇ ಶ್ರೇಯಾಂಕಿತ ಲಕ್ಷ್ಯ ಸೇನ್ ಮೊದಲ ಸುತ್ತಿನಲ್ಲಿ ಆಸ್ಟ್ರಿಯಾದ ಕಾಲಿನ್ಸ್ ವ್ಯಾಲೆಟೈನ್ ವಿರುದ್ಧ ಆಡಲಿದ್ದಾರೆ. ಕ್ವಾರ್ಟರ್ಫೈನಲ್ನಲ್ಲಿ ಅವರಿಗೆ ಥಾಯ್ಲೆಂಡ್ನ ಕುನ್ಲವುತ್ ವಿಟಿಡ್ಸರ್ನ್ರ ಕಠಿಣ ಸವಾಲು ಎದುರಾಗುವ ಸಾಧ್ಯತೆ ಇದೆ.
ಪುರುಷರ ಡಬಲ್ಸ್ನಲ್ಲಿ 5ನೇ ಶ್ರೇಯಾಂಕಿತ ಸಾತ್ವಿಕ್-ಚಿರಾಗ್ ಜೋಡಿ ಮೊದಲ ಸುತ್ತಿನಲ್ಲಿ ಬೈ ಪಡೆದಿದೆ. 2ನೇ ಸುತ್ತಿನಲ್ಲಿ ಇಂಡೋನೇಷ್ಯಾದ ರಿಯಾನ್ ಇಂದ್ರ&ನಿಕೋಲೈಸ್ ಜಾಕ್ವಿನ್ ಸವಾಲು ಎದುರಾಗಲಿದೆ. ಕ್ವಾರ್ಟರ್ಫೈನಲ್ನಲ್ಲಿ 3ನೇ ಶ್ರೇಯಾಂಕಿತ ಚೀನಾದ ಲಿಯಾಂಗ್ ವಿ ಕೆಂಗ್-ವಾಂಗ್ ಚಾಂಗ್ ಜೋಡಿಯ ಕಠಿಣ ಸವಾಲು ಎದುರಾಗುವ ಸಾಧ್ಯತೆ ಇದೆ.
ಸಿದ್ಧತೆಗೆ ಬಿಡಬ್ಲ್ಯುಎಫ್ ತೃಪ್ತಿ
ವರ್ಷಾರಂಭದಲ್ಲಿ ನವದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಇಂಡಿಯಾ ಓಪನ್ ವೇಳೆ ಹಕ್ಕಿಗಳ ಹಿಕ್ಕೆ ಮತ್ತು ನೀರು ಸೋರುವಿಕೆಯಿಂದ ಪಂದ್ಯಗಳಿಗೆ ಅಡಚಣೆಯಾಗಿ ಆತಿಥೇಯ ಭಾರತ ತೀವ್ರ ಮುಜುಗರ ಎದುರಿಸಿತ್ತು. ಇದೀಗ ವಿಶ್ವ ಚಾಂಪಿಯನ್ಷಿಪ್ಗೆ ಇದೇ ತಾಣ ಸುಸಜ್ಜಿತವಾಗಿ ಸಿದ್ಧವಾಗಿದ್ದು, ವಿಶ್ವ ಬ್ಯಾಡ್ಮಿಂಟನ್ ಒಕ್ಕೂಟ (ಬಿಡಬ್ಲ್ಯುಎಫ್) ತೃಪ್ತಿ ವ್ಯಕ್ತಪಡಿಸಿದೆ. ಕ್ರೀಡಾಂಗಣ ಇದೀಗ ಸಂಪೂರ್ಣ ಸ್ವಚ್ಛವಾಗಿದ್ದು, ಶೌಚಾಲಯಗಳನ್ನೂ ನವೀಕರಿಸಲಾಗಿದೆ. ಹಕ್ಕಿ ಮತ್ತು ಕೋತಿಗಳು ಕ್ರೀಡಾಂಗಣದೊಳಗೆ ಬಾರದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಾಟರ್ಪ್ರೂಫ್ ವ್ಯವಸ್ಥೆಯನ್ನೂ ಮಾಡಲಾಗಿದೆ. ಕ್ರೀಡಾಂಗಣದ ಆವರಣದೊಳಗೆ ಬೀದಿನಾಯಿಗಳು ಬಾರದಂತೆ ಎಚ್ಚರಿಕೆ ವಹಿಸಲಾಗುತ್ತಿದ್ದು, ಈ ಬಾರಿ ಅತ್ಯಂತ ವ್ಯವಸ್ಥಿತ ಟೂರ್ನಿ ಆಯೋಜಿಸಲಾಗುತ್ತಿದೆ ಎಂದು ಟೂರ್ನಿ ನಿದೇಶಕ ಸೆಲ್ವಅಮರೇಶ್ ಸುಬ್ರಮಣ್ಯಂ ತಿಳಿಸಿದ್ದಾರೆ.