ವಿಶ್ವ ಬ್ಯಾಡ್ಮಿಂಟನ್: 16ರ ಘಟ್ಟಕ್ಕೇರಿದ ತ್ರಿಸಾ-ಗಾಯತ್ರಿ; ಲಕ್ಷ್ಯ ಸೇನ್, ಉನ್ನತಿ ಶುಭಾರಂಭ
ನವದೆಹಲಿ: ತಮಗೆ ಅರ್ಜುನ ಪ್ರಶಸ್ತಿ ಘೋಷಣೆಯಾದ ದಿನವೇ ಪ್ರತಿಷ್ಠಿತ ಬಿಡಬ್ಲ್ಯುಎಫ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನ (
) ಮಹಿಳಾ ಡಬಲ್ಸ್ ವಿಭಾಗದಲ್ಲಿ ಸತತ 2ನೇ ಗೆಲುವು ದಾಖಲಿಸಿದ ಗಾಯತ್ರಿ ಗೋಪಿಚಂದ್-ತ್ರಿಸಾ ಜೋಲಿ ಜೋಡಿ ಪ್ರಿ ಕ್ವಾರ್ಟರ್ಫೈನಲ್ ಪ್ರವೇಶಿಸಿದೆ. ಸಿಂಗಲ್ಸ್ ವಿಭಾಗದಲ್ಲಿ ಲಕ್ಷ್ಯ ಸೇನ್ ಮತ್ತು ಉನ್ನತಿ ಹೂಡಾ ಗೆಲುವಿನ ಆರಂಭ ಕಂಡರು.
ಇಂದಿರಾ ಗಾಂಧಿ ಅರೇನಾದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಮಂಗಳವಾರ ನಡೆದ 32ರ ಘಟ್ಟದ ಪಂದ್ಯದಲ್ಲಿ ಶ್ರೇಯಾಂಕ ರಹಿತ ಗಾಯತ್ರಿ-ತ್ರಿಸಾ ಜೋಡಿ 16ನೇ ಶ್ರೇಯಾಂಕಿತ ಅಮೆರಿಕದ ಲೌರೆನ್ ಲಾಮ್ ಮತ್ತು ಅಲಿಸನ್ ಕ್ವಿನ್ ಲೀ ಜೋಡಿಗೆ 21-15, 21-12 ನೇರಗೇಮ್ಗಳಿಂದ ಆಘಾತಕಾರಿ ಸೋಲುಣಿಸಿತು. ಗಾಯತ್ರಿ-ತ್ರಿಸಾ ಜೋಡಿ 38 ನಿಮಿಷಗಳಲ್ಲೇ ಗೆಲುವು ಒಲಿಸಿಕೊಂಡಿತು.
ಮಹಿಳಾ ಡಬಲ್ಸ್ ವಿಭಾಗದಲ್ಲಿ ಭಾರತದ ಮತ್ತೊಂದು ಜೋಡಿಯಾದ ಕವಿಪ್ರಿಯ ಸೆಲ್ವಂ ಮತ್ತು ಸಿಮ್ರನ್ ಸಿಂಘಿ 2ನೇ ಸುತ್ತಿನಲ್ಲಿ ಹೊರಬಿದ್ದರು. ಅವರು 9ನೇ ಶ್ರೇಯಾಂಕಿತ ಬಲ್ಜೇರಿಯಾದ ಗ್ಯಾಬ್ರಿಯೆಲಾ ಸ್ಟೋವಾ ಮತ್ತು ಸ್ಟೀಾನಿ ಸ್ಟೋವಾ ಜೋಡಿಗೆ 32 ನಿಮಿಷಗಳಲ್ಲೇ 7-21, 14-21ರಿಂದ ಶರಣಾದರು.
ಮಿಶ್ರ ಡಬಲ್ಸ್ ವಿಭಾಗದಲ್ಲಿ ರೋಹನ್ ಕಪೂರ್-ರುತ್ವಿಕಾ ಶಿವಾನಿ ಗದ್ದೆ ಮತ್ತು ಅಶಿತ್ ಸೂರ್ಯ-ಅಮೃತಾ ಪ್ರಮುತೇಶ್ ಜೋಡಿ ಮೊದಲ ಸುತ್ತಿನಲ್ಲೇ ಹೊರಬಿದ್ದಿತು. ಈ ವಿಭಾಗದಲ್ಲಿರುವ ಭಾರತದ ಮತ್ತೊಂದು ಜೋಡಿಯಾದ 15ನೇ ಶ್ರೇಯಾಂಕಿತ ಧ್ರುವ ಕಪಿಲ ಮತ್ತು ತನಿಷಾ ಕ್ರಾಸ್ಟೋಗೆ ಮೊದಲ ಸುತ್ತಿನಲ್ಲಿ ಬೈ ಲಭಿಸಿದೆ.
ಲಕ್ಷ್ಯ ಸೇನ್ಗೆ ಹೋರಾಟಯುತ ಜಯ
ಪುರುಷರ ಸಿಂಗಲ್ಸ್ನಲ್ಲಿ 14ನೇ ಶ್ರೇಯಾಂಕಿತ ಲಕ್ಷ್ಯ ಸೇನ್ ಮೊದಲ ಸುತ್ತಿನ ಪಂದ್ಯದಲ್ಲಿ ಆಸ್ಟ್ರಿಯಾದ ಕಾಲಿನ್ಸ್ ವ್ಯಾಲೆಂಟೈನ್ ಫಿಲಿಮೊನ್ ವಿರುದ್ಧ 16-21, 21-8, 21-4ರಿಂದ ಹೋರಾಟಯುತ ಗೆಲುವು ಸಾಧಿಸಿದರು. ಮೊದಲ ಗೇಮ್ ಸೋತು ಆರಂಭಿಕ ಹಿನ್ನಡೆ ಅನುಭವಿಸಿದ ಲಕ್ಷ್ಯ ಸೇನ್ ಗೆಲುವಿಗೆ 45 ನಿಮಿಷಗಳ ಕಾಲ ಪರಿಶ್ರಮ ಪಟ್ಟರು. ನಿಧಾನಗತಿಯ ಆರಂಭದ ಬಳಿಕ ಅವರು ಕೊನೇ 2 ಗೇಮ್ಗಳಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿದರು. 25 ವರ್ಷದ ಲಕ್ಷ್ಯ ಸೇನ್ 2ನೇ ಸುತ್ತಿನಲ್ಲಿ ಅಮೆರಿಕದ ಗರೆಟ್ ಟಾನ್ ವಿರುದ್ಧ ಸೆಣಸಲಿದ್ದಾರೆ.
ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಪಿವಿ ಸಿಂಧು ಬಳಿಕ ಭಾರತದ ಯುವ ಆಟಗಾರ್ತಿ ಉನ್ನತಿ ಹೂಡಾ ಕೂಡ 2ನೇ ಸುತ್ತಿಗೇರಿದ್ದಾರೆ. 18 ವರ್ಷದ ಉನ್ನತಿ ಮೊದಲ ಸುತ್ತಿನ ಪಂದ್ಯದಲ್ಲಿ ಮಯಾನ್ಮಾರ್ನ ಥೆಟ್ ಟಾರ್ ಥುಜರ್ ವಿರುದ್ಧ 22-20, 21-16ರಿಂದ 40 ನಿಮಿಷಗಳ ಕಾದಾಟದಲ್ಲಿ ಗೆಲುವು ಸಾಧಿಸಿದರು. ತಂದೆ ಉಪಕಾರ್ ಹೂಡಾ ಅವರಿಂದಲೇ ತರಬೇತಿ ಪಡೆಯುತ್ತಿರುವ ಉನ್ನತಿ 32ರ ಘಟ್ಟದಲ್ಲಿ 13ನೇ ಶ್ರೇಯಾಂಕಿತೆ ಕೆನಡಾದ ಮಿಚೆಲ್ ಲೀ ಸವಾಲು ಎದುರಿಸಲಿದ್ದಾರೆ.