ಥಾಮಸ್​ ಕಪ್​ ಬ್ಯಾಡ್ಮಿಂಟನ್​: ಭಾರತ ಕಂಚಿನ ಪದಕಕ್ಕೆ ತೃಪ್ತಿ  
ಬ್ಯಾಡ್ಮಿಂಟನ್

ಥಾಮಸ್​ ಕಪ್​ ಬ್ಯಾಡ್ಮಿಂಟನ್​: ಭಾರತ ಕಂಚಿನ ಪದಕಕ್ಕೆ ತೃಪ್ತಿ

ಹಾರ್ಸೆನ್ಸ್​ (ಡೆನ್ಮಾರ್ಕ್​): ಭಾರತ ತಂಡ ಪ್ರತಿಷ್ಠಿತ ಥಾಮಸ್​ ಕಪ್​ (Thomas Cup) ಬ್ಯಾಡ್ಮಿಂಟನ್​ ಟೂರ್ನಿಯ ಸೆಮಿೈನಲ್​ನಲ್ಲಿ ಫ್ರಾನ್ಸ್​ ಎದುರು 0-3 ಅಂತರದಿಂದ ಪರಾಭವಗೊಂಡು ಕಂಚಿನ ಪದಕಕ್ಕೆ ತೃಪ್ತಿಪಟ್ಟಿದೆ. ಕನ್ನಡಿಗ ಆಯುಷ್​ ಶೆಟ್ಟಿ ಮತ್ತು ಅನುಭವಿ ಆಟಗಾರರಾದ ಕಿಡಂಬಿ ಶ್ರೀಕಾಂತ್​, ಎಚ್​ಎಸ್​ ಪ್ರಣಯ್​ ಮೊದಲ 3 ಸಿಂಗಲ್ಸ್​ ಪಂದ್ಯಗಳಲ್ಲಿ ಸೋಲು ಕಾಣುವುದರೊಂದಿಗೆ ಭಾರತ 2022ರ ನಂತರ ಮತ್ತೊಮ್ಮೆ ಫೈನಲ್​ಗೇರುವ ಕನಸು ಭಗ್ನಗೊಂಡಿತು.

ಶನಿವಾರ ನಡೆದ ಉಪಾಂತ್ಯ ಕಾದಾಟದಲ್ಲಿ 2022ರ ಚಾಂಪಿಯನ್​ ಭಾರತ ತಂಡದ ಪರ ಮೊದಲ ಸಿಂಗಲ್ಸ್​ ಪಂದ್ಯ ಆಡಿದ ಆಯುಷ್​ ಶೆಟ್ಟಿ 16-21, 21-18 ನೇರಗೇಮ್​ಗಳಿಂದ ವಿಶ್ವ ನಂ. 4 ಕ್ರಿಸ್ಟೋ ಪೊಪೊವ್​ ವಿರುದ್ಧ ಎಡವಿದರು. 20 ವರ್ಷದ ಆಯುಷ್​ ಇದಕ್ಕೆ ಮುನ್ನ ಟೂರ್ನಿಯಲ್ಲಿ ಆಡಿದ 4 ಪಂದ್ಯವನ್ನೂ ಗೆದ್ದಿದ್ದರು.

ಗಾಯಾಳು ಲಕ್ಷ್ಯ ಸೇನ್​ ಬದಲಿಗೆ ಕಣಕ್ಕಿಳಿದ ಮಾಜಿ ವಿಶ್ವ ನಂ. 1 ಕೆ. ಶ್ರೀಕಾಂತ್​ 2ನೇ ಪಂದ್ಯದಲ್ಲಿ ವಿಶ್ವ ನಂ. 10 ಅಲೆಕ್ಸ್​ ಲೇನಿಯರ್​ ವಿರುದ್ಧ 16-21, 18-21ರಿಂದ ಮುಗ್ಗರಿಸಿದರು. 3ನೇ ಸಿಂಗಲ್ಸ್​ ಪಂದ್ಯದಲ್ಲಿ ಪ್ರಣಯ್​ ವಿಶ್ವ ನಂ. 17 ಟೊಮಾ ಪೊಪೊವ್​ ವಿರುದ್ಧ 19-21, 16-21ರಿಂದ ಶರಣಾದರು. ಇದರಿಂದಾಗಿ ಭಾರತ ಕೊನೇ 2 ಡಬಲ್ಸ್​ ಪಂದ್ಯಗಳಿಗೆ ಮುನ್ನವೇ ಸೋಲೊಪ್ಪಿಕೊಂಡಿತು.

ಭಾರತ ಟೂರ್ನಿಯಲ್ಲಿ 4ನೇ ಬಾರಿ ಕಂಚಿನ ಪದಕ ಗೆದ್ದ ಸಾಧನೆ ಮಾಡಿದೆ. ಭಾರತ ಈ ಮುನ್ನ 1952, 1955 ಮತ್ತು 1979ರಲ್ಲೂ ಕಂಚಿನ ಪದಕ ಜಯಿಸಿತ್ತು. ಫ್ರಾನ್ಸ್​ ತಂಡ ಡೆನ್ಮಾರ್ಕ್​ (2016) ಬಳಿಕ ಟೂರ್ನಿಯ ಫೈನಲ್​ಗೇರಿದ 2ನೇ ಯುರೋಪಿಯನ್​ ರಾಷ್ಟ್ರವೆನಿಸಿತು.