ಯುಎಸ್ ಓಪನ್ ಬ್ಯಾಡ್ಮಿಂಟನ್: ಕಿಡಂಬಿ ಶ್ರೀಕಾಂತ್ ರನ್ನರ್ಅಪ್
ಫುಲ್ಲೇರ್ಟನ್: ಭಾರತದ ಅನುಭವಿ ಆಟಗಾರ ಕಿಡಂಬಿ ಶ್ರೀಕಾಂತ್ (Kidambi Srikanth) ಯುಎಸ್ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ (US Open Super 300 badminton) ರನ್ನರ್ಅಪ್ ಸ್ಥಾನಕ್ಕೆ ಸಮಾಧಾನ ಕಂಡಿದ್ದಾರೆ. ಭಾನುವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ 33 ವರ್ಷದ ಶ್ರೀಕಾಂತ್ ಚೀನಾ ತೈಪೆಯ ಸು ಲಿ-ಯಾಂಗ್ ವಿರುದ್ಧ 3 ಗೇಮ್ಗಳ ದಿಟ್ಟ ಹೋರಾಟದಲ್ಲಿ 15-21, 21-16, 9-21ರಿಂದ ಪರಾಭವಗೊಂಡರು.
2021ರ ವಿಶ್ವ ಚಾಂಪಿಯನ್ಷಿಪ್ ರಜತ ವಿಜೇತ ಶ್ರೀಕಾಂತ್ ಮೊದಲ ಗೇಮ್ ಸೋತ ಬಳಿಕ 2ನೇ ಗೇಮ್ನಲ್ಲಿ ತಿರುಗೇಟು ನೀಡಿದರು. ಆದರೆ ತನಗಿಂತ 9 ವರ್ಷ ಕಿರಿಯ ಲಿ-ಯಾಂಗ್ ಎದುರು ಅಂತಿಮ ಗೇಮ್ನಲ್ಲಿ ನಿರಾಸೆ ಅನುಭವಿಸಿದರು. ಇದರಿಂದ ಶ್ರೀಕಾಂತ್ ಅವರ ಪ್ರಶಸ್ತಿ ಬರ ಮುಂದುವರಿದಿದೆ.
2017ರಲ್ಲಿ ಕೊನೆಯದಾಗಿ ಪ್ರಶಸ್ತಿ ಗೆದ್ದಿರುವ ಮಾಜಿ ವಿಶ್ವ ನಂ. 1 ಶ್ರೀಕಾಂತ್ ಕಳೆದ ವರ್ಷ 2 ಟೂರ್ನಿಗಳಲ್ಲಿ (ಮಲೇಷ್ಯಾ ಮಾಸ್ಟರ್ಸ್, ಸಯ್ಯದ್ ಮೋದಿ) ರನ್ನರ್ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು.