ಬ್ಯಾಡ್ಮಿಂಟನ್​​ ತಾರೆ PV Sindhu (ಚಿತ್ರ Instagram) 
ಬ್ಯಾಡ್ಮಿಂಟನ್

ಸಂಕಷ್ಟದ ಪ್ರಯಾಣ ಮುಗಿಸಿ ಬೆಂಗಳೂರಿಗೆ ಮರಳಿದ ಸಿಂಧು.. ನೆರವಾದ ಸಿಬ್ಬಂದಿಗೆ ಬಿಗ್​ ಸೆಲ್ಯೂಟ್​ ಎಂದ ಶಟ್ಲರ್! PV Sindhu

ಪ್ರಮುಖ ಮುಖ್ಯಾಂಶಗಳು

  • ದುಬೈ ವಿಮಾನ ನಿಲ್ದಾಣದಲ್ಲಿ ಹಲವು ದಿನಗಳಿಂದ ಸಿಲುಕಿಕೊಂಡಿದ್ದ ಭಾರತದ ಬ್ಯಾಡ್ಮಿಂಟನ್​​ ತಾರೆ ಪಿವಿ ಸಿಂಧು
  • ಬೆಂಗಳೂರಿನ ಮನೆಗೆ ಸುರಕ್ಷಿತವಾಗಿ ಮರಳಿದ್ದೇನೆ, ಯುದ್ಧದ ಭೀತಿಯಿಂದ ಕೆಲವು ದಿನಗಳು ತೀವ್ರ ಮತ್ತು ಅನಿಶ್ಚಿತತೆಯಿಂದ ಕೂಡಿದ್ದವು.
  • ಕಷ್ಟದ ಸಮಯದಲ್ಲಿ ನಮ್ಮನ್ನು ಚೆನ್ನಾಗಿ ನೋಡಿಕೊಂಡ ಪ್ರತಿಯೊಬ್ಬ ವ್ಯಕ್ತಿಗಳಿಗೂ ಹೃತ್ಪೂರ್ವಕ ಧನ್ಯವಾದಗಳು
PV Sindhu: ಅಮೆರಿಕ ಮತ್ತು ಇಸ್ರೇಲ್ ಇರಾನ್ ನಡುವಿನ ಯುದ್ಧ ಸನ್ನಿವೇಶದಿಂದಾಗಿ ದುಬೈ ವಿಮಾನ ನಿಲ್ದಾಣದಲ್ಲಿ ಹಲವು ದಿನಗಳಿಂದ ಸಿಲುಕಿಕೊಂಡಿದ್ದ ಭಾರತದ ಬ್ಯಾಡ್ಮಿಂಟನ್​​ ತಾರೆ ಪಿವಿ  ಸಿಂಧು ಭಾರತಕ್ಕೆ ಸುರಕ್ಷಿತವಾಗಿ ಮರಳಿದ್ದಾರೆ. 
ವಿದೇಶದಲ್ಲಿ ಕಳೆದ ಆತಂಕದ ಸಮಯದ ನಂತರ ಬೆಂಗಳೂರಿನಲ್ಲಿರುವ ತಮ್ಮ ಮನೆಗೆ ಆಗಮಿಸಿರುವುದಾಗಿ ಸಿಂಧು ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ದೃಢಪಡಿಸಿದ್ದಾರೆ. 
ಬೆಂಗಳೂರಿನ ಮನೆಗೆ ಸುರಕ್ಷಿತವಾಗಿ ಮರಳಿದ್ದೇನೆ. ಯುದ್ಧದ ಭೀತಿಯಿಂದ ಕೆಲವು ದಿನಗಳು  ತೀವ್ರ ಮತ್ತು ಅನಿಶ್ಚಿತತೆಯಿಂದ ಕೂಡಿದ್ದವು. ಆದರೆ, ನನ್ನ ಮನೆಗೆ ಮರಳಲು ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ. ಅದ್ಭುತ ಗ್ರೌಂಡ್ ಸ್ಟಾಫ್,  ದುಬೈ ಅಧಿಕಾರಿಗಳು, ವಿಮಾನ ನಿಲ್ದಾಣ ಸಿಬ್ಬಂದಿ ಕಷ್ಟದ ಸಮಯದಲ್ಲಿ ನಮ್ಮನ್ನು ಚೆನ್ನಾಗಿ ನೋಡಿಕೊಂಡ ಪ್ರತಿಯೊಬ್ಬ  ವ್ಯಕ್ತಿಗಳಿಗೂ ಹೃತ್ಪೂರ್ವಕ ಧನ್ಯವಾದಗಳು.  ಸಹಾನುಭೂತಿ ಮತ್ತು ವೃತ್ತಿಪರತೆಯನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಇದೀಗ ವಿಶ್ರಾಂತಿ ಪಡೆಯಲು ಮತ್ತು ಮುಂದಿನ ಕೆಲಸಗಳನ್ನು ಲೆಕ್ಕಾಚಾರ ಮಾಡುವ ಸಮಯವಾಗಿದೆ ಎಂದು ಸಿಂಧು ಟ್ವೀಟ್​ ಮಾಡಿದ್ದಾರೆ.
ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಿಂದ ಸಿಂಧು ಹೊರಕ್ಕೆ!
ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಆರಂಭಿಕ ಸುತ್ತಿನಲ್ಲಿ ಸಿಂಧು ಥೈಲ್ಯಾಂಡ್‌ನ ಸುಪಾನಿಡಾ ಕಟೆಥಾಂಗ್ ವಿರುದ್ಧ ಕಣಕ್ಕಿಳಿಯಬೇಕಾಗಿತ್ತು. ಆದರೆ, ದುಬೈನ ವಾಯು ಪ್ರದೇಶ ಮುಚ್ಚಲ್ಪಟ್ಟಿದ್ದರಿಂದ ಅವರು ಯುಕೆಗೆ ಹೋಗಲು ಸಾಧ್ಯವಾಗಲಿಲ್ಲ. ಈ ಕಾರಣದಿಂದ ಪಂದ್ಯದಿಂದ ಹೊರಗುಳಿಯಬೇಕಾಯಿತು.
ಈ ಹಿಂದೆ ಭಾನುವಾರ (ಮಾ.01) ಸಿಂಧು ವಿಮಾನ ನಿಲ್ದಾಣದಲ್ಲಿ ನಡೆಯುತ್ತಿರುವ  ದೃಶ್ಯಗಳನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದು, ಮುಂದಿನ ಸೂಚನೆ ಬರುವವರೆಗೂ ಎಲ್ಲಾ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ ಎಂಬ ಶೀರ್ಷಿಕೆಯೊಂದನ್ನು ಪೋಸ್ಟ್​ ಮಾಡಿದ್ದರು.
ಈಗ ಏನಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟವಾಗಿದೆ. ತಲೆಯ ಮೇಲೆ ನಡೆಯುವ ಪ್ರತಿಬಂಧಗಳ  ಶಬ್ದವನ್ನು ಕೇಳುವುದು ಮತ್ತು ಪರಿಸ್ಥಿತಿ ಎಷ್ಟು ವೇಗವಾಗಿ ಉಲ್ಬಣಗೊಂಡಿದೆ ಎಂಬುದನ್ನು ನೋಡುವುದು ನಿಜಕ್ಕೂ ಭಯಾನಕವಾಗಿದೆ. ದುಬೈ ನಾನು ತುಂಬಾ ಪ್ರೀತಿಸುವ ನಗರ, ಯಾವಾಗಲೂ ಸುರಕ್ಷಿತ ಮತ್ತು ಜೀವನದಿಂದ ತುಂಬಿರುವ ಸ್ಥಳ. ಆದರೆ, ಇಂದಿನ ಸ್ಥಿತಿಯನ್ನು ಗ್ರಹಿಸುವುದು ಕಷ್ಟವಾಗುತ್ತದೆ ಎಂದು ಬರೆದು ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿದ್ದರು (ಏಜೆನ್ಸೀಸ್​).