ವಿಶ್ವ ಬ್ಯಾಡ್ಮಿಂಟನ್​ ಚಾಂಪಿಯನ್​ಷಿಪ್​: ವಿಶ್ವ ನಂ. 1 ಶಿ ಯುಗೆ ಕನ್ನಡಿಗ ಆಯುಷ್​ ಶೆಟ್ಟಿ ಶಾಕ್​; ಪಿವಿ ಸಿಂಧು ಶುಭಾರಂಭ 
ಬ್ಯಾಡ್ಮಿಂಟನ್

ವಿಶ್ವ ಬ್ಯಾಡ್ಮಿಂಟನ್​ ಚಾಂಪಿಯನ್​ಷಿಪ್​: ವಿಶ್ವ ನಂ. 1 ಶಿ ಯುಗೆ ಕನ್ನಡಿಗ ಆಯುಷ್​ ಶೆಟ್ಟಿ ಶಾಕ್​; ಪಿವಿ ಸಿಂಧು ಶುಭಾರಂಭ

ನವದೆಹಲಿ: ಕರ್ನಾಟಕದ ಯುವ ಷಟ್ಲರ್​ ಆಯುಷ್​ ಶೆಟ್ಟಿ (

Ayush Shetty

) ಪ್ರತಿಷ್ಠಿತ ಬಿಡಬ್ಲ್ಯುಎಫ್​ ವಿಶ್ವ ಬ್ಯಾಡ್ಮಿಂಟನ್​ ಚಾಂಪಿಯನ್​ಷಿಪ್​ನ (

BWF World Championships

) ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಹಾಗೂ ವಿಶ್ವ ನಂ. 1 ಆಟಗಾರ ಚೀನಾದ ಶಿ ಯು ಕಿ ವಿರುದ್ಧ ಅಮೋ ಗೆಲುವು ದಾಖಲಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಇದರೊಂದಿಗೆ 17 ವರ್ಷಗಳ ಬಳಿಕ ಭಾರತದಲ್ಲಿ ನಡೆಯುತ್ತಿರುವ ವಿಶ್ವ ಸಮರದಲ್ಲಿ ಆತಿಥೇಯರಿಗೆ ಕನಸಿನ ಆರಂಭ ಒದಗಿಸಿದ್ದಾರೆ. ಅವಳಿ ಒಲಿಂಪಿಕ್ಸ್​ ಪದಕ ಸಾಧಕಿ ಪಿವಿ ಸಿಂಧು ನಿರೀೆಯಂತೆಯೇ ಮೊದಲ ಸುತ್ತಿನಲ್ಲಿ ಸುಲಭ ಗೆಲುವು ದಾಖಲಿಸಿ ಶುಭಾರಂಭ ಕಂಡರು. ಟೂರ್ನಿಯ ಮೊದಲ ದಿನ ಆಡಿದ ಎಲ್ಲ ಭಾರತೀಯರೂ ಗೆಲುವು ಸಾಧಿಸಿದ್ದು ವಿಶೇಷವೆನಿಸಿತು.

ಇಂದಿರಾ ಗಾಂಧಿ ಅರೇನಾದಲ್ಲಿ ಸೋಮವಾರ ಆರಂಭಗೊಂಡ ಟೂರ್ನಿಯಲ್ಲಿ ವಿಶ್ವ ನಂ. 22 ಆಯುಷ್​ ಶೆಟ್ಟಿ 30 ವರ್ಷದ ಶಿ ಯು ಕಿ ವಿರುದ್ಧ 21-14, 13-21, 21-19 ಗೇಮ್​ಗಳಿಂದ ಸ್ಮರಣೀಯ ಗೆಲುವು ದಾಖಲಿಸಿದರು. 21 ವರ್ಷದ ಆಯುಷ್​ ಒಂದು ಗಂಟೆ 13 ನಿಮಿಷಗಳ ಹೋರಾಟದಲ್ಲಿ ಗೆಲುವು ಒಲಿಸಿಕೊಂಡರು. ಇದು ಟೂರ್ನಿ ಇತಿಹಾಸದ ಅತ್ಯಂತ ಅಚ್ಚರಿಯ ಫಲಿತಾಂಶಗಳಲ್ಲಿ ಒಂದೆನಿಸಿದೆ.

ಆಯುಷ್​ಗೆ 2ನೇ ಸುತ್ತಿನಲ್ಲಿ ಶ್ರೀಲಂಕಾದ ದುಮಿಂದು ಅಬೆಯ್​ವಿಕ್ರಮ ಸವಾಲು ಎದುರಾಗಲಿದೆ.

ಈ ಗೆಲುವು ವಿಶೇಷ
ವಿಶ್ವ ನಂ. 1 ಶಿ ಯು ಕಿ ವಿರುದ್ಧ ಕಂಡ ಗೆಲುವು ವಿಶೇಷವಾದುದು ಎಂದಿರುವ ಉಡುಪಿ ಜಿಲ್ಲೆಯ ಕಾರ್ಕಳದ ಆಯುಷ್​ ಶೆಟ್ಟಿ, ಟೂರ್ನಿಯಲ್ಲಿ ತನ್ನ ಆಟ ಇನ್ನೂ ಬಾಕಿ ಇದೆ ಎಂದಿದ್ದಾರೆ. "ನನಗೆ ಶ್ರೇಷ್ಠ ಅನುಭವವಾಗುತ್ತಿದೆ. ಇಂದಿನ ಆಟದಿಂದ ಅಪಾರ ಖುಷಿಯಾಗುತ್ತಿದೆ. ಇದೊಂದು ಕಠಿಣ ಪಂದ್ಯವಾಗಿರಲಿದೆ ಮತ್ತು ನಾನು ಕಠಿಣ ಪರಿಶ್ರಮ ಪಡಬೇಕೆಂದು ಗೊತ್ತಿತ್ತು. ಇದಕ್ಕೆ ನಾನು ಮಾನಸಿಕ ಮತ್ತು ದೈಹಿಕವಾಗಿ ಸಿದ್ಧನಾಗಿದ್ದೆ' ಎಂದು ಆಯುಷ್​ ವೃತ್ತೀಜಿವನದ ಅತಿದೊಡ್ಡ ಗೆಲುವಿನ ಬಳಿಕ ಹೇಳಿದರು. "ತವರಿನಲ್ಲೇ ವಿಶ್ವ ಚಾಂಪಿಯನ್​ಷಿಪ್​ ಗೆಲ್ಲುವುದು ಖಂಡಿತವಾಗಿಯೂ ದೊಡ್ಡ ಕನಸು. ಆದರೆ ಸದ್ಯಕ್ಕೆ ನಾನಿನ್ನು ಮುಂದಿನ ಪಂದ್ಯದತ್ತ ಗಮನಹರಿಸುವೆ' ಎಂದಿದ್ದಾರೆ. 8ನೇ ವಯಸ್ಸಿನಲ್ಲಿ ತಂದೆಯ ಆಟವನ್ನು ನೋಡಿ ಬ್ಯಾಡ್ಮಿಂಟನ್​ನತ್ತ ಆಕರ್ಷಿತರಾಗಿದ್ದ ಆಯುಷ್​, ಬೆಂಗಳೂರಿನ ಪ್ರಕಾಶ್​ ಪಡುಕೋಣೆ ಬ್ಯಾಡ್ಮಿಂಟನ್​ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಪಿವಿ ಸಿಂಧುಗೆ ಸುಲಭ ಜಯ

ಆರನೇ ವಿಶ್ವ ಚಾಂಪಿಯನ್​ಷಿಪ್​ ಪದಕ ಗೆಲುವಿನ ಹಂಬಲದಲ್ಲಿರುವ ಅನುಭವಿ ಷಟ್ಲರ್​ ಪಿವಿ ಸಿಂಧು ಸುಲಭ ಗೆಲುವಿನೊಂದಿಗೆ ಅಭಿಯಾನ ಆರಂಭಿಸಿದರು. 31 ವರ್ಷದ ಸಿಂಧು ತನಗಿಂತ 10 ವರ್ಷ ಕಿರಿಯ ಸೋಫಿಯಾ ನೋಬೆಲ್​ ಎದುರು 21-7, 21-11 ನೇರಗೇಮ್​ಗಳಿಂದ 29 ನಿಮಿಷಗಳಲ್ಲೇ ಗೆಲುವು ಸಾಧಿಸಿದರು. 2019ರ ವಿಶ್ವ ಚಾಂಪಿಯನ್​ ಹಾಗೂ 5ನೇ ಶ್ರೇಯಾಂಕಿತೆ ಸಿಂಧುಗೆ ಐರ್ಲೆಂಡ್​ ಆಟಗಾರ್ತಿ ಯಾವ ಹಂತದಲ್ಲೂ ಸವಾಲೆನಿಸಲಿಲ್ಲ. ಪಂದ್ಯದ ಆರಂಭದಿಂದಲೇ ಪ್ರಾಬಲ್ಯ ಸಾಧಿಸಿದ ಸಿಂಧು, ಎದುರಾಳಿ ಆಟಗಾರ್ತಿಯನ್ನು ಕೋರ್ಟ್​ನ ಮೂಲೆ ಮೂಲೆಗೂ ಓಡಾಡಿಸಿದರು. 2ನೇ ಗೇಮ್​ನಲ್ಲಿ ಮಾತ್ರ ತುಸು ಪ್ರತಿರೋಧ ಎದುರಿಸಿದ ಸಿಂಧು, 11-8 ಮುನ್ನಡೆಯ ಬಳಿಕ ಮತ್ತೆ ಸಂಪೂರ್ಣ ಮೇಲುಗೈ ಸಾಧಿಸಿದರು. "ನನಗೆ ಇದು ಉತ್ತಮ ಆರಂಭವಾಗಿದೆ' ಎಂದು ಸಿಂಧು ಗೆಲುವಿನ ಬಳಿಕ ಹೇಳಿದರು. ಸಿಂಧು 2ನೇ ಸುತ್ತು ಅಂದರೆ 32ರ ಘಟ್ಟದಲ್ಲಿ ಕೆನಡಾದ ವೆನ್​ ಯು ಝಂಗ್​ ವಿರುದ್ಧ ಸೆಣಸಲಿದ್ದಾರೆ. ಈ ಟೂರ್ನಿಯಲ್ಲಿ ಸೆಮಿಫೈನಲ್​ ಹಂತಕ್ಕೇರಿದರೆ ಪದಕ ಖಾತ್ರಿಯಾಗಲಿದೆ.

ತ್ರಿಸಾ-ಗಾಯತ್ರಿ ಗೆಲುವಿನ ಆರಂಭ

ಭಾರತದ ಅಗ್ರ ಮಹಿಳಾ ಡಬಲ್ಸ್​ ಜೋಡಿ ತ್ರಿಸಾ ಜೋಲಿ ಮತ್ತು ಗಾಯತ್ರಿ ಗೋಪಿಚಂದ್​ ನೇರಗೇಮ್​ ಗೆಲುವಿನೊಂದಿಗೆ 2ನೇ ಸುತ್ತಿಗೇರಿದರು. ಅವರು ಮೊದಲ ಸುತ್ತಿನಲ್ಲಿ ಸ್ಪೇನ್​ನ ಪೌಲಾ ಲೋಪೆಜ್​&ಲೂಸಿಯಾ ರೋಡ್ರಿಗಸ್​ ಜೋಡಿಯನ್ನು 21-9, 21-13ರಿಂದ ಮಣಿಸಿದರು. ಬಳಿಕ ಕವಿಪ್ರಿಯ ಸೆಲ್ವಂ-ಸಿಮ್ರನ್​ ಸಿಂಘಿ ಜೋಡಿ ಕೂಡ ಮಹಿಳಾ ಡಬಲ್ಸ್​ನಲ್ಲಿ ಗೆಲುವು ಕಂಡರು. ಪುರುಷರ ಡಬಲ್ಸ್​ನಲ್ಲಿ ಹರಿಹರನ್​ ಮತ್ತು ಎಂ.ಆರ್​. ಅರ್ಜುನ್​ ಜೋಡಿ ಮೊದಲ ಸುತ್ತಿನಲ್ಲಿ 21-16, 6-4ರಿಂದ ಮುನ್ನಡೆಯಲ್ಲಿದ್ದಾಗ ಎದುರಾಳಿಯಾದ ಐರ್ಲೆಂಡ್​ನ ಸ್ಕಾಟ್​ ಗುಲ್ಡೆಯಾ-ಪೌಲ್​ ರೇನಾಲ್ಡ್​ ಜೋಡಿ ಗಾಯದ ಸಮಸ್ಯೆಯಿಂದ ಪಂದ್ಯ ತ್ಯಜಿಸಿತು. ಭಾರತದ ಅಗ್ರ ಡಬಲ್ಸ್​ ಜೋಡಿಯಾದ ಸಾತ್ವಿಕ್​ ಸಾಯಿರಾಜ್​-ಚಿರಾಗ್​ ಶೆಟ್ಟಿಗೆ ಮೊದಲ ಸುತ್ತಿನಲ್ಲಿ ಬೈ ಲಭಿಸಿದೆ.