ಕೊರಿಯಾ ಮಾಸ್ಟರ್ಸ್ ಕಿರೀಟ ಗೆದ್ದ ಅಶ್ಮಿತಾ
ಆಸನ್: ಭಾರತದ ಅಶ್ಮಿತಾ ಚಲಿಹಾ (
) ಅಮೋಘ ನಿರ್ವಹಣೆಯೊಂದಿಗೆ ಚೊಚ್ಚಲ ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಪ್ರಶಸ್ತಿ ಗೆಲುವಿನ ಸಂಭ್ರಮ ಕಂಡಿದ್ದಾರೆ. ಅಸ್ಸಾಂ ಆಟಗಾರ್ತಿ ಅಶ್ಮಿತಾ 4ನೇ ಶ್ರೇಯಾಂಕಿತೆ ಚೀನಾದ ಹಾನ್ ಕ್ವಿಯಾನ್ ಕ್ಸಿಗೆ ಆಘಾತಕಾರಿ ಸೋಲುಣಿಸುವ ಮೂಲಕ ಕೊರಿಯಾ ಮಾಸ್ಟರ್ಸ್ ಸೂಪರ್-300 ಬ್ಯಾಡ್ಮಿಂಟನ್ ಟೂರ್ನಿಯ (
Korea Masters Super 300 badminton tournament
) ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು. ಇದರೊಂದಿಗೆ ಸತತ 2ನೇ ವಾರ ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಪ್ರಶಸ್ತಿ ಭಾರತೀಯ ಮಹಿಳಾ ಷಟ್ಲರ್ಗೆ ಒಲಿದಂತಾಗಿದೆ. ತನ್ವಿ ಶರ್ಮ ಕಳೆದ ವಾರವಷ್ಟೇ ತೈಪೆ ಓಪನ್ ಗೆದ್ದುಕೊಂಡಿದ್ದರು.
26 ವರ್ಷದ ಅಶ್ಮಿತಾ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ವಿಶ್ವ ನಂ. 35 ಹಾನ್ ಕ್ವಿಯಾನ್ ವಿರುದ್ಧ 14-21, 21-14, 21-14 ಗೇಮ್ಗಳಿಂದ ಗೆಲುವು ಸಾಧಿಸಿದರು. ಮೊದಲ ಗೇಮ್ ಸೋಲಿನ ನಂತರ ತಿರುಗೇಟು ನೀಡಿದ ವಿಶ್ವ ನಂ. 50 ಅಶ್ಮಿತಾ 53 ನಿಮಿಷಗಳಲ್ಲಿ ಗೆಲುವು ಒಲಿಸಿಕೊಂಡರು. ಅವರು 2 ವರ್ಷಗಳ ಹಿಂದೆ ಕೊರಿಯಾದಲ್ಲಿ ವೃತ್ತೀಜಿವನಕ್ಕೆ ಮಾರಕವಾಗುವಂಥ ಮೊಣಕಾಲು ಗಾಯಕ್ಕೀಡಾಗಿದ್ದರು. ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗಿ ಸುದೀರ್ಘ ಪುನಶ್ಚೇತನಕ್ಕೆ ಒಳಗಾಗಿದ್ದರು. ಇದೀಗ ಕೊರಿಯಾದಲ್ಲೇ ಪ್ರಶಸ್ತಿ ಗೆದ್ದು ಬೀಗಿರುವುದು ವಿಶೇಷವೆನಿಸಿದೆ.
ಪಿವಿ ಸಿಂಧು ಅವರ ಮಾಜಿ ಕೋಚ್ ಪಾರ್ಕ್ ಟೇ&ಸಾಂಗ್, ಅಶ್ಮಿತಾಗೆ ತರಬೇತುದಾರರಾಗಿದ್ದಾರೆ. ಅಶ್ಮಿತಾ ಪ್ರಶಸ್ತಿಯೊಂದಿಗೆ 17.85 ಲಕ್ಷ ರೂ. ಬಹುಮಾನ ಪಡೆದರು.