ಕ್ರೀಡೆ

ಗಾಂಧಿ ಬಜಾರ್ ವಿದ್ಯಾರ್ಥಿ ಭವನದಲ್ಲಿ ಮಸಾಲೆ ದೋಸೆ ಸವಿದ ಬ್ಯಾಡ್ಮಿಂಟನ್ ದಂತಕಥೆ ಪ್ರಕಾಶ್ ಪಡುಕೋಣೆ!

ಬೆಂಗಳೂರು: ಬೆಂಗಳೂರಲ್ಲಿ ಮಸಾಲೆ ದೋಸೆ ಅಂದ್ರೆ ತಟ್ ಎಂದು ನೆನಪಾಗೋದೆ ಗಾಂಧಿ ಬಜಾರ್​ನಲ್ಲಿರೋ ವಿದ್ಯಾರ್ಥಿ ಭವನ ದೋಸೆ. ಇದು ದೋಸೆ ಪ್ರಿಯರಿಗೆ ಅಚ್ಚು ಮೆಚ್ಚಿನ ಸ್ಥಳವಾಗಿದೆ.

ಗಾಂಧಿ ಬಜಾರ್​ನ ವಿದ್ಯಾರ್ಥಿ ಭವನ್​ಗೆ ಸಿನಿಮಾ ನಟರು, ರಾಜಕಾರಣಿಗಳು, ಕ್ರೀಡಾಪಟುಗಳು ಸೇರಿದಂತೆ ಅನೇಕರ ಗಣ್ಯರು ಕೂಡ ದೋಸೆ ತಿನ್ನಲು ಬರುತ್ತಾರೆ.

ಭಾರತದ ಮಾಜಿ ಬ್ಯಾಡ್ಮಿಂಟನ್ ಆಟಗಾರ ಹಾಗೂ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಲಕ್ಷ್ಯ ಸೇನ್‌ಗೆ ಮೆಂಟರ್ ಆಗಿದ್ದ ಪ್ರಕಾಶ್ ಪಡುಕೋಣೆ ಅವರು ತಮ್ಮ ಪತ್ನಿ ಉಜ್ಜಾಲಾ ಪಡುಕೋಣೆ ಅವರೊಂದಿಗೆ ಪ್ರಸಿದ್ಧ ವಿದ್ಯಾರ್ಥಿ ಭವನಕ್ಕೆ ಭೇಟಿ ನೀಡಿ ಫೇಮಸ್ ಮಸಾಲೆ ದೋಸೆಯನ್ನು ಸವಿದಿದ್ದಾರೆ. ದೋಸೆ ತಿಂದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.

ಭಾರತದ ಮಾಜಿ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಭೇಟಿ ನೀಡಿದ ವಿಚಾರವನ್ನು ವಿದ್ಯಾರ್ಥಿ ಭವನ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. ದಂಪತಿ ಉಪಹಾರವನ್ನು ಸಂತೋಷದಿಂದ ಸೇವಿಸುತ್ತಿರುವ ವಿಡಿಯೋವನ್ನು ಹಂಚಿಕೊಂಡಿದೆ. ‘ನಿನ್ನೆ ಸಂಜೆ ಭಾರತ ಬ್ಯಾಡ್ಮಿಂಟನ್ ದಂತಕಥೆ ಪ್ರಕಾಶ ಪಡುಕೋಣೆ ಭೇಟಿ ನೀಡಿರುವುದು ಸಂತೋಷವಾಯಿತು’ ಎಂದು ಹೇಳಿದೆ.

ವಿದ್ಯಾರ್ಥಿ ಭವನವನ್ನು 1943ರಲ್ಲಿ ಉಡುಪಿಯ ವೆಂಕಟರಮಣ ಉರಾಲ್ ಎನ್ನುವವರು ಸ್ಥಾಪಿಸಿದರು. ಸಮೀಪದಲ್ಲಿದ್ದ ಶಾಲೆ, ಕಾಲೇಜಿನ ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಹೋಟೆಲ್‌ ಆರಂಭಿಸಲಾಯ್ತು. ಆರಂಭದಲ್ಲಿ ಇಲ್ಲಿಗೆ ವಿದ್ಯಾರ್ಥಿಗಳೇ ತಿಂಡಿ ಸವಿಯಲು ಬರುತ್ತಿದ್ದರಿಂದ ಸ್ನೇಹಿತರೊಬ್ಬರ ಸಲಹೆ ಮೇರೆಗೆ ವೆಂಕಟರಮಣ ಉರಾಲ್, ಇದಕ್ಕೆ ವಿದ್ಯಾರ್ಥಿ ಭವನ ಎಂದು ಹೆಸರಿಟ್ಟರು. ಈ ಹೋಟೆಲ್‌ ಅತಿ ಕಡಿಮೆ ಸಮಯದಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿತು. ವೆಂಕಟರಮಣ ಉರಾಲ್ ಅವರ ನಂತರ ಅವರ ಸಹೋದರ ಪರಮೇಶ್ವರ ಉರಾಳ ವಿದ್ಯಾರ್ಥಿ ಭವನದ ಜವಾಬ್ದಾರಿ ವಹಿಸಿಕೊಂಡರು.