ಕ್ರೀಡೆ

ಇದು ನಿಜವಾಗದಿರಲಿ... ನಾಳೆ ನಡೆಯುವ ಸೆಮಿಫೈನಲ್​ಗೂ ಮುನ್ನವೇ ಮಹಿಳಾ ಟೀಮ್​ ಇಂಡಿಯಾಗೆ ಕಹಿ ಸುದ್ದಿ! Team India

ಮುಂಬೈ: ನಾಳೆ (ಅ. 30) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಮಹಿಳಾ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯಕ್ಕೂ ಮುನ್ನವೇ ಟೀಮ್ ಇಂಡಿಯಾ ( Team India ) ಗೆ ಕಹಿ ಸುದ್ದಿಯೊಂದು ಬಂದಿದೆ. ಅದೇನೆಂದರೆ, ಗಾಯದಿಂದಾಗಿ ಕಳೆದ ಎರಡು ಪಂದ್ಯಗಳಿಂದ (ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ) ಹೊರಗುಳಿದಿದ್ದ ಆಸ್ಟ್ರೇಲಿಯಾದ ಸ್ಟಾರ್ ಆಟಗಾರ್ತಿ ಅಲಿಸಾ ಹೀಲಿ ಸಮಿಫೈನಲ್​ ಪಂದ್ಯಕ್ಕೆ ಲಭ್ಯವಿರುತ್ತಾರೆ.

ಅಲಿಸಾ ಹೀಲಿ ಲಭ್ಯತೆ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲವಾದರೂ, ಹೀಲಿ ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ವರದಿಯಾಗಿದೆ. ಅವರು ನೆಟ್ಸ್‌ನಲ್ಲಿ ಈಗಾಗಲೇ ಬ್ಯಾಟಿಂಗ್ ಅಭ್ಯಾಸವನ್ನು ಪ್ರಾರಂಭಿಸಿದ್ದು, ಪುನಾರಾಗಮನದ ಸೂಚನೆ ನೀಡಿದ್ದಾರೆ. ಒಂದು ವೇಳೆ ಹೀಲಿ ಅವರು ಸೆಮಿಸ್‌ನಲ್ಲಿ ಮೈದಾನ ಪ್ರವೇಶಿಸಿದರೆ, ಟೀಮ್ ಇಂಡಿಯಾ ಸಂಕಷ್ಟಕ್ಕೆ ಸಿಲುಕಲಿದೆ.

ಗಾಯಗೊಳ್ಳುವ ಮೊದಲು ಹೀಲಿ ಅವರು ಅದ್ಭುತ ಫಾರ್ಮ್‌ನಲ್ಲಿದ್ದರು. ಅವರು ಭಾರತ ಮತ್ತು ಬಾಂಗ್ಲಾದೇಶ ವಿರುದ್ಧ ಕ್ರಮವಾಗಿ ಶತಕಗಳನ್ನು (142 ಮತ್ತು ಅಜೇಯ 113) ಗಳಿಸಿದರು. ಹೀಲಿ ಸೆಮಿಸ್‌ನಲ್ಲೂ ಇದೇ ಫಾರ್ಮ್ ಮುಂದುವರಿಸಿದರೆ, ಟೀಮ್ ಇಂಡಿಯಾದ ವಿಶ್ವಕಪ್ ಗೆಲ್ಲುವ ಕನಸು ತಲೆಕೆಳಗಾಗುವ ಅಪಾಯವಿದೆ. ಹೀಗಾಗಿ, ಹೀಲಿ ಅವರು ಈ ಪಂದ್ಯಕ್ಕೆ ಲಭ್ಯವಾಗದಿರಲಿ ಹಾಗೂ ಹೀಲಿ ಚೇತರಿಸಿಕೊಂಡಿದ್ದಾರೆ ಎಂಬ ಸುದ್ದಿ ಸುಳ್ಳಾಗಲಿ ಎಂಬುದು ಅನೇಕ ಭಾರತೀಯರ ಪ್ರಾರ್ಥನೆಯಾಗಿದೆ.

ಈ ಪಂದ್ಯಾವಳಿಯಲ್ಲಿ, ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಹೀಲಿ ಅವರು ನಾಲ್ಕನೇ ಸ್ಥಾನದಲ್ಲಿದ್ದಾರೆ. 4 ಪಂದ್ಯಗಳಲ್ಲಿ 98 ಸರಾಸರಿಯಲ್ಲಿ 2 ಶತಕಗಳ ಸಹಾಯದಿಂದ 298 ರನ್ ಗಳಿಸಿದ್ದಾರೆ.

ಅಂದಹಾಗೆ, ಆಸ್ಟ್ರೇಲಿಯಾ ಪ್ರಸ್ತುತ ವಿಶ್ವಕಪ್‌ನಲ್ಲಿ ಅಜೇಯ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿದೆ. ಲೀಗ್ ಹಂತದಲ್ಲಿ ನ್ಯೂಜಿಲೆಂಡ್, ಪಾಕಿಸ್ತಾನ, ಭಾರತ, ಬಾಂಗ್ಲಾದೇಶ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಗೆಲ್ಲುವ ಮೂಲಕ ಅಜೇಯವಾಗಿ ಸೆಮಿಫೈನಲ್​ ತಲುಪಿರುವ ಆಸಿಸ್​ಗೆ ಇದೀಗ ಫೈನಲ್​ ತಲುಪಲು ಇನ್ನೊಂದು ಹೆಜ್ಜೆ ಬಾಕಿ ಇದೆ.

ಭಾರತದ ವಿಚಾರಕ್ಕೆ ಬರುವುದಾದರೆ, ಅಂತಿಮ ಲೀಗ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಮೂಲಕ ಸೆಮಿಫೈನಲ್‌ಗೆ ಅರ್ಹತೆ ಪಡೆದಿದೆ. ಟೂರ್ನಿಯ ಆರಂಭದಲ್ಲಿ ಶ್ರೀಲಂಕಾ ಮತ್ತು ಪಾಕಿಸ್ತಾನ ವಿರುದ್ಧ ಗೆದ್ದಿದ್ದ ಭಾರತ, ನಂತರ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧ ಸತತ ಮೂರು ಪಂದ್ಯಗಳಲ್ಲಿ ಸೋಲುಂಡಿತು. ಅಂತಿಮವಾಗಿ ನ್ಯೂಜಿಲೆಂಡ್ ವಿರುದ್ಧ ಗೆಲ್ಲುವ ಮೂಲಕ ಸೆಮಿಫೈನಲ್​ ಪ್ರವೇಶ ಪಡೆದಿದೆ. ಫೈನಲ್​ ತಲುಪಬೇಕಾದರೆ, ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಭಾರತ ಎದುರಿಸಬೇಕಿದೆ. (ಏಜೆನ್ಸೀಸ್​)