Shoaib Akhtar: ನಿನ್ನೆ (ಫೆ.23) ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಆತಿಥೇಯ ಪಾಕಿಸ್ತಾನ ಮತ್ತು ಭಾರತ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ 6 ವಿಕೆಟ್‌ಗಳ ಅಂತರದಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮ ಪಡೆ ಗೆದ್ದು ಬೀಗಿತು. ಪಂದ್ಯ ಆರಂಭಕ್ಕೂ ಮೊದಲೇ ಜಯ ಗಳಿಸುವ ಭರವಸೆ ಹೊತ್ತು ಅಖಾಡಕ್ಕಿಳಿದಿದ್ದ ಟೀಮ್ ಇಂಡಿಯಾ, ಕೋಟ್ಯಂತರ ಅಭಿಮಾನಿಗಳ ಆಶಯಕ್ಕೆ ತಕ್ಕಂತೆ ಆಡಿ, ಚಾಂಪಿಯನ್ಸ್ ಟ್ರೋಫಿಯ ಎರಡನೇ ಪಂದ್ಯವನ್ನು ವಶಪಡಿಸಿಕೊಂಡಿತು.
ಇದೀಗ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಸೆಮಿಫೈನಲ್ಗೆ ತನ್ನ ಸ್ಥಾನವನ್ನು ಬಹುತೇಕ ಖಚಿತ ಪಡಿಸಿಕೊಂಡಿರುವ ಭಾರತ, ಮೂರನೇ ಪಂದ್ಯವನ್ನು ನ್ಯೂಜಿಲೆಂಡ್ ವಿರುದ್ಧ ಆಡಲಿದೆ. ಒಂದೆಡೆ ಟೀಮ್ ಇಂಡಿಯಾಗೆ ಗೆಲುವಿನ ಮಳೆ ಸುರಿಯುತ್ತಿದ್ದರೆ, ಅತ್ತ ಪಾಕಿಸ್ತಾನಕ್ಕೆ ಕಣ್ಣೀರಿನ ಕೋಡಿಯೇ ಹರಿಯುತ್ತಿದೆ. ಇದಕ್ಕೆ ಕಾರಣ ನಿನ್ನೆಯ ಹೀನಾಯ ಸೋಲು. ಆತಿಥೇಯರಾಗಿ ಕಣಕ್ಕಿಳಿದ ಕ್ಯಾಪ್ಟನ್ ಮೊಹಮ್ಮದ್ ರಿಜ್ವಾನ್ ಪಡೆ, ಮತ್ತೊಮ್ಮೆ ಭಾರತದ ಎದುರು ಗೆಲುವು ಸಾಧಿಸುವಲ್ಲಿ ವಿಫಲರಾಗಿರುವುದು ಸದ್ಯ ವ್ಯಾಪಕ ಟೀಕೆ, ವ್ಯಂಗ್ಯಗಳಿಗೆ ಗುರಿಯಾಗುವಂತೆ ಮಾಡಿದೆ.
ಮೊದಲ ಪಂದ್ಯದಲ್ಲಿ 60 ರನ್ಗಳಿಂದ ನ್ಯೂಜಿಲೆಂಡ್ ಎದುರು ಸೋಲುಂಡ ಪಾಕಿಸ್ತಾನ, ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಮುಂದೆ ಹೀನಾಯವಾಗಿ ಶರಣಾದ ಸಂಗತಿ ಪಾಕ್ ಮಾಜಿ ಕ್ರಿಕೆಟಿಗರು ಮತ್ತು ಅಭಿಮಾನಿಗಳನ್ನು ಅಕ್ಷರಶಃ ಕೆರಳಿಸಿದೆ. ಈ ಸಾಲಿನಲ್ಲಿ ಮೊದಲಿಗಿರುವ ಮಾಜಿ ಹಿರಿಯ ಕ್ರಿಕೆಟಿಗ ಶೋಯಿಬ್ ಅಖ್ತರ್, "ನಾವು ಯಾವಾಗಲೂ ಬಾಬರ್ ಅಜಮ್ರನ್ನು ವಿರಾಟ್ ಕೊಹ್ಲಿಯೊಂದಿಗೆ ಹೋಲಿಸುತ್ತೇವೆ. ಆದರೆ, ವಿರಾಟ್ ಮತ್ತು ಬಾಬರ್ ನಡುವೆ ಬಹಳಷ್ಟು ವ್ಯತ್ಯಾಸವಿದೆ. ಕೊಹ್ಲಿ, ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಅವರನ್ನು ತಮ್ಮ ಆದರ್ಶಪ್ರಾಯರನ್ನಾಗಿಟ್ಟುಕೊಂಡು ವೃತ್ತಿಜೀವನವನ್ನು ಪ್ರಾರಂಭಿಸಿದ್ದಾರೆ. ಅದಕ್ಕೆ ತಕ್ಕಂತೆಯೇ ಆಟವಾಡುತ್ತಿದ್ದಾರೆ. ಆದ್ರೆ, ಬಾಬರ್ ಆ ರೀತಿಯಿಲ್ಲ" ಎಂದಿದ್ದಾರೆ.
"ಸಚಿನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕಗಳನ್ನು ಗಳಿಸಿದ್ದಾರೆ. ವಿರಾಟ್ ಕೂಡ ಈಗ ಅವರ ಸಾಲಿನಲ್ಲಿ ಸ್ಥಾನ ಪಡೆಯುವತ್ತ ಮುನ್ನುಗ್ಗುತ್ತಿದ್ದಾರೆ. ಸಚಿನ್ ದಾಖಲಿಸಿದ ಶತಕಗಳಿಗೆ ಸನ್ನಿಹಿತವಾಗಿದ್ದಾರೆ. ಆದರೆ ಬಾಬರ್ ಅಜಮ್‌ಗೆ ಯಾವುದೇ ಮಾದರಿ ಇಲ್ಲ. ಅವರ ಆಲೋಚನಾ ವಿಧಾನ ಸರಿಯಿಲ್ಲ. ಅನಗತ್ಯ ವಿಷಯಗಳ ಮೇಲೆ ಕೇಂದ್ರೀಕರಿಸುವ ಮೂಲಕ ತಮ್ಮ ಲಯವನ್ನು ಕಳೆದುಕೊಂಡಿದ್ದಾರೆ. ಬಾಬರ್ ಅಜಮ್ ಒಬ್ಬ ಮೋಸಗಾರ. ತನ್ನ ವೃತ್ತಿಜೀವನದ ಆರಂಭದಿಂದಲೂ ಆತ ಸ್ವಾರ್ಥಿಯಾಗಿದ್ದಾನೆ. ಪಾಕಿಸ್ತಾನ ಕ್ರಿಕೆಟ್ ತಂಡದ ಬಗ್ಗೆ ಮಾತನಾಡಲು ನನಗೆ ಆಸಕ್ತಿಯೂ ಇಲ್ಲ, ಸಮಯ ವ್ಯರ್ಥ ಮಾಡಿಕೊಳ್ಳಲೂ ಸಿದ್ಧನಿಲ್ಲ" ಎಂದು ಅಖ್ತರ್ ಗರಂ ಆಗಿ ಮಾತನಾಡಿದ್ದಾರೆ.
42.3 ಓವರ್‌ಗಳಲ್ಲಿ ಕೇವಲ ನಾಲ್ಕು ವಿಕೆಟ್‌ಗಳ ನಷ್ಟಕ್ಕೆ ಪಾಕ್ ನೀಡಿದ ಸಾಧಾರಣ 242 ರನ್‌ಗಳ ಗುರಿಯನ್ನು ಸುಲಭವಾಗಿ ಬೆನ್ನಟ್ಟಿತು. ಈ ಪಂದ್ಯದಲ್ಲಿ ಆಕರ್ಷಕ ಶತಕ ದಾಖಲಿಸಿದ ವಿರಾಟ್ ಕೊಹ್ಲಿ, ಮತ್ತೊಮ್ಮೆ ತಾವು 'ಕಿಂಗ್ ಕೊಹ್ಲಿ' ಎಂಬುದನ್ನು ಅಭಿಮಾನಿಗಳ ಮುಂದೆ ಸಾಬೀತುಪಡಿಸಿದರು. ಆಡಿದ 111 ಎಸೆತಗಳಲ್ಲಿ 7 ಬೌಂಡರಿ ಬಾರಿಸುವ ಮೂಲಕ 100 ರನ್ ಗಳಿಸಿ ಅಜೇಯರಾಗುಳಿದರು. ಇದು ದುಬೈ ಸ್ಟೇಡಿಯಂನಲ್ಲಿ ಕುಳಿತಿದ್ದ ಭಾರತ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು,(ಏಜೆನ್ಸೀಸ್).