ಕ್ರೀಡೆ

ಐಪಿಎಲ್‌ಗೆ ಬರಲಿದ್ದಾರೆ ಆಸ್ಟ್ರೇಲಿಯಾದ ಹಾಟ್ ನಿರೂಪಕಿ!

ನವದೆಹಲಿ: ಅರಬ್ ರಾಷ್ಟ್ರ ಯುಎಇಯ ಸುಡು ಬಿಸಿಲಿನ ವಾತಾವರಣದ ನಡುವೆ ನಡೆಯಲಿರುವ ಐಪಿಎಲ್ 13ನೇ ಆವೃತ್ತಿಗೆ ಮತ್ತಷ್ಟು ಬಿಸಿ ಏರಿಸಲು ಆಸ್ಟ್ರೇಲಿಯಾದ ಜನಪ್ರಿಯ ಟಿವಿ ನಿರೂಪಕಿ ನೆರೋಲಿ ಮೆಡೋಸ್ ಆಗಮಿಸಲಿದ್ದಾರೆ. ಸ್ಟಾರ್ ಕ್ರೀಡಾ ಪತ್ರಕರ್ತೆಯಾಗಿಯೂ ಗುರುತಿಸಿಕೊಂಡಿರುವ 34 ವರ್ಷದ ನೆರೋಲಿ ಮೆಡೋಸ್, ಐಪಿಎಲ್ ವೇಳೆ ನಿರೂಪಕಿಯಾಗಿ ಕೆಲಸ ಮಾಡಲು ಸ್ಟಾರ್ ಸ್ಪೋರ್ಟ್ಸ್ ಜತೆಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ಆಸ್ಟ್ರೇಲಿಯಾದ ಜನಪ್ರಿಯ ಕ್ರೀಡಾ ವಾಹಿನಿ ಫಾಕ್ಸ್ ಸ್ಪೋರ್ಟ್ಸ್‌ನಲ್ಲಿ ಜನಪ್ರಿಯ ನಿರೂಪಕಿಯಾಗಿದ್ದ ನೆರೋಲಿ ಮೆಡೋಸ್ ಇದೀಗ ಆ ಕೆಲಸವನ್ನು ಬಿಟ್ಟಿದ್ದು, ಐಪಿಎಲ್ ವೇಳೆ 2 ತಿಂಗಳ ಕಾಲ ದುಬೈನಲ್ಲಿ ಉಳಿದುಕೊಳ್ಳಲಿದ್ದಾರೆ.

‘ದೇಶವನ್ನು ಬಿಡಲು ಸ್ವಲ್ಪ ಭಯವಾಗುತ್ತಿದೆ. ಆದರೆ ಮತ್ತೆ ಕೆಲಸಕ್ಕೆ ಮರಳುತ್ತಿರುವುದಕ್ಕೆ, ಅದರಲ್ಲೂ ದೊಡ್ಡ ಟೂರ್ನಿಯೊಂದರಲ್ಲಿ ಕಾರ್ಯನಿರ್ವಹಿಸಲು ಕಾತರಗೊಂಡಿದ್ದೇನೆ’ ಎಂದು ನೆರೋಲಿ ಮೆಡೋಸ್ ಹೇಳಿದ್ದಾರೆ. ಅವರು ಫುಟ್‌ಬಾಲ್ ಮತ್ತು ಕ್ರಿಕೆಟ್ ಆಟದ ಬಗ್ಗೆ ಉತ್ತಮ ಜ್ಞಾನವನ್ನು ಹೊಂದಿದ್ದಾರೆ.

ನೆರೋಲಿ ಮೆಡೋಸ್ ಈ ಮುನ್ನ ಅಮೆರಿಕದ ಜನಪ್ರಿಯ ಯುಎಸ್ ಸೂಪರ್ ಬೌಲ್‌ನಲ್ಲೂ ವಿಶೇಷ ನಿರೂಪಕಿಯಾಗಿ ಕಾರ್ಯನಿರ್ವಹಿಸಿದ್ದರು. ದಶಕದ ಕಾಲ ಆಸ್ಟ್ರೇಲಿಯಾದ ಫಾಕ್ಸ್ ಸ್ಪೋರ್ಟ್ಸ್ ಚಾನಲ್‌ನಲ್ಲಿ ಕಾರ್ಯನಿರ್ವಹಿಸಿದ್ದ ನೆರೋಲಿ, ಕಳೆದ ಅಕ್ಟೋಬರ್‌ನಲ್ಲಿ ಕೆಲಸ ತ್ಯಜಿಸಿದ್ದರು.