ಬೆಂಗಳೂರು: ಈ ಹಿಂದೆ ದುಬಾರಿ ಬೌಲಿಂಗ್ ದಾಳಿಯಿಂದಾಗಿ ಟ್ರೋಲ್‌ಗಳಿಗೆ ಗುರಿಯಾಗುತ್ತಿದ್ದ ವೇಗಿ ಮೊಹಮದ್ ಸಿರಾಜ್ ಬುಧವಾರ ಕೆಕೆಆರ್ ವಿರುದ್ಧ ಅಬುಧಾಬಿಯಲ್ಲಿ ನಡೆದ ಪಂದ್ಯದಲ್ಲಿ ಬಹಳ ಭಿನ್ನ ಬೌಲರ್ ಆಗಿ ಕಾಣಿಸಿಕೊಂಡರು. ಡಬಲ್ ವಿಕೆಟ್ ಮೇಡನ್ ಸಾಧನೆಯೊಂದಿಗೆ ಆರ್‌ಸಿಬಿ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದ ಸಿರಾಜ್, ಐಪಿಎಲ್‌ನಲ್ಲಿ ಒಂದೇ ಪಂದ್ಯದಲ್ಲಿ 2 ಮೇಡನ್ ಓವರ್ ಮಾಡಿದ ಮೊದಲ ಬೌಲರ್ ಎಂಬ ಹೊಸ ಇತಿಹಾಸವನ್ನೂ ಸೃಷ್ಟಿಸಿದ್ದಾರೆ.
500 ರೂಪಾಯಿಗಾಗಿ ಕ್ಲಬ್ ಕ್ರಿಕೆಟ್‌ನಲ್ಲಿ ಆಡುತ್ತಿದ್ದ ಹೈದರಾಬಾದ್‌ನ ಬೌಲರ್ ಸಿರಾಜ್ 2017ರ ಐಪಿಎಲ್ ಹರಾಜಿನಲ್ಲಿ 2.6 ಕೋಟಿ ರೂಪಾಯಿಗೆ ಸನ್‌ರೈಸರ್ಸ್ ಹೈದರಾಬಾದ್ ತಂಡ ಸೇರಿ ಎಲ್ಲರ ಹುಬ್ಬೇರಿಸಿದ್ದರು. ಆಟೋ ಚಾಲಕನ ಮಗನಾಗಿರುವ ಸಿರಾಜ್, ಅದುವರೆಗೂ ಸ್ಪೈಕ್ ಶೂ ಕೊಂಡುಕೊಳ್ಳಲು ಪರದಾಡುತ್ತಿದ್ದರು. ಸನ್‌ರೈಸರ್ಸ್ ತಂಡದ ಪರ ಆಡಿದ್ದರಿಂದ ಪಡೆದ ಹಣದಿಂದ ಅವರು ಹೆತ್ತವರಿಗೆ ಹೊಸ ಮನೆ ಕಟ್ಟಿಕೊಟ್ಟಿದ್ದರು.
2016-17ರ ರಣಜಿ ಟ್ರೋಫಿಯಲ್ಲಿ 9 ಪಂದ್ಯಗಳಲ್ಲಿ 41 ವಿಕೆಟ್ ಕಬಳಿಸಿ ಮಿಂಚಿದ್ದರಿಂದ ಐಪಿಎಲ್‌ನಲ್ಲೂ ಅವಕಾಶ ಪಡೆದಿದ್ದ ಸಿರಾಜ್, ತನಗೆ ಕ್ರಿಕೆಟ್ ಜೀವನ ಕಟ್ಟಿಕೊಡಲು ತಂದೆ ಮೊಹಮ್ಮದ್ ಗೌಸ್ ಮತ್ತು ತಾಯಿ ಶಬಾನ ಬೇಗಂ ಮಾಡಿರುವ ತ್ಯಾಗಗಳಿಗೆ ತಕ್ಕ ಪ್ರತಿಫಲ ನೀಡಲು ಬಯಸಿದ್ದರು. ಅವರ ಅಣ್ಣ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದಾರೆ. ಆದರೆ ತನಗೆ ವಿದ್ಯೆ ತಲೆಹತ್ತದೆ ಕ್ರಿಕೆಟಿಗನಾದೆ. ವಿದ್ಯಾಭ್ಯಾಸ ಮುಂದುವರಿಸುವಂತೆ ಬೈಯ್ಯುತ್ತಿದ್ದ ತಾಯಿಯೇ ಈಗ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಸಿರಾಜ್ ಈ ಹಿಂದೊಮ್ಮೆ ಹೇಳಿದ್ದರು.
2017ರ ಅಕ್ಟೋಬರ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ನಡೆದ ಟಿ20 ಸರಣಿಯಲ್ಲಿ ಭಾರತ ತಂಡದ ಪರವಾಗಿಯೂ ಪದಾರ್ಪಣೆ ಮಾಡಿದ್ದ ಸಿರಾಜ್, ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ವಿಕೆಟ್ ಕಬಳಿಸುವ ಮೂಲಕ ಗಮನಸೆಳೆದಿದ್ದರು. ಆದರೆ 4 ಓವರ್‌ಗಳಲ್ಲಿ 53 ರನ್ ನೀಡಿ ದುಬಾರಿಯಾಗಿದ್ದರು. 2018ರಲ್ಲಿ ಭಾರತ ಪರ ಏಕದಿನ ಕ್ರಿಕೆಟ್‌ಗೂ ಪದಾರ್ಪಣೆ ಮಾಡಿದ್ದರು.
2018ರ ಐಪಿಎಲ್ ಹರಾಜಿನಲ್ಲಿ 2.60 ಕೋಟಿ ರೂ. ಮೊತ್ತಕ್ಕೆ ಆರ್‌ಸಿಬಿ ತಂಡ ಸೇರಿದ್ದ ಸಿರಾಜ್, ಇದುವರೆಗೆ ದುಬಾರಿ ಬೌಲಿಂಗ್ ನಿರ್ವಹಣೆಯಿಂದಲೇ ಟೀಕೆಗಳನ್ನು ಎದುರಿಸುತ್ತಿದ್ದರು. ಆದರೆ ಬುಧವಾರ ಕೆಕೆಆರ್ ಬ್ಯಾಟ್ಸ್‌ಮನ್‌ಗಳಿಗೆ ದುಃಸ್ವಪ್ನರಾದ ಸಿರಾಜ್ 4 ಓವರ್‌ಗಳಲ್ಲಿ 2 ಮೇಡನ್ ಸಹಿತ ಕೇವಲ 8 ರನ್ ಬಿಟ್ಟುಕೊಟ್ಟು 3 ವಿಕೆಟ್ ಕಬಳಿಸುವ ಮೂಲಕ ಆರ್‌ಸಿಬಿ ಅಭಿಮಾನಿಗಳ ಮನಗೆದ್ದಿದ್ದಾರೆ.
ಕೊನೇಕ್ಷಣದಲ್ಲಿ ಸಿರಾಜ್‌ಗೆ ಹೊಸಚೆಂಡು
ಪಂದ್ಯದಲ್ಲಿ ಮೊಹಮದ್ ಸಿರಾಜ್‌ಗೆ ಹೊಸ ಚೆಂಡು ನೀಡುವ ನಿರ್ಧಾರವನ್ನು ಕೊನೇಕ್ಷಣದಲ್ಲಿ ತೆಗೆದುಕೊಳ್ಳಲಾಯಿತು ಎಂದು ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ‘ಟಾಸ್ ಸೋತಿದ್ದು ಒಳ್ಳೆಯದೇ ಆಯಿತು. ಯಾಕೆಂದರೆ ನಾವು ಕೂಡ ಮೊದಲು ಬ್ಯಾಟಿಂಗ್ ಮಾಡಲು ಬಯಸಿದ್ದೆವು. ವಾಷಿಂಗ್ಟನ್ ಸುಂದರ್ ಮತ್ತು ಕ್ರಿಸ್ ಮಾರಿಸ್‌ಗೆ ಹೊಸ ಚೆಂಡು ನೀಡುವುದು ನಮ್ಮ ಯೋಜನೆಯಾಗಿತ್ತು. ಆದರೆ ಬಳಿಕ ಕೊನೇಕ್ಷಣದಲ್ಲಿ ಮಾರಿಸ್ ಮತ್ತು ಸಿರಾಜ್‌ಗೆ ಹೊಸ ಚೆಂಡು ನೀಡಲು ನಿರ್ಧರಿಸಿದೆವು’ ಎಂದು ಕೊಹ್ಲಿ ವಿವರಿಸಿದ್ದಾರೆ.
‘ಕಳೆದ ವರ್ಷ ಸಿರಾಜ್‌ಗೆ ಬಹಳ ಕಠಿಣವಾಗಿತ್ತು. ಹಲವು ಮಂದಿ ಅವರನ್ನು ಟೀಕಿಸುತ್ತಿದ್ದರು. ಆದರೆ ಈ ವರ್ಷ ಅವರು ಕಠಿಣ ಪರಿಶ್ರಮ ಪಟ್ಟಿದ್ದಾರೆ. ನೆಟ್ಸ್‌ನಲ್ಲೂ ಅತ್ಯುತ್ತಮ ಬೌಲಿಂಗ್ ಮಾಡುತ್ತಿದ್ದರು. ಅದಕ್ಕೀಗ ತಕ್ಕ ಫಲಿತಾಂಶ ಲಭಿಸಿದೆ. ಅವರು ಇದೇ ಲಯದಲ್ಲಿ ಮುಂದುವರಿಯಬೇಕೆಂದು ಬಯಸಿರುವೆ’ ಎಂದು ಸಿರಾಜ್ ಅವರನ್ನು ಕೊಹ್ಲಿ ಪ್ರಶಂಸಿಸಿದ್ದಾರೆ.