ಮೆಲ್ಬೋರ್ನ್: ಹಾಲಿ ಚಾಂಪಿಯನ್ ಹಾಗೂ ಅಗ್ರ ಶ್ರೇಯಾಂಕಿತ ಇಟಲಿಯ ಜನ್ನಿಕ್ ಸಿನ್ನರ್ ಮತ್ತು 2ನೇ ಶ್ರೇಯಾಂಕಿತ ಜರ್ಮನಿಯ ಅಲೆಕ್ಸಾಂಡರ್ ಜ್ವೆರೇವ್ ನಡುವೆ ಆಸ್ಟ್ರೆಲಿಯನ್ ಓಪನ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾನುವಾರ ಪ್ರಶಸ್ತಿ ಹೋರಾಟ ನಡೆಯಲಿದೆ.
ಮೆಲ್ಬೋರ್ನ್ನಲ್ಲಿ 2ನೇ ಬಾರಿ ಮತ್ತು ಸತತ 2ನೇ ಗ್ರಾಂಡ್ ಸ್ಲಾಂ ಗೆಲುವಿನ ಹಂಬಲದಲ್ಲಿರುವ 23 ವರ್ಷದ ಸಿನ್ನರ್, ಡೋಪಿಂಗ್ ವಿವಾದದ ನಡುವೆ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಚೊಚ್ಚಲ ಗ್ರಾಂಡ್ ಸ್ಲಾಂ ಗೆಲುವಿನ ಬಳಿಕ ಅದೇ ಟೂರ್ನಿಯಲ್ಲಿ ಮರುವರ್ಷವೂ ಪ್ರಶಸ್ತಿ ಗೆದ್ದ ದೃಷ್ಟಾಂತಕ್ಕೆ 20 ವರ್ಷಗಳ ಬಳಿಕ ಸಾಯಾಗುವ ಹಂಬಲ ಅವರದಾಗಿದೆ. ಈ ಮುನ್ನ ರಾಫೆಲ್ ನಡಾಲ್ 2005 ಮತ್ತು 2006ರ ್ರೆಂಚ್ ಓಪನ್ನಲ್ಲಿ ಈ ಸಾಧನೆ ಮಾಡಿದ್ದರು. ಸಿನ್ನರ್ ಕಳೆದ ವರ್ಷಾಂತ್ಯದಲ್ಲಿ ಯುಎಸ್ ಓಪನ್ ಕೂಡ ಗೆದ್ದಿದ್ದರು.
ಚೊಚ್ಚಲ ಪ್ರಶಸ್ತಿ ನಿರೀಕ್ಷೆಯಲ್ಲಿರುವ 27 ವರ್ಷದ ಜ್ವೆರೇವ್ಗೆ ಇದು 3ನೇ ಗ್ರಾಂಡ್ ಸ್ಲಾಂ ಫೈನಲ್ ಆಗಿದೆ. ಈ ಹಿಂದಿನ 2 ಫೈನಲ್ಗಳಲ್ಲಿ (2020ರ ಯುಎಸ್ ಓಪನ್, 2024ರ ಫ್ರೆಂಚ್ ಓಪನ್) ಜ್ವೆರೇವ್ ರನ್ನರ್ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ನೊವಾಕ್ ಜೋಕೋವಿಕ್ ಗಾಯದಿಂದಾಗಿ ಸೆಮೀಸ್ನಲ್ಲಿ 25ನೇ ಗ್ರಾಂಡ್ ಸ್ಲಾಂ ಆಸೆ ಕೈಚೆಲಿದ್ದರು. 2019ರ (ಜೋಕೊವಿಕ್-ನಡಾಲ್) ಬಳಿಕ ಮೆಲ್ಬೊರ್ನ್ನಲ್ಲಿ ಮತ್ತೊಮ್ಮೆ ವಿಶ್ವದ ಅಗ್ರ ಇಬ್ಬರು ಶ್ರೇಯಾಂಕಿತರ ನಡುವೆ ಫೈನಲ್ ನಡೆಯಲಿದೆ.
*ಆರಂಭ: ಮಧ್ಯಾಹ್ನ 2.00
*ನೇರಪ್ರಸಾರ: ಸೋನಿ ಸ್ಪೋರ್ಟ್ಸ್