ನವದೆಹಲಿ: ನವೆಂಬರ್‌ನಲ್ಲಿ ಪಾಕಿಸ್ತಾನ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಟಿ-20 ಸರಣಿ(T 20 series)ಗೆ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಿದೆ. ಅಚ್ಚರಿಯ ಸಂಗತಿ ಎಂದರೆ ತಂಡವನ್ನು ಪ್ರಕಟಿಸುವ ಸಂದರ್ಭದಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ನಾಯಕನ ಹೆಸರನ್ನು ಬಹಿರಂಗಪಡಿಸಿಲ್ಲ.
ಆದರೆ, ನೂತನ ಟಿ20 ನಾಯಕನನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಬಾರ್ಡರ್-ಗವಾಸ್ಕರ್ ಟ್ರೋಫಿಗೆ ವಿಶ್ರಾಂತಿ ಪಡೆದಿರುವ ಕಾರಣ ಈ ತಂಡದಲ್ಲಿ ಹೆಚ್ಚಿನ ಸ್ಟಾರ್ ಆಟಗಾರರು ಇಲ್ಲ. ಟೆಸ್ಟ್ ತಂಡದ ಸ್ಟಾರ್ ಆಟಗಾರರನ್ನು ಟಿ-20 ಸರಣಿಯಿಂದ ಹೊರಗಿಡಲಾಗಿದ್ದು, ಭಾರತ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಅವರು ಸಿದ್ಧತೆ ನಡೆಸಿದ್ದಾರೆ.
ಇನ್ನು ಆಸ್ಟ್ರೇಲಿಯಾದ ಟಿ20 ನಾಯಕ ಮಿಚೆಲ್ ಮಾರ್ಷ್ ಆಗಿದ್ದರೂ, ಪಾಕಿಸ್ತಾನದ ವಿರುದ್ಧ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಜೋಸ್ ಇಂಗ್ಲಿಸ್, ಆಡಮ್ ಝಂಪಾ ಮತ್ತು ಮ್ಯಾಟ್ ಶಾರ್ಟ್ ಅವರು ಪಾಕಿಸ್ತಾನ ಸರಣಿಗೆ ತಂಡದ ಮುಂದಿನ ನಾಯಕರಾಗುವ ರೇಸ್‌ನಲ್ಲಿದ್ದಾರೆ. ಪಾಕಿಸ್ತಾನ ಸರಣಿಗೆ ಆಯ್ಕೆಯಾಗಿರುವ 13 ಆಟಗಾರರ ಪೈಕಿ ಒಬ್ಬನೇ ಒಬ್ಬ ಟೆಸ್ಟ್ ತಂಡದ ಆಟಗಾರನೂ ಇಲ್ಲ.
ಆಸ್ಟ್ರೇಲಿಯಾ ಪ್ರವಾಸದಲ್ಲಿ ಪಾಕಿಸ್ತಾನ ಮೂರು ಪಂದ್ಯಗಳ ಒಡಿಐ ಮತ್ತು ಅಷ್ಟೇ ಸಂಖ್ಯೆಯ T 20 ಸರಣಿಗಳನ್ನು ಆಡಬೇಕಾಗಿದೆ. ನ.4 ರಿಂದ ಏಕದಿನ ಸರಣಿ ಆರಂಭವಾಗಲಿದೆ. ಟಿ20 ಸರಣಿಯು ನ.14 ರಿಂದ ಪ್ರಾರಂಭವಾಗಲಿದ್ದು, ನ.18 ರಂದು ಮುಕ್ತಾಯಗೊಳ್ಳಲಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯ ನ. 22 ರಂದು ಆರಂಭವಾಗಲಿದೆ.
ಸೀನ್ ಅಬಾಟ್, ಕ್ಸೇವಿಯರ್ ಬಾರ್ಟ್ಲೆಟ್, ಕೂಪರ್ ಕೊನೊಲಿ, ಟಿಮ್ ಡೇವಿಡ್, ನಾಥನ್ ಎಲ್ಲಿಸ್, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಆರನ್ ಹಾರ್ಡಿ, ಜೋಶ್ ಇಂಗ್ಲಿಸ್, ಸ್ಪೆನ್ಸರ್ ಜಾನ್ಸನ್, ಗ್ಲೆನ್ ಮ್ಯಾಕ್ಸ್‌ವೆಲ್, ಮ್ಯಾಥ್ಯೂ ಶಾರ್ಟ್, ಮಾರ್ಕಸ್ ಸ್ಟೊಯಿನಿಸ್, ಆಡಮ್ ಝಂಪಾ.