ಮೆಲ್ಬೋರ್ನ್: ವಿಶ್ವ ಕ್ರಿಕೆಟ್ನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅತಿ ದೊಡ್ಡ ಹಾಗೂ ಶ್ರೀಮಂತ ಲೀಗ್ ಎಂದೇ ಹೆಸರಾಗಿದೆ. ಇಂಥ ಲೀಗ್ನಲ್ಲಿ ಆಡುವುದು ಪ್ರತಿಯೊಬ್ಬ ಕ್ರಿಕೆಟಿಗನ ಕನಸಾಗಿರುತ್ತದೆ. ಆದರೆ, ಐಪಿಎಲ್ನಿಂದ ತಪ್ಪಿಸಿಕೊಂಡರೆ ಖುಷಿಯಿಂದ ಮುಂದಿನ ಸರಣಿಗಳಿಗೆ ಸಿದ್ಧತೆ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಆಸ್ಟ್ರೆಲಿಯಾದ ವೇಗಿ ಮಿಚೆಲ್ ಸ್ಟಾರ್ಕ್. ಟಿ20 ವಿಶ್ವಕಪ್ಗೆ ಸಿದ್ಧಗೊಳ್ಳುವುದಕ್ಕಾಗಿಯೇ ಸ್ಟಾರ್ಕ್ ಐಪಿಎಲ್ನಿಂದ ಹೊರಗುಳಿದಿದ್ದರು. ಇದೀಗ ಟಿ20 ವಿಶ್ವಕಪ್ ಕೂಡ ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿದೆ. 30 ವರ್ಷದ ವೇಗಿ ಐಪಿಎಲ್ನ 2 ಆವೃತ್ತಿಗಳಲ್ಲಿ ಆರ್ಸಿಬಿ ಪ್ರತಿನಿಧಿಸಿದ್ದರು.
ಟಿ20 ವಿಶ್ವಕಪ್ಗಾಗಿ ಐಪಿಎಲ್ನಿಂದ ಹೊರಗುಳಿದಿದ್ದರು.. ಇದೀಗ ಐಪಿಎಲ್ ಸೆಪ್ಟೆಂಬರ್ಗೆ ನಿಗದಿಯಾಗಿದ್ದರೂ ಸ್ಟಾರ್ಕ್ ಮಾತ್ರ ತಮ್ಮ ನಿರ್ಧಾರ ಬದಲಿಸಿಕೊಳ್ಳುತ್ತಿಲ್ಲ. ಐಪಿಎಲ್ ಬದಲಿಗೆ ಬೇಸಿಗೆಯಲ್ಲಿ ನಡೆಯಲಿರುವ ಸರಣಿಗೆ ಸಿದ್ಧ ನಡೆಸುತ್ತೇನೆ ಎಂದು ಸ್ಟಾರ್ಕ್ ಹೇಳಿದ್ದಾರೆ. ಮುಂದಿನ ವರ್ಷದ ಐಪಿಎಲ್ಗೆ ಖಂಡಿತವಾಗಿಯೂ ಆಡಲು ಬಯಸುತ್ತೇನೆ, ನನ್ನ ನಿರ್ಧಾರದ ಬಗ್ಗೆ ಖುಷಿಯಿದೆ ಎಂದು ಹೇಳಿದ್ದಾರೆ. 2018ರ ಐಪಿಎಲ್ ಹರಾಜಿನಲ್ಲಿ ಸ್ಟಾರ್ಕ್ ಅವರನ್ನು ಕೆಕೆಆರ್ ತಂಡ ಕೊಂಡುಕೊಂಡಿತ್ತು. ಆದರೆ, ಗಾಯದ ಸಮಸ್ಯೆಯಿಂದಾಗಿ ಲೀಗ್ನಿಂದ ಹೊರುಗಳಿದಿದ್ದರು. ಕಳೆದ ನವೆಂಬರ್ನಲ್ಲಿ ಅವರನ್ನು ಕೆಕೆಆರ್ ಬಿಡುಗಡೆ ಮಾಡಿತ್ತು. 30 ವರ್ಷದ ಎಡಗೈ ವೇಗಿ ಸದ್ಯ ತವರು ರಾಜ್ಯ ಎನ್ಎಸ್ಡಬ್ಲ್ಯು ತಂಡದ ಆಟಗಾರರೊಂದಿಗೆ ಅಭ್ಯಾಸ ನಡೆಸುತ್ತಿದ್ದಾರೆ. ಆಸ್ಟ್ರೆಲಿಯಾ ತಂಡ ಇಂಗ್ಲೆಂಡ್ ಪ್ರವಾಸವನ್ನು ಮುಂದೂಡಿದಿದೆ.