ಕ್ರೀಡೆ

ಇಂಗ್ಲೆಂಡ್, ಆಸೀಸ್, ಸಿಪಿಎಲ್ ಆಟಗಾರರಿಗೆ ಕ್ವಾರಂಟೈನ್‌ನಿಂದ ಷರತ್ತುಬದ್ಧ ವಿನಾಯಿತಿ

ನವದೆಹಲಿ: ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ಆಟಗಾರರು ಐಪಿಎಲ್ ಟೂರ್ನಿಗಾಗಿ ಯುಎಇಗೆ ಆಗಮಿಸಿದಾಗ ಕ್ವಾರಂಟೈನ್‌ನಿಂದ ವಿನಾಯಿತಿ ಪಡೆಯಬೇಕಾದರೆ ಷರತ್ತು ಒಂದನ್ನು ಬಿಸಿಸಿಐ ವಿಧಿಸಿದೆ. ಇದರನ್ವಯ ಅವರು ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್‌ನಲ್ಲಿನ ಸರಣಿ ಮತ್ತು ಟೂರ್ನಿಯ ಜೈವಿಕ-ಸುರಕ್ಷಾ ವಾತಾವರಣದಿಂದ ನೇರವಾಗಿ ಐಪಿಎಲ್‌ಗೆ ಆಗಮಿಸಬೇಕಾಗಿದೆ.

ಸರಣಿ ಅಥವಾ ಟೂರ್ನಿಯ ಬಳಿಕ ಜೈವಿಕ-ಸುರಕ್ಷಾ ವಾತಾವರಣದಿಂದ ಹೊರಗಿನವರನ್ನು ಭೇಟಿಯಾದರೆ ಅವರಿಗೆ ಯುಎಇಯಲ್ಲಿ 7 ದಿನಗಳ ಕ್ವಾರಂಟೈನ್‌ನಿಂದ ವಿನಾಯಿತಿ ಸಿಗುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.

ಇಂಗ್ಲೆಂಡ್-ಆಸೀಸ್ ನಡುವಿನ ಏಕದಿನ-ಟಿ20 ಸರಣಿ ಸೆಪ್ಟೆಂಬರ್ 4ರಿಂದ 15ರವರೆಗೆ ಮ್ಯಾಂಚೆಸ್ಟರ್-ಸೌಥಾಂಪ್ಟನ್‌ನ ಬಯೋ-ಬಬಲ್‌ನಲ್ಲೇ ನಡೆಯಲಿದೆ. ಸಿಪಿಎಲ್ ಕೂಡ ಸದ್ಯ ಟ್ರಿನಿಡಾಡ್‌ನ ಬಯೋ-ಬಬಲ್ ವ್ಯವಸ್ಥೆಯಲ್ಲೇ ನಡೆಯುತ್ತಿದೆ. ಈ ಸರಣಿ-ಟೂರ್ನಿಗಳ ಬಳಿಕ ತಂಡಗಳ ಹೋಟೆಲ್ ಕೋಣೆಗಳಿಂದ ನೇರವಾಗಿ ಬಾಡಿಗೆ ವಿಮಾನದ ಮೂಲಕ ಯುಎಇಗೆ ಆಗಮಿಸುವ ಆಟಗಾರರಿಗೆ ಮಾತ್ರ ತಕ್ಷಣವೇ ಅವರ ಫ್ರಾಂಚೈಸಿಗಳನ್ನು ಕೂಡಿಕೊಳ್ಳಲು ಕ್ವಾರಂಟೈನ್‌ನಿಂದ ವಿನಾಯಿತಿ ಸಿಗಲಿದೆ.