ಕ್ರೀಡೆ

ತವರಿನಲ್ಲಿ ಆಸೀಸ್‌ಗೆ ಮಣಿದ ಹರಿಣ ಪಡೆ: ಮೊದಲ ಟಿ20ಯಲ್ಲಿ 111 ರನ್‌ಗಳ ಸೋಲು

ಡರ್ಬನ್: ನಾಯಕ ಮಿಚೆಲ್ ಮಾರ್ಷ್ (92*ರನ್, 49 ಎಸೆತ, 13 ಬೌಂಡರಿ, 2 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಪ್ರವಾಸಿ ಆಸ್ಟ್ರೇಲಿಯಾ ತಂಡ ಮೊದಲ ಟಿ20 ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ಎದುರು 111 ರನ್‌ಗಳ ಬೃಹತ್ ಗೆಲುವು ದಾಖಲಿಸಿದೆ.

ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ಮಿಚೆಲ್ ಮಾರ್ಷ್ ಹಾಗೂ ಟಿಮ್ ಡೇವಿಡ್ (64 ರನ್, 28 ಎಸೆತ, 7 ಬೌಂಡರಿ, 4 ಸಿಕ್ಸರ್) ಭರ್ಜರಿ ಜತೆಯಾಟದ ಬಲದಿಂದ 6 ವಿಕೆಟ್‌ಗೆ 226 ರನ್‌ಗಳ ದಾಖಲೆಯ ಮೊತ್ತ ಪೇರಿಸಿತು. ಬೃಹತ್ ಗುರಿಯ ಚೇಸಿಂಗ್ ನಡೆಸಿದ ದಕ್ಷಿಣ ಆಫ್ರಿಕಾ ಸ್ಪಿನ್ನರ್ ತನ್ವಿರ್ ಸಂಘ (31ಕ್ಕೆ4) ದಾಳಿಗೆ ಕುಸಿದು 15.3 ಓವರ್‌ಗಳಲ್ಲಿ 115 ರನ್‌ಗಳಿಗೆ ಸರ್ವಪತನ ಕಂಡು ತವರಿನಲ್ಲಿ ಮುಖಭಂಗ ಅನುಭವಿಸಿತು.ದ.ಆಫ್ರಿಕಾ ತಂಡ ಕೇವಲ 9 ರನ್ ಅಂತರದಲ್ಲಿ ಕೊನೇ ಐದು ವಿಕೆಟ್ ಕಳೆದುಕೊಂಡಿತು. ಆಸ್ಟ್ರೇಲಿಯಾ ಪರ ನಾಲ್ವರು ಆಟಗಾರರು ಪದಾರ್ಪಣೆ ಮಾಡಿದರು. ಎರಡನೇ ಪಂದ್ಯ ಶುಕ್ರವಾರ ನಡೆಯಲಿದೆ.

ಆಸ್ಟ್ರೇಲಿಯಾ: 6 ವಿಕೆಟ್‌ಗೆ 226 (ಮ್ಯಾಥ್ಯೂ ಶಾರ್ಟ್ 20, ಟ್ರಾವಿಸ್ ಹೆಡ್ 6, ಮಿಚೆಲ್ 92*, ಸ್ಟೋಯಿನಿಸ್ 6, ಟಿಮ್ ಡೇವಿಡ್ 64,ಆರೋನ್ ಹಾರ್ಡಿ 23, ಲಿಜಾಡ್ ವಿಲಿಯಮ್ಸ್ 44ಕ್ಕೆ 3).

ದ.ಆಫ್ರಿಕಾ: 15.3 ಓವರ್‌ಗಳಲ್ಲಿ 115 (ಹೆಂಡ್ರಿಕ್ಸ್ 56,ಬವುಮಾ 0, ಡುಸೆನ್ 21, ಮಾರ್ಕ್ರಮ್ 7, ಬ್ರೆವಿಸ್ 5, ಮಾರ್ಕೋ ಜಾನ್ಸೆನ್ 20, ಸ್ಟೋಯಿನಿಸ್ 18ಕ್ಕೆ 3, ತನ್ವೀರ್ ಸಂಘ 31ಕ್ಕೆ4). ಪಂದ್ಯಶ್ರೇಷ್ಠ: ಮಿಚೆಲ್ ಮಾರ್ಷ್.