ಮೆಲ್ಬೋರ್ನ್: ಇಲ್ಲಿನ ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ (Team India) ಹಾಗೂ ಆಸ್ಟ್ರೇಲಿಯಾ (Australia) ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಟೀಮ್ ಇಂಡಿಯಾ 184 ರನ್ಗಳ ಸೋಲುಂಡಿದ್ದು, ಸರಣಿಯಲ್ಲಿ ಆತಿಥೇಯರು 2-1 ಮುನ್ನಡೆಯನ್ನು ಸಾಧಿಸಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾವು ಮೊದಲ ದಿನದಿಂದಲೂ ಸಂಪೂರ್ಣ ಹಿಡಿತವನ್ನು ಸಾಧಿಸಿದ್ದು, ಮೊದಲ ಇನ್ನಿಂಗ್ಸ್ನಲ್ಲಿ ಸ್ಟೀವ್ ಸ್ಮಿತ್ (140 ರನ್, 197 ಎಸೆತ, 13 ಬೌಂಡರಿ, 3 ಸಿಕ್ಸರ್), ಮಾರ್ನಸ್ ಲಬುಶೇನ್ (72 ರನ್, 145 ಎಸೆತ, 7 ಬೌಂಡರಿ), ಸ್ಯಾಮ್ ಕೊನ್ಸ್ಟಾಸ್ (60 ರನ್, 65 ಎಸೆತ, 6 ಬೌಂಡರಿ, 2 ಸಿಕ್ಸರ್), ಉಸ್ಮಾನ್ ಖವಾಜಾ (57 ರನ್, 121 ಎಸೆತ, 6 ಬೌಂಡರಿ) ಭರ್ಜರಿ ಬ್ಯಾಟಿಂಗ್ ಫಲವಾಗಿ ಮೊದಲ ಇನ್ನಿಂಗ್ಸ್ನಲ್ಲಿ 474 ರನ್ ಕಲೆ ಹಾಕಿತ್ತು. ಟೀಮ್ ಇಂಡಿಯಾ ಪರ ಜಸ್ಪ್ರೀತ್ ಬುಮ್ರಾ (28.4-9-99-4), ರವೀಂದ್ರ ಜಡೇಜಾ (23-4-78-3), ಆಕಾಶ್ದೀಪ್ (26-8-94-2), ವಾಷಿಂಗ್ಟನ್ ಸುಂದರ್ (15-2-49-1) ರನ್ ನೀಡಿ ವಿಕೆಟ್ ಪಡೆದಿದ್ದಾರೆ.
ಮೊದಲ ಇನ್ನಿಂಗ್ಸ್ ಆಡಿದ ಟೀಮ್ ಇಂಡಿಯಾ ನಿತೀಶ್ ರೆಡ್ಡಿ (114 ರನ್, 189 ಎಸೆತ, 11 ಬೌಂಡರಿ, 1 ಸಿಕ್ಸರ್), ಯಶಸ್ವಿ ಜೈಸ್ವಾಲ್ (82 ರನ್, 118 ಎಸೆತ, 11 ಬೌಂಡರಿ, 1 ಸಿಕ್ಸರ್), ವಾಷಿಂಗ್ಟನ್ ಸುಂದರ್ (50 ರನ್, 162 ಎಸೆತ, 1 ಬೌಂಡರಿ) ದಿಟ್ಟ ಆಟದ ಫಲವಾಗಿ 369 ರನ್ಗಳಿಗೆ ಆಲೌಟ್ ಆಗಿತ್ತು. ಆಸ್ಟ್ರೇಲಿಯಾ ಪರ ಪ್ಯಾಟ್ ಕಮಿನ್ಸ್, ಬೋಲ್ಯಾಂಡ್ ಹಾಗೂ ನಾಥನ್ ಲಿಯಾನ್ ತಲಾ 3 ವಿಕೆಟ್ ಪಡೆದಿದ್ದರು.
105 ರನ್ಗಳ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡದ ಪರ ಮಾರ್ನಸ್ ಲಾಬುಶೇನ್ (70 ರನ್, 139 ಎಸೆತ, 3 ಬೌಂಡರಿ) ಜಸ್ಪ್ರೀತ್ ಬುಮ್ರಾ ಅವರ ಮಾರಕ ದಾಳಿಗೆ ನಲುಗಿ 234 ರನ್ಗಳಿಗೆ ಆಲೌಟ್ ಆಗುವ ಮೂಲಕ ಭಾರತಕ್ಕೆ 340 ರನ್ಗಳ ಗುರಿಯನ್ನು ನೀಡಿತ್ತು. ಗುರಿ ಬೆನ್ನತ್ತಿದ್ದ ಭಾರತ ತಂಡದ ಪರ ಯಶಸ್ವಿ ಜೈಸ್ವಾಲ್ (84 ರನ್, 208 ಎಸೆತ, 8 ಬೌಂಡರಿ) ಅರ್ಧಶತಕದ ನೆರವಿನಿಂದ 155 ರನ್ಗಳಿಗೆ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತ್ತು. ಈ ಮೂಲಕ ಆಸ್ಟ್ರೇಲಿಯಾ ತಂಡವು ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ 2-1 ಮುನ್ನಡೆಯನ್ನು ಸಾಧಿಸಿದೆ.
ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ದೃಷ್ಠಿಯಿಂದ ಈ ಪಂದ್ಯ ಉಭಯ ತಂಡಗಳಿಗೂ ಮಹತ್ವದಾಗಿತ್ತು. ಇದೀಗ ಭಾರತ ಸೋಲುವ ಮೂಲಕ ಇದ್ದ ಅವಕಾಶವನ್ನು ಬಹುತೇಕ ಕಳೆದುಕೊಂಡಿದ್ದು, ಆಸ್ಟ್ರೇಲಿಯಾ ಪಾಲಿನ ಹಾದಿ ಸುಗಮವಾಗಿದೆ. ಡಿಸೆಂಬರ್ 06ರಂದು ಸಿಡ್ನಿಯಲ್ಲಿ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಹೊಸ ವರ್ಷವನ್ನು ಗೆಲುವಿನ ಮೂಲಕ ಶುಭಾರಂಭ ಕಾಣಲಿದೆಯಾ ಎಂದು ಕಾದುನೋಡಬೇಕಿದೆ.