ಡುನೆಡಿನ್: ಆರಂಭಿಕ ಬ್ಯಾಟ್ಸ್‌ಮನ್ ಮಾರ್ಟಿನ್ ಗುಪ್ಟಿಲ್ (97ರನ್, 50 ಎಸೆತ, 6 ಬೌಂಡರಿ, 8 ಸಿಕ್ಸರ್) ಶತಕವಂಚಿತ ಬ್ಯಾಟಿಂಗ್ ಹಾಗೂ ಮಿಚೆಲ್ ಸ್ಯಾಂಟ್ನರ್ (31ಕ್ಕೆ 4) ಮಾರಕ ದಾಳಿ ನೆರವಿನಿಂದ ಆತಿಥೇಯ ನ್ಯೂಜಿಲೆಂಡ್ ತಂಡ 2ನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಎದುರು 4 ರನ್‌ಗಳಿಂದ ರೋಚಕ ಜಯ ದಾಖಲಿಸಿತು. ಇದರೊಂದಿಗೆ 5 ಪಂದ್ಯಗಳ ಚುಟುಕು ಕ್ರಿಕೆಟ್ ಸರಣಿಯಲ್ಲಿ ನ್ಯೂಜಿಲೆಂಡ್ 2-0 ಯಿಂದ ಮುನ್ನಡೆ ಸಾಧಿಸಿತು.
ಯುನಿವರ್ಸಿಟಿ ಓವೆಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ 7 ವಿಕೆಟ್‌ಗೆ 219ರನ್ ಪೇರಿಸಿತು. ಪ್ರತಿಯಾಗಿ ಆಸ್ಟ್ರೇಲಿಯಾ ತಂಡ ಮಾರ್ಕಸ್ ಸ್ಟೋಯಿನಿಸ್ (78ರನ್, 37 ಎಸೆತ, 7 ಬೌಂಡರಿ, 5 ಸಿಕ್ಸರ್) ಹಾಗೂ ಡೇನಿಯಲ್ ಸ್ಯಾಮ್ಸ್ (41ರನ್, 15 ಬೌಂಡರಿ, 2 ಬೌಂಡರಿ, 4 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ನಡುವೆಯೂ 8 ವಿಕೆಟ್‌ಗೆ 215 ರನ್ ಪೇರಿಸಲಷ್ಟೇ ಶಕ್ತವಾಯಿತು. 3ನೇ ಟಿ20 ಪಂದ್ಯ ಮಾರ್ಚ್ 3 ರಂದು ವೆಲ್ಲಿಂಗ್ಟನ್‌ನಲ್ಲಿ ನಡೆಯಲಿದೆ.
ನ್ಯೂಜಿಲೆಂಡ್: 7 ವಿಕೆಟ್‌ಗೆ 219 (ಮಾರ್ಟಿನ್ ಗುಪ್ಟಿಲ್ 97, ಕೇನ್ ವಿಲಿಯಮ್ಸನ್ 53, ಜೇಮ್ಸ್ ನೀಶಾಮ್ 45*, ಕೇನ್ ರಿಚರ್ಡ್‌ಸನ್ 43ಕ್ಕೆ 3), ಆಸ್ಟ್ರೇಲಿಯಾ: 8 ವಿಕೆಟ್‌ಗೆ 215 (ಮಾರ್ಕಸ್ ಸ್ಟೋಯಿನಿಸ್ 78, ಜೋಶ್ ಫಿಲಿಪ್ 45, ಡೇನಿಯಲ್ ಸ್ಯಾಮ್ಸ್ 41, ಮ್ಯಾಥ್ಯೂ ವೇಡ್ 24, ಮಿಚೆಲ್ ಸ್ಯಾಂಟ್ನರ್ 31ಕ್ಕೆ 4, ಜೇಮ್ಸ್ ನೀಶಾಮ್ 10ಕ್ಕೆ 2, ಟಿಮ್ ಸೌಥಿ 47ಕ್ಕೆ 1, ಇಶ್ ಸೋಧಿ 41ಕ್ಕೆ 1).