ಕ್ರೀಡೆ

ಲೀಡ್ಸ್ ಟೆಸ್ಟ್‌ನಲ್ಲಿ ರೋಹಿತ್, ಪೂಜಾರ ಪ್ರತಿರೋಧ; ಟೀಮ್ ಇಂಡಿಯಾ ದಿಟ್ಟ ಹೋರಾಟ

ಲೀಡ್ಸ್: ಜವಾಬ್ದಾರಿಯುತ ಬ್ಯಾಟಿಂಗ್‌ನೊಂದಿಗೆ ಪ್ರತಿಹೋರಾಟ ಸಂಘಟಿಸಿರುವ ಭಾರತ ತಂಡ ಮೂರನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ಸೋಲು ತಪ್ಪಿಸಿಕೊಳ್ಳುವತ್ತ ದಿಟ್ಟ ಹೆಜ್ಜೆ ಇಟ್ಟಿದೆ. 5 ಪಂದ್ಯಗಳ ಸರಣಿಯಲ್ಲಿ ಮುನ್ನಡೆ ಉಳಿಸಿಕೊಳ್ಳಲು ವಿರಾಟ್ ಕೊಹ್ಲಿ ಪಡೆ ಪಂದ್ಯದ ಉಳಿದ 2 ದಿನವೂ ಸಾಹಸಿಕ ನಿರ್ವಹಣೆ ತೋರಬೇಕಾಗಿದೆ.

ಹೆಡಿಂಗ್ಲೆ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಅನುಭವಿ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ (91*ರನ್, 180 ಎಸೆತ, 15 ಬೌಂಡರಿ) ಹಾಗೂ ರೋಹಿತ್ ಶರ್ಮ (59ರನ್, 156 ಎಸೆತ, 7 ಬೌಂಡರಿ, 1 ಸಿಕ್ಸರ್) ಜೋಡಿಯ ಜವಾಬ್ದಾರಿಯುತ ಇನಿಂಗ್ಸ್ ಲವಾಗಿ 3ನೇ ದಿನದಂತ್ಯಕ್ಕೆ 2 ವಿಕೆಟ್‌ಗೆ 215 ರನ್ ಪೇರಿಸಿದೆ. ಶತಕದತ್ತ ಮುನ್ನಡೆದಿರುವ ಪೂಜಾರ ಹಾಗೂ ನಾಯಕ ವಿರಾಟ್ ಕೊಹ್ಲಿ (45*ರನ್, 94 ಎಸೆತ, 6 ಬೌಂಡರಿ) ಕ್ರೀಸ್‌ನಲ್ಲಿದ್ದು, ಇನಿಂಗ್ಸ್ ಸೋಲಿನ ಭೀತಿಯಿಂದ ಪಾರಾಗಲು ಇನ್ನೂ 139 ರನ್ ಪೇರಿಸಬೇಕಿದೆ. ಇದಕ್ಕೂ ಮೊದಲು 8 ವಿಕೆಟ್‌ಗೆ 423 ರನ್‌ಗಳಿಂದ ಬುಧವಾರದ ಆಟ ಆರಂಭಿಸಿದ ಇಂಗ್ಲೆಂಡ್ 432 ರನ್‌ಗಳಿಗೆ ಸರ್ವಪತನ ಕಂಡು, 354 ರನ್ ಮುನ್ನಡೆ ಸಾಧಿಸಿತು.

ಆಧರಿಸಿದ ರೋಹಿತ್-ಪೂಜಾರ

ಭಾರಿ ಹಿನ್ನಡೆಯೊಂದಿಗೆ 2ನೇ ಇನಿಂಗ್ಸ್ ಆರಂಭಿಸಿದ ಭಾರತ ತಂಡ ಮತ್ತೊಮ್ಮೆ ಉತ್ತಮ ಆರಂಭ ಗಿಟ್ಟಿಸಿಕೊಳ್ಳಲು ವಿಲವಾಯಿತು. ಕನ್ನಡಿಗ ಕೆಎಲ್ ರಾಹುಲ್ (8 ರನ್, 54 ಎಸೆತ) ತಾಳ್ಮೆಯ ಬ್ಯಾಟಿಂಗ್ ಮೂಲಕ ಇನಿಂಗ್ಸ್ ಕಟ್ಟಲು ಯತ್ನಿಸಿದರೂ ಓವರ್‌ಟನ್ ಅವಕಾಶ ನೀಡಲಿಲ್ಲ. ಓವರ್‌ಟನ್ ಎಸೆತದಲ್ಲಿ ಸ್ಲಿಪ್‌ನಲ್ಲಿದ್ದ ಜಾನಿ ಬೇರ್‌ಸ್ಟೋ ಹಿಡಿದ ಅದ್ಭುತ ಕ್ಯಾಚ್‌ಗೆ ರಾಹುಲ್ ಬಲಿಯಾದರು. ಮೊದಲ ವಿಕೆಟ್‌ಗೆ ರಾಹುಲ್-ರೋಹಿತ್ ಜೋಡಿ 34 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಬಳಿಕ ರೋಹಿತ್ ಶರ್ಮ-ಚೇತೇಶ್ವರ ಪೂಜಾರ ಜೋಡಿ ಇಂಗ್ಲೆಂಡ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿತು. ರನ್‌ವೇಗಕ್ಕೂ ಚುರುಕು ಮುಟ್ಟಿಸಿದ ಈ ಜೋಡಿ ಹೆಚ್ಚು ಅಪಾಯವಾಗದಂತೆ ಇನಿಂಗ್ಸ್ ಕಟ್ಟಲು ಯತ್ನಿಸಿತು. ಈ ಜೋಡಿ 2ನೇ ವಿಕೆಟ್‌ಗೆ ಉಪಯುಕ್ತ 82 ರನ್ ಕಲೆಹಾಕಿದ್ದ ವೇಳೆ ರಾಬಿನ್‌ಸನ್ ಆಘಾತ ನೀಡಿದರು. ರಾಬಿನ್‌ಸನ್ ಎಸೆತದಲ್ಲಿ ರೋಹಿತ್ ಶರ್ಮ ಎಲ್‌ಬಿ ಬಲೆಗೆ ಬಿದ್ದರು. ಅಂಪೈರ್ ತೀರ್ಪಿನ ವಿರುದ್ಧ ರೋಹಿತ್ ಮೇಲ್ಮನವಿ ಸಲ್ಲಿಸಿದರೂ ಡಿಆರ್‌ಎಸ್‌ನಲ್ಲಿ ಪುರಸ್ಕಾರಗೊಳ್ಳಲಿಲ್ಲ. ಅಕರ್ಷಕ ಸಿಕ್ಸರ್ ಒಳಗೊಂಡಂತೆ ಅರ್ಧಶತಕ ಪೂರೈಸಿದ ರೋಹಿತ್, ಸತತ 5ನೇ ಇನಿಂಗ್ಸ್‌ನಲ್ಲಿ 100ಕ್ಕೂ ಹೆಚ್ಚು ಎಸೆತ ಎದುರಿಸಿದ ಸಾರ್ಥಕತೆಯೊಂದಿಗೆ ಪೆವಿಲಿಯನ್‌ಗೆ ವಾಪಸಾದರು.

ಪೂಜಾರಗೆ ಕೊಹ್ಲಿ ಸಾಥ್

ಅನುಭವಿ ಬ್ಯಾಟ್ಸ್‌ಮನ್ ಪೂಜಾರ ಟೆಸ್ಟ್ ಕ್ರಿಕೆಟ್‌ನಲ್ಲಿ 13 ಇನಿಂಗ್ಸ್ ಬಳಿಕ ಅರ್ಧಶತಕ ಸಿಡಿಸಿ ಗಮನಸೆಳೆದರು. ರೋಹಿತ್ ಶರ್ಮ ಜತೆಗೂಡಿ ಅದ್ಭುತ ಇನಿಂಗ್ಸ್ ಕಟ್ಟಿದ ಪೂಜಾರ, ವಿಕೆಟ್ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದರು. ರೋಹಿತ್ ನಿರ್ಗಮನದ ಬಳಿಕ ವಿರಾಟ್ ಕೊಹ್ಲಿ ಜತೆಗೂಡಿ ಏಕದಿನ ಮಾದರಿಯಂತೆ ರನ್ ಪೇರಿಸಿದರು. ಈ ಜೋಡಿ ಮುರಿಯದ 3ನೇ ವಿಕೆಟ್‌ಗೆ 99 ರನ್ ಕಲೆಹಾಕಿ ಇಂಗ್ಲೆಂಡ್ ಬೌಲರ್‌ಗಳ ಎದುರು ದಿಟ್ಟ ಹೋರಾಟ ಪ್ರದರ್ಶಿಸಿದೆ. ವಿರಾಟ್ ಕೊಹ್ಲಿಯಿಂದ ಸಾಥ್ ಗಿಟ್ಟಿಸಿಕೊಂಡಿರುವ ಪೂಜಾರ ಇಂಗ್ಲೆಂಡ್ ಬೌಲರ್‌ಗಳ ಪಾಲಿಗೆ ಕಂಟಕವಾಗಿದ್ದಾರೆ.

20 ಎಸೆತಗಳಲ್ಲೇ ಆಂಗ್ಲರ ಇನಿಂಗ್ಸ್ ಪತನ

ಬೆಳಗ್ಗೆ ಇಂಗ್ಲೆಂಡ್ ತಂಡದ ಉಳಿದ 2 ವಿಕೆಟ್‌ಗಳು 20 ಎಸೆತಗಳ ಅಂತರದಲ್ಲಿ ಪತನಗೊಂಡವು. 24 ರನ್‌ಗಳಿಂದ ದಿನದಾಟ ಆರಂಭಿಸಿದ ಕ್ರೇಗ್ ಓವರ್‌ಟನ್ (32ರನ್, 42ಎಸೆತ, 6 ಬೌಂಡರಿ) ಬಿರುಸಿನ 8 ರನ್ ಪೇರಿಸಿ ಮೊಹಮದ್ ಶಮಿ ಎಸೆತದಲ್ಲಿ ಎಲ್‌ಬಿ ಬಲೆಗೆ ಬಿದ್ದರೆ, ಬುಮ್ರಾ ಎಸೆದ ಮರುಓವರ್‌ನಲ್ಲೇ ಒಲಿ ರಾಬಿನ್‌ಸನ್ ಬೌಲ್ಡ್ ಆದರು.