ಕ್ರೀಡೆ

ಫೈನಲ್‌ಗೇರಿದ ಸೂಪರ್‌ನೋವಾಸ್, ಟ್ರೈಲ್‌ಬ್ಲೇಜರ್ಸ್‌; ಹೊರಬಿದ್ದ ವೆಲಾಸಿಟಿ

ಶಾರ್ಜಾ: ಹರ್ಮಾನ್‌ಪ್ರೀತ್ ಕೌರ್ ನೇತೃತ್ವದ ಸೂಪರ್‌ನೋವಾಸ್ ತಂಡ ಮಹಿಳಾ ಟಿ20 ಚಾಲೆಂಜ್ ಟೂರ್ನಿಯ ಅಂತಿಮ ಲೀಗ್ ಪಂದ್ಯದಲ್ಲಿ ಟ್ರೈಲ್‌ಬ್ಲೇಜರ್ಸ್‌ ವಿರುದ್ಧ 2 ರನ್‌ಗಳಿಂದ ರೋಚಕ ಗೆಲುವು ದಾಖಲಿಸಿ ಪ್ರಶಸ್ತಿ ಸುತ್ತಿಗೇರಿದೆ. ಮೊದಲ ಪಂದ್ಯದಲ್ಲಿ ಭರ್ಜರಿ ಜಯ ದಾಖಲಿಸಿದ್ದ ಸ್ಮತಿ ಮಂದನಾ ಸಾರಥ್ಯದ ಟ್ರೈಲ್‌ಬ್ಲೇಜರ್ಸ್‌ ತಂಡ ಕೂಡ ರನ್‌ರೇಟ್ ಆಧಾರದಲ್ಲಿ ಫೈನಲ್‌ಗೇರಿದ್ದು, ಉಭಯ ತಂಡಗಳು ಸೋಮವಾರ ಪ್ರಶಸ್ತಿ ಕಾದಾಟ ನಡೆಸಲಿವೆ. ಉದ್ಘಾಟನಾ ಪಂದ್ಯದಲ್ಲಿ ಜಯಿಸಿದ್ದ ಮಿಥಾಲಿ ರಾಜ್ ನಾಯಕತ್ವದ ವೆಲಾಸಿಟಿ ತಂಡ ಕಳಪೆ ರನ್‌ರೇಟ್‌ನಿಂದಾಗಿ ಟೂರ್ನಿಯಿಂದ ಹೊರಬಿದ್ದಿದೆ.

ಫೈನಲ್‌ಗೇರಲು ಗೆಲ್ಲಲೇಬೇಕಾಗಿದ್ದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಸೂಪರ್‌ನೋವಾಸ್ ತಂಡ ಆರಂಭಿಕ ಆಟಗಾರ್ತಿ ಚಾಮರಿ ಅಟಪಟ್ಟು (67 ರನ್, 48 ಎಸೆತ, 5 ಬೌಂಡರಿ, 4 ಸಿಕ್ಸರ್) ಭರ್ಜರಿ ಬ್ಯಾಟಿಂಗ್ ನಿರ್ವಹಣೆಯಿಂದ 6 ವಿಕೆಟ್‌ಗೆ 146 ರನ್ ಪೇರಿಸಿತು. ಪ್ರತಿಯಾಗಿ ಟ್ರೈಲ್‌ಬ್ಲೇಜರ್ಸ್‌ ತಂಡ 5 ವಿಕೆಟ್‌ಗೆ 144 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಕೊನೇ ಓವರ್‌ನಲ್ಲಿ ಗೆಲುವಿಗೆ 10 ರನ್ ಗಳಿಸಬೇಕಾಗಿದ್ದ ಟ್ರೈಲ್‌ಬ್ಲೇಜರ್ಸ್‌ ತಂಡ ರಾಧಾ ಯಾದವ್ ಬಿಗಿ ದಾಳಿ ಎದುರು 7 ರನ್ ಗಳಿಸಲಷ್ಟೇ ಶಕ್ತವಾಯಿತು.

ಟ್ರೈಲ್‌ಬ್ಲೇಜರ್ಸ್‌ ತಂಡಕ್ಕೆ ನಾಯಕ ಸ್ಮತಿ ಮಂದನಾ (33 ರನ್, 40 ಎಸೆತ, 2 ಬೌಂಡರಿ, 1 ಸಿಕ್ಸರ್) ಮತ್ತು ಡಿಯೇಂಡ್ರ ಡಾಟಿನ್ (27 ರನ್, 15 ಬೌಂಡರಿ, 4 ಎಸೆತ, 1 ಬೌಂಡರಿ) ಉತ್ತಮ ಆರಂಭ ಒದಗಿಸಿದರು. ಇನಿಂಗ್ಸ್‌ನ 7ನೇ ಓವರ್‌ನಲ್ಲಿ ಶಕಿರಾ ಸಲ್ಮನ್ ಈ ಜೋಡಿಯನ್ನು ಬೇರ್ಪಡಿಸಿದರು. ವನ್‌ಡೌನ್ ಆಟಗಾರ್ತಿ ರಿಚಾ ೋಷ್ (4) ವೈಲ್ಯ ಕಂಡರು. ಆದರೆ ಆಲ್ರೌಂಡರ್ ದೀಪ್ತಿ ಶರ್ಮ (43*) ದಿಟ್ಟ ಬ್ಯಾಟಿಂಗ್ ಮೂಲಕ ಟ್ರೈಲ್‌ಬ್ಲೇಜರ್ಸ್‌ ಹೋರಾಟವನ್ನು ಜೀವಂತವಿಟ್ಟರು. ಅವರಿಗೆ ಹರ್ಲೀನ್ ಡಿಯೋಲ್ (27) ಉತ್ತಮ ಬೆಂಬಲ ಒದಗಿಸಿದರು.

ಪವರ್‌ಪ್ಲೇಯಲ್ಲಿ ಭರ್ಜರಿ ಆಟ

ಸೂಪರ್‌ನೋವಾಸ್ ತಂಡದ ಆರಂಭಿಕ ಆಟಗಾರ್ತಿಯರು ಪವರ್‌ಪ್ಲೇಯಲ್ಲಿ ಭರ್ಜರಿ ಆಟವಾಡಿದರು. ಟ್ರೈಲ್‌ಬ್ಲೇಜರ್ಸ್‌ ಬೌಲರ್‌ಗಳನ್ನು ದಂಡಿಸಿದ ಪ್ರಿಯಾ ಪೂನಿಯಾ (30) ಮತ್ತು ಚಾಮರಿ ಅಟಪಟ್ಟು ಮೊದಲ 6 ಓವರ್‌ಗಳಲ್ಲಿ 50 ರನ್ ಕಸಿದರು. ಮೊದಲ ವಿಕೆಟ್‌ಗೆ ಪ್ರಿಯಾ-ಚಾಮರಿ ಜೋಡಿ 12 ಓವರ್‌ಗಳಲ್ಲಿ 89 ರನ್ ಕಲೆಹಾಕಿತು. ಪ್ರಿಯಾ ಪೂನಿಯಾ ಅವರನ್ನು ಔಟ್ ಮಾಡುವ ಮೂಲಕ ಬಾಂಗ್ಲಾ ಬೌಲರ್ ಸಲ್ಮಾ ಖತುನ್ ಈ ಜೋಡಿಯನ್ನು ಬೇರ್ಪಡಿಸಿದರು.

ಮೊತ್ತ ಏರಿಸಿದ ಹರ್ಮಾನ್‌ಪ್ರೀತ್

ಆರಂಭಿಕ ಆಟಗಾರ್ತಿಯರು ಭದ್ರ ಬುನಾದಿ ಹಾಕಿಕೊಟ್ಟ ಬಳಿಕ ನಾಯಕಿ ಹರ್ಮಾನ್‌ಪ್ರೀತ್ ಕೌರ್ (31 ರನ್, 29 ಎಸೆತ, 1 ಬೌಂಡರಿ, 1 ಸಿಕ್ಸರ್) ಸೂಪರ್‌ನೋವಾಸ್ ತಂಡದ ಮೊತ್ತವನ್ನು ಹಿಗ್ಗಿಸಿದರು. 2ನೇ ವಿಕೆಟ್‌ಗೆ ಚಾಮರಿ ಅಟಪಟ್ಟು ಜತೆಗೆ 29 ರನ್ ಸೇರಿಸಿದ ಹರ್ಮಾನ್‌ಪ್ರೀತ್, ಬಳಿಕ ಒಂದೆಡೆ ವಿಕೆಟ್ ಉರುಳುತ್ತಿದ್ದರೂ, ಕೊನೆಯವರೆಗೂ ಕ್ರೀಸ್‌ನಲ್ಲಿ ನಿಂತು ತಂಡದ ಮೊತ್ತವನ್ನು 150ರ ಸನಿಹ ತಂದರು. ಯುವ ಆಟಗಾರ್ತಿ ಜೆಮೀಮಾ ರೋಡ್ರಿಗಸ್ (1), ಶಶಿಕಲಾ ಸಿರಿವರ್ಧನೆ (2) ಮತ್ತು ಅನುಜಾ ಪಾಟೀಲ್ (1) ವೈಫಲ್ಯ ಕಂಡರು.

ಅನುಜಾ ಪಾಟೀಲ್ ಕಣಕ್ಕೆ

ಸೂಪರ್‌ನೋವಾಸ್ ತಂಡ ನಿರ್ಣಾಯಕ ಪಂದ್ಯಕ್ಕೆ ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿಯಿತು. ಹೆಚ್ಚುವರಿ ಸ್ಪಿನ್ನರ್ ಆಗಿ ಅನುಜಾ ಪಾಟೀಲ್ ಕಣಕ್ಕಿಳಿದರೆ, ವೇಗಿ ಪೂಜಾ ವಸಾಕರ್ ಹೊರಗುಳಿದರು. ಟ್ರೈಲ್‌ಬ್ಲೇಜರ್ಸ್‌ ಕಳೆದ ಪಂದ್ಯದಲ್ಲಿ ಆಡಿದ ತಂಡವನ್ನೇ ಕಣಕ್ಕಿಳಿಸಿತು.

ಸೂಪರ್‌ನೋವಾಸ್: 6 ವಿಕೆಟ್‌ಗೆ 146 (ಪ್ರಿಯಾ ಪೂನಿಯಾ 30, ಚಾಮರಿ ಅಟಪಟ್ಟು 67, ಹರ್ಮಾನ್‌ಪ್ರೀತ್ 31, ಜೆಮೀಮಾ 1, ಸಿರಿವರ್ಧನೆ 2, ಅನುಜಾ 1, ಜೂಲನ್ ಗೋಸ್ವಾಮಿ 17ಕ್ಕೆ 1, ಸಲ್ಮಾ ಖತುನ್ 25ಕ್ಕೆ 1, ಹರ್ಲೀನ್ ಡಿಯೋಲ್ 34ಕ್ಕೆ 1). ಟ್ರೈಲ್‌ಬ್ಲೇಜರ್ಸ್‌: 5 ವಿಕೆಟ್‌ಗೆ 144 (ಡಾಟಿನ್ 27, ಸ್ಮತಿ ಮಂದನಾ 33, ರಿಚಾ 4, ದೀಪ್ತಿ ಶರ್ಮ 43*, ಹೇಮಲತಾ 4, ಹರ್ಲೀನ್ ಡಿಯೋಲ್ 27, ಸಲ್ಮನ್ 31ಕ್ಕೆ 2, ರಾಧಾ ಯಾದವ್ 30ಕ್ಕೆ 2, ಅನುಜಾ 18ಕ್ಕೆ 1).