ಮೈಸೂರು: ಕಳೆದ ಪಂದ್ಯದಲ್ಲಿ ಗುಜರಾತ್ ಎದುರು 6 ರನ್ಗಳಿಂದ ಆಘಾತಕಾರಿ ಸೋಲು ಕಂಡಿದ್ದ ಆತಿಥೇಯ ಕರ್ನಾಟಕ ತಂಡ ಪ್ರತಿಷ್ಠಿತ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯ ತನ್ನ ಮೂರನೇ ಲೀಗ್ ಪಂದ್ಯದಲ್ಲಿ ಗೋವಾ ವಿರುದ್ಧ ಬೃಹತ್ ಇನಿಂಗ್ಸ್ ಮುನ್ನಡೆ ಸಾಧಿಸಿದ್ದು, ಗೆಲುವಿಗಾಗಿ ಹೋರಾಡುತ್ತಿದೆ. ಉಪನಾಯಕ ಹಾಗೂ ಸ್ಥಳಿಯ ಪ್ರತಿಭೆ ನಿಕಿನ್ ಜೋಸ್ (107 ರನ್, 215 ಎಸೆತ, 6 ಬೌಂಡರಿ) ಜವಾಬ್ದಾರಿಯುತ ಶತಕ ಹಾಗೂ ವಿಕೆಟ್ ಕೀಪರ್-ಬ್ಯಾಟರ್ ಶರತ್ ಶ್ರೀನಿವಾಸ್ (49 ರನ್, 100 ಎಸೆತ, 4 ಬೌಂಡರಿ) ಉಪಯುಕ್ತ ಬ್ಯಾಟಿಂಗ್ ನೆರವಿನಿಂದ ಆತಿಥೇಯ ತಂಡ ಮೊದಲ ಇನಿಂಗ್ಸ್ನಲ್ಲಿ ಬೃಹತ್ ಮೊತ್ತ ದಾಖಲಿಸಿದೆ.
ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್(ಗ್ಲೇಡ್ಸ್) ಮೈದಾನದಲ್ಲಿ 3ನೇ ದಿನವಾದ ಭಾನುವಾರ 4 ವಿಕೆಟ್ಗೆ 253 ರನ್ಗಳಿಂದ ಆಟ ಮುಂದುವರಿಸಿದ ಕರ್ನಾಟಕ ತಂಡ 9 ವಿಕೆಟ್ಗೆ 498 ರನ್ ಪೇರಿಸಿ ಪ್ರಥಮ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ 177 ರನ್ಗಳ ಮುನ್ನಡೆ ಸಾಧಿಸಿತು. ಪ್ರತಿಯಾಗಿ ಪ್ರವಾಸಿ ಗೋವಾ ತಂಡ ದಿನದಂತ್ಯಕ್ಕೆ ತನ್ನ ದ್ವಿತೀಯ ಇನಿಂಗ್ಸ್ನಲ್ಲಿ 27 ಓವರ್ಗಳಲ್ಲಿ 1 ವಿಕೆಟ್ಗೆ 93 ರನ್ ಪೇರಿಸಿದ್ದು, ಇನಿಂಗ್ಸ್ ಸೋಲು ತಪ್ಪಿಸಿಕೊಳ್ಳಲು ಇನ್ನೂ 84 ರನ್ ಗಳಿಸಬೇಕಿದೆ.
ಕರ್ನಾಟಕ ಮೂಲದ ಬ್ಯಾಟರ್ ಕೆ.ವಿ. ಸಿದ್ಧಾರ್ಥ್ (57 ರನ್*, 72ಎಸೆತ, 8ಬೌಂಡರಿ, 1 ಸಿಕ್ಸರ್ ) ಹಾಗೂ ಸುಯಶ್ ಪ್ರಭುದೇಸಾಯಿ (34*) ಅಂತಿಮ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಮಯಾಂಕ್ ಅಗರ್ವಾಲ್ ಬಳಗ ಸೋಮವಾರ ಗೋವಾ ತಂಡವನ್ನು ಬೇಗನೆ ಆಲೌಟ್ ಮಾಡಿ ಪೂರ್ಣ 6 ಅಂಕ ಸಂಪಾದಿಸಲು ಹೋರಾಡಲಿದೆ.
ಗೋವಾ ಬೌಲರ್ಗಳ ಬೆವರಿಳಿಸಿದ ನಿಕಿನ್-ಶರತ್ ಜೋಡಿ
ಎರಡನೇ ದಿನ ಪ್ರವಾಸಿ ಗೋವಾ ತಂಡದ ಬೌಲರ್ಗಳನ್ನು ಕಾಡಿದ ಕರ್ನಾಟಕದ ಬ್ಯಾಟರ್ಗಳು, ಮೂರನೇ ದಿನವೂ ಸ್ಥಿರ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದರು. ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದ ನಿಕಿನ್ ಜೋಸ್ ಮತ್ತು ಶರತ್ ಶ್ರೀನಿವಾಸ್ ಜೋಡಿ 5ನೇ ವಿಕೆಟ್ಗೆ 230 ಎಸೆತಗಳಲ್ಲಿ 148 ದಾಖಲಿಸಿ ಬೇರ್ಪಟ್ಟಿತು. 279 ನಿಮಿಷ ಕ್ರೀಸ್ನಲ್ಲಿದ್ದು ಜವಾಬ್ದಾರಿಯುತ ಬ್ಯಾಟಿಂಗ್ ಮೂಲಕ ಗಮನ ಸೆಳೆದ ಈ ಜೋಡಿ 82ನೇ ಓವರ್ನಲ್ಲೇ ತಂಡದ ಮೊತ್ತವನ್ನು 325ಕ್ಕೆ ಹೆಚ್ಚಿಸಿ ಮುನ್ನಡೆ ತಂದುಕೊಟ್ಟಿತು. ಶರತ್ ಪೆವಿಲಿಯನ್ ಸೇರಿದ ಬಳಿಕ ನಿಕಿನ್ ಜತೆಗೂಡಿದ ಆಲ್ರೌಂಡರ್ ಶುಭಾಂಗ್ ಹೆಗ್ಡೆ(36) ಲೀಲಾಜಾಲವಾಗಿ ಬ್ಯಾಟ್ ಬೀಸುವ ಮೂಲಕ ಗಮನ ಸೆಳೆದರು. 73 ನಿಮಿಷ ಕ್ರೀಸ್ನಲ್ಲಿದ್ದ ಈ ಜೋಡಿ 6ನೇ ವಿಕೆಟ್ಗೆ 121 ಎಸೆತಗಳಲ್ಲಿ 72 ರನ್ ಗಳಿಸಿ ಕರ್ನಾಟಕ ಬೃಹತ್ ಮೊತ್ತ ಪೇರಿಸಲು ಕಾರಣರಾದರು. ಶುಭಾಂಗ್ ಹೆಗ್ಡೆ ಗೋವಾ ತಂಡದ ನಾಯಕ ದರ್ಶನ್ ಮಿಸಾಲ್ಗೆ ಹಾಗೂ ಎಂ.ವೆಂಕಟೇಶ್(3), ಮೋಹತ್ ಬೌಲಿಂಗ್ನಲ್ಲಿ ಎಲ್ಬಿಗೆ ಬಲಿಯಾದರು. ವೈಶಾಕ್, ದರ್ಶನ್ ಬೌಲಿಂಗ್ನಲ್ಲಿ ಸಮರ್ಗೆ ಕ್ಯಾಚ್ ನೀಡಿದರು. ದರ್ಶನ್ ಮಿಸಾಲ್ 6 ಹಾಗೂ ಮೋಹಿತ್ 3 ವಿಕೆಟ್ ಕಬಳಿಸಿ ಗಮನ ಸೆಳೆದರು.
ನಿಕಿನ್ ಜೋಸ್ ಎರಡನೇ ಶತಕ
ನಿಕಿನ್ ಜೋಸ್ ತಾಳ್ಮೆಯ ಬ್ಯಾಟಿಂಗ್ ಮೂಲಕ ಶತಕ ಸಿಡಿಸಿ ಇನಿಂಗ್ಸ್ ಮುನ್ನಡೆಗೆ ನೆರವಾದರು. 119ನೇ ಓವರ್ನಲ್ಲಿ ಸಿಂಗಲ್ ಕಸಿಯುವ ಮೂಲಕ ಶತಕ ಬಾರಿಸಿದರು. ಈ ವೇಳೆಗೆ 265 ನಿಮಿಷಗಳಲ್ಲಿ 204 ಎಸೆತ ಎದುರಿಸಿ 6 ಬೌಂಡರಿಗಳನ್ನು ಬಾರಿಸಿದರು. ಇದು ರಣಜಿಯಲ್ಲಿ ನಿಕಿನ್ ಜೋಸ್ ಅವರ 2ನೇ ಶತಕವಾಗಿದೆ. ಕಳೆದ ವರ್ಷ ಸೌರಾಷ್ಟ್ರದ ವಿರುದ್ಧ ಶತಕ ಸಿಡಿಸಿದ್ದರು.
ಬ್ಯಾಟಿಂಗ್ಗೆ ಬಾರದ ಮನೀಷ್
ಮೊದಲ ದಿನ ಫೀಲ್ಡಿಂಗ್ ವೇಳೆ ಗಾಯಗೊಂಡಿದ್ದ ಮನೀಷ್ ಪಾಂಡೆ 2ನೇ ದಿನ ಮೈದಾನಕ್ಕೆ ಇಳಿದಿರಲಿಲ್ಲ. 3ನೇ ದಿನ ಅವರು ಬ್ಯಾಟಿಂಗ್ಗೂ ಬರಲಿಲ್ಲ. ಇದರಿಂದ ಕರ್ನಾಟಕ 9ನೇ ವಿಕೆಟ್ ಬಿದ್ದಾಗ ಇನಿಂಗ್ಸ್ ಡಿಕ್ಲೇರ್ ಘೋಷಿಸಿತು.
ಗೋವಾ: 321 ಮತ್ತು 27 ಓವರ್ಗಳಲ್ಲಿ 1 ವಿಕೆಟ್ಗೆ 93 (ಇಶಾನ್ 1, ಪ್ರಭುದೇವ ದೇಸಾಯಿ 34*, ಕೆ.ವಿ.ಸಿದ್ದಾರ್ಥ್ 57*, ವೈಶಾಕ್ 18ಕ್ಕೆ 1). ಕರ್ನಾಟಕ: 126.4 ಓವರ್ಗಳಲ್ಲಿ 9 ವಿಕೆಟ್ಗೆ 498 ಡಿಕ್ಲೇರ್(ನಿಕಿನ್ ಜೋಸ್ 107, ಶರತ್ ಶ್ರೀನಿವಾಸ್ 49, ಶುಭಾಂಗ್ 36, ಎಂ.ವೆಂಕಟೇಶ್ 3, ವೈಶಾಕ್ 8, ಕೌಶಿಕ್ 9*, ದರ್ಶನ್ ಮಿಸಾಲ್ 134ಕ್ಕೆ 6, ಮೋಹಿತ್ 119ಕ್ಕೆ 3).