ಕ್ರೀಡೆ

ಎಎಸ್​ಎಲ್​ಟಿ20: ಬೆಂಗಳೂರು ಈಗಲ್ಸ್​, ಚೆನ್ನೈ ಲೆಜೆಂಡ್ಸ್​ಗೆ ಜಯ

ಬೆಂಗಳೂರು: ಆತಿಥೇಯ ಬೆಂಗಳೂರು ಈಗಲ್ಸ್​ ತಂಡ 3ನೇ ಆವೃತ್ತಿಯ ಎಬಿಲಿಟಿ ಸ್ಪೋರ್ಟ್ಸ್​ ಲೀಗ್​ (ಎಎಸ್​ಎಲ್​) ಅಂಗವಿಕಲರ ಟಿ20 ಕ್ರಿಕೆಟ್​ ಟೂರ್ನಿಯಲ್ಲಿ ಸತತ 2ನೇ ಗೆಲುವು ದಾಖಲಿಸಿದೆ. ಬುಧವಾರ ನಡೆದ ಇನ್ನೆರಡು ಪಂದ್ಯಗಳಲ್ಲಿ ಚೆನ್ನೈ ಲೆಜೆಂಡ್ಸ್​ ತಂಡ ಲಖನೌ ಮಾವೆರಿಕ್ಸ್​ ಎದುರು 9 ವಿಕೆಟ್​ಗಳಿಂದ ಗೆಲುವು ಸಾಧಿಸಿದರೆ, ಮುಂಬೈ ಫೈಟರ್ಸ್​ ತಂಡ ಚಂಡೀಗಢ ಲಯನ್ಸ್​ ಎದುರು 5 ರನ್​ಗಳಿಂದ ಪರಾಭವಗೊಂಡಿತು.

ಬೆಂಗಳೂರು ಹೊರವಲಯದ ಆಲೂರಿನ ಕೆಎಸ್​ಸಿಎ ಮೈದಾನದಲ್ಲಿ ನಡೆಯುತ್ತಿರುವ ಟೂರ್ನಿಯ 2ನೇ ದಿನದ ಮೊದಲ ಪಂದ್ಯದಲ್ಲಿ ಬೆಂಗಳೂರು ಈಗಲ್ಸ್​ ತಂಡ ಗ್ವಾಲಿಯರ್​ ವಾರಿಯರ್ಸ್​ ವಿರುದ್ಧ 34 ರನ್​ಗಳಿಂದ ಗೆಲುವು ಸಾಧಿಸಿತು. ಬೆಂಗಳೂರು ಈಗಲ್ಸ್​ ತಂಡ ಮೊದಲ ದಿನ ಲಖನೌ ಮಾವೆರಿಕ್ಸ್​ ವಿರುದ್ಧ ಗೆದ್ದಿತ್ತು.

ಹರೀಶ್​ಕುಮಾರ್ (55), ಶೈಲೇಶ್​ ಯಾದವ್​ (50) ಉತ್ತಮ ಆಟದಿಂದ ಬೆಂಗಳೂರು ಈಗಲ್ಸ್ ತಂಡ 15 ಓವರ್​ಗಳಲ್ಲಿ 4 ವಿಕೆಟ್​ಗೆ 172 ರನ್​ ಪೇರಿಸಿತು. ಪ್ರತಿಯಾಗಿ ಗ್ವಾಲಿಯರ್​ ವಾರಿಯರ್ಸ್ ತಂಡ 15 ಓವರ್​ಗಳಲ್ಲಿ 5 ವಿಕೆಟ್​ಗೆ 138 ರನ್​ ಗಳಿಸಲಷ್ಟೇ ಶಕ್ತವಾಯಿತು.